News Karnataka Kannada
Monday, May 06 2024
ಸಂಪಾದಕರ ಆಯ್ಕೆ

ತುಳಿತಕ್ಕೊಳಗಾದವರ ಪಾಲಿಗೆ ಮಹಾಬೆಳಕು ಅಂಬೇಡ್ಕರ್

Dr. B R Ambedkar
Photo Credit :

ಅವತ್ತು ಆ ಹುಡುಗ ಅಸ್ಪೃಶ್ಯತೆಯನ್ನು, ಬಡತನವನ್ನು ಮೆಟ್ಟಿ ನಿಂತು, ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತ ಮರೆಯಲಾರದ ಚೇತನವೊಂದು ಸೃಷ್ಟಿ ಯಾಗುತ್ತಿರಲಿಲ್ಲವೇನೋ? ಇವತ್ತು ಡಾ.ಬಿ.ಆರ್.ಅಂಬೇಡ್ಕರ್ ಎಂಬ ಹೆಸರು ಹೇಳುತ್ತಿದ್ದಂತೆಯೇ ಮೈರೋಮಾಂಚನಗೊಳ್ಳುತ್ತದೆ.

ಅಂಬೇಡ್ಕರ್‌ರವರು ಬಾಲ್ಯದಲ್ಲಿ ಅನುಭವಿಸಿದ ಆ ನೋವು ಒಂದೇ ಎರಡೇ ಅದನ್ನು ಹೇಳುತ್ತಾ ಹೋದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಇಷ್ಟೊಂದು ನೋವನ್ನು ಅವರು ಅನುಭವಿಸಿದ್ದರಾ? ಎಂಬ ಸಂಕಟ ಎದೆಯಲ್ಲಿ ಢವಗುಟ್ಟುತ್ತದೆ.

ಆಗಿನ್ನೂ ಅಂಬೇಡ್ಕರ್‌ರವರಿಗೆ ಏಳೆಂಟು ವರ್ಷದ ಪ್ರಾಯ. ಒಂದು ದಿನ ಆ ಪುಟ್ಟ ಹುಡುಗ ತನ್ನ ತಂದೆಯನ್ನು ನೋಡಲು ಎತ್ತಿನ ಗಾಡಿಯಲ್ಲಿ ಕುಳಿತು ಸಾಗುತ್ತಿದ್ದ. ಗಾಡಿ ಸ್ವಲ್ಪ ದೂರ ಹೋಗಿರಬೇಕಷ್ಟೆ. ಗಾಡಿಯವನಿಗೆ ಆ ಹುಡುಗ ದಲಿತ ಎಂಬುದು ತಿಳಿದು ಹೋಯಿತು ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಹುಡುಗನನ್ನು ಕೆಳಕ್ಕೆ ತಳ್ಳಿ ಹಾಕಿ ಮುನ್ನಡೆದ ಆ ಪುಟ್ಟ ಹುಡುಗನ ಮನಸ್ಸು ಹೇಗಾಗಿರಬಹುದು? ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಥಳಿಸಿದರು. ಆಕಸ್ಮಿಕವಾಗಿ ಮಳೆ ಬಂದಿದ್ದರಿಂದ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿ ಹಾಕಿದ್ದಳು.

ಕ್ಷೌರಿಕ ಕೂದಲನ್ನು ಮುಟ್ಟದೆ ಹಿಂದಕ್ಕೆ ಕಳುಹಿಸಿದ್ದನು. ಹೀಗೆ ಒಂದೇ ಎರಡೇ? ನೂರಾರು ಅವಮಾನ, ಹಿಂಸೆ ಆ ಹುಡುಗನನ್ನು ಇನ್ನಿಲ್ಲದಂತೆ ಕಾಡಿತ್ತು. ನಾವು ಮನುಷ್ಯರೆ, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ್ದೇ ತಪ್ಪಾಯಿತಾ? ಎಂಬ ಭಾವನೆ ಅವತ್ತು ಆ ಹುಡುಗನನ್ನು ಕಾಡಿತ್ತು. ಅದಕ್ಕೆಲ್ಲಾ ಹೆದರಿ ಆ ಹುಡುಗ ಮುದುರಿ ಕೂತಿದ್ದರೆ ಇವತ್ತು ಜಗತ್ತೇ ಹೆಮ್ಮೆಯಿಂದ ಕೊಂಡಾಡುವ ಚೇತನವೊಂದು ನಮ್ಮ ಮುಂದೆ ಇರುತ್ತಿರಲಿಲ್ಲ. ಆದರೆ ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನ ಶಿಲ್ಪಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ನಿಂತಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891ರ ಏಪ್ರಿಲ್ 14ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್‌ಜೀ ಸಕ್ಬಾಲ್, ತಾಯಿ ಶ್ರೀಮತಿ ಭೀಮಾಬಾಯಿರವರ ಪುತ್ರರಾಗಿ ಜನಿಸಿದರು.

