ಟೋಕಿಯೋ ಒಲಿಂಪಿಕ್ಸ್ನ ಮಹಿಳಾ 53 ಕೆಜಿ ವಿಭಾಗದಲ್ಲಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೈ ಫಾಲ್ ಮೂಲಕ ಎದುರಾಳಿಗೆ ಶರಣಾಗಿ ಸ್ಪರ್ಧೆಯಿಂದ ಹೊರಬಿದ್ದಿದ್ದ ವಿನೇಶ್ ಫೋಗಾಟ್, ಇದೇ ವೇಳೆ ಭಾರತೀಯ ಕುಸ್ತಿ ಒಕ್ಕೂಟದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಆಗಸ್ಟ್ 16ರ ಒಳಗೆ ಉತ್ತರ ನೀಡುವಂತೆ ಡಬ್ಲ್ಯುಎಫ್ಐ ನೋಟೀಸ್ ನೀಡಿದ್ದು, ತಾತ್ಕಾಲಿಕ ಅಮಾನತು ಶಿಕ್ಷೆ ಜಾರಿಗೊಳಿಸಿದೆ.
ಕೋಚ್ ವಾಲರ್ ಅಕೋಸ್ ಜೊತೆ ಹಂಗರಿಯಲ್ಲಿ ಅಭ್ಯಾಸ ನಡೆಸಿದ್ದ ವಿನೇಶ್ ನೇರವಾಗಿ ಟೋಕಿಯೋ ಒಲಿಂಪಿಕ್ಸ್ಗೆ ತೆರಳಿದ್ದರು. ಜೊತೆಗೆ ಕ್ರೀಡಾ ಗ್ರಾಮದಲ್ಲಿ ಭಾರತೀಯ ಕುಸ್ತಿಪಟುಗಳ ಜೊತೆಗೆ ಉಳಿದುಕೊಳ್ಳಲು ಮತ್ತು ಅವರೊಟ್ಟಿಗೆ ಅಭ್ಯಾಸದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು. ಅಷ್ಟೇ ಅಲ್ಲದೆ ಭಾರತೀಯ ಅಥ್ಲೀಟ್ಸ್ಗಳಿಗೆ ಕಿಟ್ ಒದಗಿಸುವ ಅಧಿಕೃತ ಪ್ರಾಯೋಕತ್ವ ಹೊಂದಿದ್ದ ಶಿವನರೇಶ್ ಸಂಸ್ಥೆ ನೀಡಿದ್ದ ಸಮವಸ್ತ್ರ ತೊಡಲು ಕೂಡ ನಿರಾಕರಿಸಿದ್ದರು. ಅಲ್ಲದೆ ನೈಕಿ ಸಂಸ್ಥೆಯ ಸಿಂಗ್ಲೆಟ್ ತೊಟ್ಟು ತಮ್ಮ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು.
“ಇದು ದೊಡ್ಡ ಮಟ್ಟದ ಶಿಸ್ತು ಉಲ್ಲಂಘನೆ ಆಗಿದೆ. ಹೀಗಾಗಿ ತಾತ್ಕಾಲಿಕವಾಗಿ ಅವರನ್ನು ಅಮಾನತು ಮಾಡಲಾಗಿದ್ದು, ಯಾವುದೇ ಕುಸ್ತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದೆ. ಈ ಬಗ್ಗೆ ಉತ್ತರ ನೀಡುವವರೆಗೂ ಅವರು ಯಾವುದೇ ರಾಷ್ಟ್ರೀಯ ಮತ್ತು ದೇಶಿ ಕುಸ್ತಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತ್ತಿಲ್ಲ. ಈ ಬಗ್ಗೆ ಅವರ ಉತ್ತರ ಬಂದ ನಂತರ ಡಬ್ಲ್ಯುಎಫ್ಐ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ,” ಎಂದು ಕುಸ್ತಿ ಒಕ್ಕೂಟ ತಿಳಿಸಿದೆ