ಮಂಗಳೂರು: ತುಂಬೆ ಡ್ಯಾಂನಲ್ಲಿ ಮಂಗಳೂರು ನಗರಕ್ಕೆ ಕೇವಲ 20 ದಿನಕ್ಕೆ ಪೂರೈಕೆ ಮಾಡುವಷ್ಟು ನೀರಿನ ಸಂಗ್ರಹವಿದ್ದು, ಪ್ರಸ್ತುತ ನೀರು ಪಂಪಿಂಗ್ ಮಾಡದೇ ಇದ್ದರೂ ಕೂಡ ಪ್ರತಿದಿನ 4 ಸೆಂಟಿಮೀಟರ್ನಷ್ಟು ಇಳಿಕೆಯಾಗುತ್ತಿದೆ. ತುಂಬೆಯಿಂದ ಪ್ರತಿದಿನ ಪಂಪಿಂಗ್ ಮಾಡುತ್ತಿರುವ ವೇಳೆ 8 ಸಂಟಿಮೀಟರ್ನಷ್ಟು ನೀರು ಇಳಿಕೆಯಾಗುತ್ತಿತ್ತು. ಆದರೀಗ ಪಂಪಿಂಗ್ ಮಾಡದೇ 4 ಸೆಂಟಿಮೀಟರ್ ಇಳಿಕೆಯಾಗುತ್ತಿರುವುದು ನೀರಿನ ಆವಿಯ ಪ್ರಮಾಣವನ್ನು ತಿಳಿಸುವಂತಿದೆ.
ಒಳಹರಿವು ಇಲ್ಲ: ಮಳೆಯಾಗದಿರುವ ಹಿನ್ನಲೆಯಲ್ಲಿ ತುಂಬೆ ಅಣೆಕಟ್ಟಿಗೆ ನೀರಿನ ಒಳಹರಿವು ಇಲ್ಲ. ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನಲೆಯಲ್ಲಿ ರೇಶನಿಂಗ್ ಅನಿವಾರ್ಯವಾಗಬಹುದು. ಅದರ ಸ್ವರೂಪ ಹೇಗಿರಲಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿ ಸಭೆ ನಡೆಸಲಿದ್ದಾರೆ ಎಂದು ಮನಪಾ ಆಯುಕ್ತ ಚೆನ್ನಬಸಪ್ಪ ತಿಳಿಸಿದ್ದಾರೆ.
ಮತ್ತೊಂದೆಡೆ ಸುಬ್ರಹ್ಮಣ್ಯ ಕಡಬ ಭಾಗದಲ್ಲಿ ಮಳೆಯಾಗಿದ್ದರೂ ನೀರಿನ ಒರತೆ ಹುಟ್ಟದ ಕಾರಣ ನದಿಗಳು ಇನ್ನು ಜೀವಂತಿಕೆ ಪಡೆದಿಲ್ಲ. ಅದರಿಂದ ಡ್ಯಾಂಗಳಿಗೆ ಸೇರುವ ನೀರಿನ ಪ್ರಮಾಣವು ಅತಿಕಡಿಮೆ ಸ್ಥಿತಿಯಲ್ಲಿದೆ.