ಅವತ್ತಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಅಂಬೇಡ್ಕರರಿಗೆ ಚಿಕ್ಕಂದಿನಿಂದಲೇ ಓದಬೇಕು ಏನನ್ನಾದರೂ ಸಾಧಿಸಬೇಕು ಎಂಬ ಛಲ ಇತ್ತು ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಇದರ ಜೊತೆಗೆ ಸಂಸ್ಕೃತ ಕಲಿಯಬೇಕೆಂಬ ಮಹದಾಸೆಯಿತ್ತು. ಆದರೆ ಇದಕ್ಕೆ ಕೀಳ್ಜಾತಿಯವರು ಇದನ್ನು ಓದಬಾರದೆಂದು ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ ಇವರು ಬಗ್ಗಲಿಲ್ಲ ಬದಲಿಗೆ ಹಠತೊಟ್ಟವರಂತೆ ಸಂಸ್ಕೃತ ಕಲಿತು ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ’ಆಧುನಿಕ ಮನು’ ಎಂಬ ಕೀರ್ತಿಗೆ ಪಾತ್ರರಾದರು. ಇದನ್ನು ಮಾತ್ರ ಯಾರಿಂದಲೂ ತಡೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಹಠವಾದಿ ಅಂಬೇಡ್ಕರರ ಭೀಮಶಕ್ತಿ ಅಂಥಾದ್ದು!.

1907ರಲ್ಲಿ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಬೇಡ್ಕರರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆ ನಂತರ ಅವರು ಮುಂಬೈನ ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಮುಗಿಸಿ 1913 ರಲ್ಲಿ ಬಿ.ಎ. ಪದವೀಧರರಾದರು. ನಂತರ ಬರೋಡ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಆದರೆ ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮಲ್ಲೇ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಇವರನ್ನು ಅಮೇರಿಕಾಕ್ಕೆ ಕಳುಹಿಸಿದರು. ಅಲ್ಲಿ ಎಂ.ಎ. ಪದವಿಯೊಡನೆ ಪಿಹೆಚ್‌ಡಿಯನ್ನು ಗಳಿಸಿ 1917ರ ಆಗಸ್ಟ್ 21ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಜ್ಞಾನದಾಹ ಇಂಗಿರಲಿಲ್ಲ. ಹಾಗಾಗಿ ಪುನಃ 1920ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನಿಗೆ ಹೋದ ಇವರು 1922ರಲ್ಲಿ ಬ್ಯಾರಿಸ್ಟರ್ ಎಂಬ ಪದವಿಯೊಡನೆ ಭಾರತಕ್ಕೆ ವಾಪಾಸ್ಸಾದರು.

ವಿದೇಶದಲ್ಲಿ ಕಲಿತು ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿ ಅಂಬೇಡ್ಕರ್ ಅವರು ಸ್ವದೇಶಕ್ಕೆ ಬಂದಿದ್ದರೂ ಇಲ್ಲಿ ಮಾತ್ರ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸುತ್ತಿತ್ತು. ಆಗ ಅಂಬೇಡ್ಕರರು ಮೂಕನಾಯಕ ಎಂಬ ಪತ್ರಿಕೆಯನ್ನು ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆಯ ವಿರುದ್ಧ ಜನಜಾಗೃತಿಗೆ ನಿಂತರು. ಬಹಿಷ್ಕೃತ ಹಿತಕಾರಿಣಿ ಎಂಬ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆಯ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ತರನಾದ ಹೋರಾಟ ಮಾಡುತ್ತಾ ದಲಿತರ ಪಾಲಿಗೆ ಅಕ್ಷರಶಃ ತೋರುಬೆರಳಾಗಿದ್ದರು. ಇವರ ಚೌದರ್ ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂತಾದ್ದು.

ಹೀಗೆ ದಲಿತರ ಪರ ಇವರ ಕ್ರಾಂತಿ ಕಹಳೆ ನಿಧಾನವಾಗಿ ದೇಶದೆಲ್ಲೆಡೆ ಮೊಳಗತೊಡಗಿತ್ತು. ಅದೇ ಕಾಲಕ್ಕೆ ಎರಡನೇ ಮಹಾಯುದ್ದದ ಕಾಲದಲ್ಲಿ ಬ್ರಿಟಿಷರು ಕೆಲವು ಭಾರತೀಯರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗ ಅದರಲ್ಲಿ ಪ್ರಥಮ ಪ್ರಾಶಸ್ತವ್ಯವೇ ಅಂಬೇಡ್ಕರವರಿಗೆ ದೊರಕಿತ್ತು. ಹಾಗೆಯೇ ಭಾರತ ಸ್ವಾತಂತ್ರ್ಯಗಳಿಸಿದ ನಂತರ ನೆಹರು ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರರು ಭಾರತ ದೇಶಕ್ಕೆ ಸಶಕ್ತ ’ಸಂವಿಧಾನ’ ನೀಡಿದ ಶಿಲ್ಪಿಯಾಗಿದ್ದು ಇದು ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವಾಗಿದ್ದು ಇದು ಇವರಿಗೆ ಸಂದ ಮಹಾಗೌರವವೇ ಸರಿ.

ಅಧಿಕಾರ ಇರಲಿ ಇಲ್ಲದಿರಲಿ ಅಂಬೇಡ್ಕರ್‌ರವರು ಹೆಜ್ಜೆ ಇಟ್ಟಲೆಲ್ಲಾ ಅಸ್ಪೃಶ್ಯತಾ ನಿವಾರಣೆಗಾಗಿಯೇ ಅವರ ಹೆಜ್ಜೆಗಳು ತುಡಿಯುತ್ತಿದದವು. ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು.

ಭಾರತದೇಶದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿ ಪುರುಷ ಜನಿಸಿದ್ದರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂರಂಥ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹ ದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಸಾಧ್ಯವಾದದ್ದು.

ಅಂಬೇಡ್ಕರರ ಇಡೀ ಜೀವನ ಅಸ್ಪೃಶ್ಯತೆರೆನಿಸಿಕೊಂಡವರಿಗೆ ನ್ಯಾಯವನ್ನೂ ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು. ಇದರಲ್ಲಿ ಅವರು ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಆದರೂ ಹಿಂದೂ ಧರ್ಮದ ಅಸಮಾನತೆಯಿಂದ ರೋಷಿಹೋಗಿದ್ದ ಅವರು ಬುದ್ದನ ಕಾರುಣ್ಯದಲ್ಲಿ ಆಕರ್ಷಿತರಾಗಿ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ತಮ್ಮ ಪತ್ನಿ ಡಾ. ಶಾರದಾ ಸೇರಿದಂತೆ ತಮ್ಮ ಅಪಾರ ಅಭಿಮಾನಿಗಳೊಡನೆ ಬೌದ್ಧಧರ್ಮಕ್ಕೆ ಸೇರಿದರು.

1956ರ ಡಿಸೆಂಬರ್ 6ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರರಿಗೆ ಮರಣೋತ್ತರವಾಗಿ ಭಾರತ ಸರ್ಕಾರವು 1991ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬೇಡ್ಕರ್ ಇವತ್ತು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರು ತಾವು ಮಾಡಿದ ಮಹತ್ ಸಾಧನೆಯಿಂದ ನೆನಪಾಗುತ್ತಲೇ ಇರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು