News Karnataka Kannada
Monday, April 29 2024
ಅಂಕಣ

ಸಾವಿರದ ಸಮರ ಸೌಗಂಧಿಕೆ

Photo Credit :

ಸಾವಿರದ ಸಮರ ಸೌಗಂಧಿಕೆ

ಹೂವಿನಿಂದೆನಗಧಿಕ | ನೀವೇ ನನ್ನ
ಜೀವನ ಸೌಗಂಧಿಕಾ |
ಭಾವದ ಶೃಂಗಾರ ಜೀವ ಜೀವನವೆಲ್ಲ ||
ನೀವು ಹೂವಿದು ಕ್ಷಣಿಕ || ||

ಬದರಿಕಾಶ್ರಮದಲ್ಲಿ ಎಲ್ಲರಿಂದಲೂ ದೂರ ಸರಿದು ಬಂಡೆಯನ್ನೇ ತನ್ನ ಜೀವನ ಸಂಕೇತವನ್ನಾಗಿಸಿಕೊಂಡು ಚಿಂತಾಕ್ರಾಂತನಾಗಿ ಕುಳಿತ ವಾಯು ಪುತ್ರನಿಗೆ ಪೂರ್ಣೇಂದು ಮುಖಿ ಪ್ರಫುಲ್ಲ ಮಾನಸೆಯಾಗಿ ಶಕ್ತಿತುಂಬಲೆಳಸುವ ದೃಶ್ಯ. ಧರ್ಮರಾಯನ ನಿರ್ದೇಶಕ್ಕೆ ಆನತನಾದ ಬಲಭೀಮ ಈ ಹಿಂದೆ “ಉಂಡ ಬವಣೆಗಳನ್ನು” ನೆನೆದುಕೊಂಡು ” ಗಂಡುಗಲಿಗೀಪರಿಯ ಭಂಡಬಾಳುವೆಯಾಯ್ತು” ಎಂದು ಏನೂ ಮಾಡಲಾಗದೆ ತನ್ನ ಬದುಕಿಗೊಂದು ಅರ್ಥ ಕೊಡಲಾಗದೆ ದೀನಾವಸ್ಥೆಯಿಂದ ಕಾಲಹರಣ ಮಾಡುತ್ತಿದ್ದುದನ್ನು ಕಂಡು “ನೊಂದಿವರು ಕುಗ್ಗಿದರೆ ಖೂಳಕೌರವಗೆಂದ ಭಾಷೆಗಳು ಬಂಜೆಯಹವು, ಕುಂದೆ ಮನ ನಿರ್ವೀರ್ಯವಾಪುದು” ಎಂದು ಯೋಚಿಸಿ ಚಿಂತಿಸುತಿರ್ಪ ಕಾಂತನನು ದೂರದಿಂದಲೇ ಕಂಡು ಯೋಜಿಸಿ ಕ್ಷತ್ರಿಯನಿಗೆ ಕ್ಷಾತ್ರತೇಜಸ್ಸನ್ನು ನೀಡಲು ಕ್ಷತ್ರಿಯಾಣಿಯಾದ ಪಾಂಚಾಲೆ “ಬಂಡೆಗೊರಗಿ ಬಂಡೆಯಂತೆ ಕುಳಿತ ಕಲಿಭೀಮನೆಡೆಗೆ ಹೂವನ್ನು ಬಯಸುವ ಭಾಮಿನಿಯಾಗಿ ಬರುವ ಅಪೂರ್ವ ಯಕ್ಷ ಪ್ರಸಂಗ “ಸಮರ ಸೌಗಂಧಿಕೆ”.

ಯಕ್ಷಗಾನ ಗುರುವಾಗಿ, ಕವಿಯಾಗಿ, ಸಂಶೋಧಕರಾಗಿ ಯಕ್ಷಗಾನ ಛಂದಸ್ಸು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಅನನ್ಯ ಛಾಪನ್ನು ಮೂಡಿಸುತ್ತಿರುವ ಛಂದೋವಾರಿಧಿ ಚಂದ್ರನೆಂಬ ನೆಗಳ್ತೆಗೆ ಪಾತ್ರರಾಗಿರುವ ಶ್ರೀ ಗಣೇಶ ಕೊಲೆಕಾಡಿಯವರ “ಸಮರ ಸೌಗಂಧಿಕೆ” ಯಕ್ಷಗಾನ‌ಲೋಕದ ಪ್ರಶಂಸನೀಯ ಪ್ರಸಂಗ. ಸೌಗಂಧಿಕೆಯ ಪ್ರಕರಣವನ್ನಾಧರಿಸಿ ಅನೇಕ ಕವಿಗಳು ಪ್ರಸಂಗವನ್ನು ರಚಿಸಿದ್ದರೂ ಕೊಲೆಕಾಡಿಯವರ ದೃಷ್ಟಿಕೋನ ಭಿನ್ನನೆಲೆಯನ್ನು ಹೊಂದಿರುವುದು ಪ್ರಸಂಗದ ಹಾಗೂ ಪ್ರಸಂಗಕರ್ತನ ವಿಶಿಷ್ಟತೆಯನ್ನು ತೋರ್ಪಡಿಸುತ್ತದೆ.

ಧರ್ಮವೆಂಬ ಆದಿತ್ಯನ ಜೀವನದಲ್ಲಿ ಮೋಡ ಮುಸುಕಿದ ವಾತಾವರಣ. ಪಾಂಡು ಸುತರ ಪಾಲಿಗೆ ಅಡವಿಯೆಂಬ ಅರಮನೆಯಲ್ಲಿ ಮುಂದೆ ನಡೆಯಬಹುದಾದ ಸಂಗ್ರಾಮಕ್ಕೆ ಬೇಕಾದ ಸರ್ವ ಸಿದ್ಧಿಯನ್ನು ಪಡೆದು ಸಿದ್ಧರಾಗಬೇಕಾಗಿದ್ದ ಕಾಲವದು. ಧರ್ಮನಂದನ ಧರ್ಮೋದ್ಧರಣಕ್ಕಾಗಿ ದ್ರುಪದ ನಂದನೆಯ ಜೊತೆಗೆ ಅನುಜರನ್ನು ಕೂಡಿಕೊಂಡು ದ್ವೈತ ವನದಲ್ಲಿ ಜೀವನವನ್ನು ಸಾಗಿಸುತ್ತಿದ್ದ ವೇಳೆ ಸಾಮರಸ್ಯ ಪೂರ್ಣ ಸಾತ್ವಿಕ ಬದುಕನ್ನೇ ಜೀವನದುದ್ದಕ್ಕೂ ಬಯಸಿದ ಯಮಸುತನಿಗೆ ಬಾದರಾಯಣರಿಂದ ಆಶಾದಾಯಕವಾದ ನುಡಿಗಳು ಹಾಗೂ ಪ್ರತಿಸ್ಮೃತಿ ಮಂತ್ರ ದೊರೆತ ಸಂದರ್ಭ. ವ್ಯಾಸರಿಂದಲೇ ಧರ್ಮಜಗೆ ಮುಂದಿನ ಪಥಗೋಚರಿಸಲು ಪಾರ್ಥನಿಗೆ ಪ್ರತಿಸ್ಮೃತಿ ಮಂತ್ರವನ್ನು ಬೋಧಿಸಿ ಪರಶಿವನ‌ಪರಮಾನುಗ್ರಹಕ್ಕೆ ಪಾತ್ರನಾಗಲು ಪಾರ್ಥನನ್ನು ಇಂದ್ರಕೀಲಕಕ್ಕೆ ಕಳುಹಿಸಿ ಧರ್ಮಜಾದಿಗಳು ಬದರಿಕಾಶ್ರಮದಲ್ಲಿ ಬಂದು ನೆಲೆ ನಿಂತ ದೃಶ್ಯವದು.

ಚಿಂತೆಯ ಮಹೋದಧಿಯೊಳು ಮುಳುಗಿ ಕುಳಿತಿದ್ದ ಮಾರುತತನಯನನ್ನು ನೋಡಿದ ಯಾಜ್ಞಸೇನಿಯ ನಾಸಿಕಕ್ಕೆ ದಿವ್ಯಸೌಗಂಧ ಸೋಕಲು ತಾನದೊಂದು ಬಯಕೆಯ ತಳೆದು ಇನಿಯನಿಗೆ ಹೇಳಲು ಮುಂದಾಗುವ ಕಥಾಹಂದರ ಪ್ರಸಂಗದ ನೆಲೆಗೂ ಭೀಮನ ಬದುಕಿನ ನೆಲೆಗೂ ಒಂದು ಹೊಸ ತಿರುವನ್ನು‌ ನೀಡುತ್ತದೆ.

ಏನಿದು ಕಾಂತ ಏನಿದು ಮೌನವು ||ಪಲ್ಲ||
ಏನಿದೆನ್ನಯ ಮಾವ ಪೊತ್ತು ತಂದಿಹ ಗಂಧ | ಕಾನನ ತುಂಬಿರಲು ||.||
ಮೂಗಿಲ್ಲದವರಂತೆ ಬಾಗಿ ಕುಳ್ಳಿರ್ಪಿರಿ | ಸೌಗಂಧ ಸುಖ ಕೊಡದೆ||
ಬಾಗುವೆ ಸುಮವಹುದದ ನೀವು ತಂದೀಯೆ | ಪೋಗಿ ಪುಡುಕಿರೆಂದಳು ||||

ವಲ್ಲಭನ ಮನವೆಂಬ ರಣರಂಗದೊಳಗೆ ಉಂಟಾದ ನಿಷ್ಕ್ರೀಯತೆಯನ್ನು ಕದಡಿ ತನ್ನ ಪ್ರೀತನಿಗೆ ವಾಸ್ತವ ಪ್ರಪಂಚದ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾದ ಕೃಷ್ಣೆ ಹೂವಿನ ಬಯಕೆಯನ್ನು ಮುಂದಿರಿಸಿಕೊಂಡು ಬಲಭೀಮನ ಮನವನ್ನು ಚಿಂತೆಯಿಂದ ವಿಕೇಂದ್ರೀಕರಿಸಲು ಪ್ರಯತ್ನಿಸುತ್ತಾಳೆ. ಆಗ ” ಪ್ರಮದೆಯರಿಗೆ ಬೇಗ ಸುಮದ ಸುವಾಸನೆ | ಘಮಿಸುವುದಂತೆ ತಾನರಸಿ|| ವಿಮಲೆ ಮೂಗಿದ್ದರೂ ಮೂಗಿಲ್ಲದವರಂತೆ | ನಮಗೆ ನಮ್ಮದೆ ಚಿಂತೆಯಿಹುದು ” ಎಂಬ ಮಾತನ್ನು ಕವಿ ಸರ್ವ ಸುಖವಿದ್ದರೂ ಚಿಂತೆಯ ಮುಂದೆ ಸುಖ ಪರಿಣಾಮವನ್ನು ನೀಡದು ಎಂದು ಭೀಮನ ಮೂಲಕ ಹೇಳಿಸಿ ಭೀಮನ ಮನೋಸ್ಥಿತಿಯನ್ನು ಭೀಮನ ಮೂಲಕವೇ ಚಿತ್ರಿಸಿದ್ದಾರೆ. ಮಿಡುಕುಳ್ಳವನಾದ ಭೀಮನೇ ಈ ರೀತಿಯಾಗಿ ಮಾತನಾಡಲು ಸಾಮಾನ್ಯ ಸತಿಯಂತೆ ವ್ಯವಹರಿಸಲು‌ ಮುಂದಾದ ದ್ರುಪದಜೆ ಭೀಮನ ಮಾತಿಗೂ, ಮನಸಿಗೂ ಪ್ರತಿನುಡಿಯೋ ಏನೋ ಎಂಬಂತೆ ” ಬೆಟ್ಟವ ಹೊತ್ತಂತೆ ನುಡಿವಿರಿ|
ಬಿಟ್ಟುಸತಿಯ ಚಿಂತೆ। ಇಷ್ಟಕು ನಾನೇ|ನಷ್ಟನು ಬೇಡಿದೆ| ಕಷ್ಟವೆ ನಿಮಗೆ |ನ್ನಿಷ್ಟವ ಸಲಿಪುದು ” ಎಂದಾಗ “ನನ್ನೊಲವಿನ ರಮಣಿ | ಗುಣಸಂಪನ್ನೆ ಮಹಾರಾಣಿ || ಉನ್ನತವೇನ್ ಸಾ |ಮಾನ್ಯ ಹೆಣ್ಣಿನೋಲ್ | ನಿನ್ನ ಬಯಕೆ ನೀ| ನೆನ್ನೊಳು ನುಡಿಯುವೆ ” ಎಂದು  ನುಡಿದಾಗ “ಸಣ್ಣದಲ್ಲ ಹೂವಿನಾಶೆ ಹೆಣ್ಣ ಬದುಕಿಗೆ” ಎಂದು ಪಾಂಚಾಲೆ ನುಡಿಯುವಲ್ಲಿ ದ್ರೌಪದಿಗೆ ಭೀಮನ‌ ಮೇಲಿರುವ ಅತೀವ ವಿಶ್ವಾಸವನ್ನು, ಗತಿಸಿದ ಕಾಲದ ಬಗೆಗಿನ ಸೂಕ್ಷ್ಮ ಚಿಂತನವನ್ನು, ವ್ಯಕ್ತಿಧರ್ಮದ ಅಪೇಕ್ಷೆಯನ್ನು ಪ್ರಸಂಗದುದ್ದಕ್ಕೂ ಕವಿ ವ್ಯಕ್ತಪಡಿಸುತ್ತಾನೆ.

ಮದನ ತಾತನಂದು ಭಾಮೆಗಾಗಿ ಕದನ ಮುಖದೊಳು ಪದುಳದಿಂದ ಪಾರಿಜಾತ ಒದಗಿಸಿದ ಪ್ರಕರಣವನ್ನು ಭೀಮನಿಗೆ ನೆನಪಿಸುವ ದ್ರೌಪದಿ ಪುಷ್ಪಾಪೇಕ್ಷೆಯನ್ನು ಬಿಡದೆ ಹಠ ಹಿಡಿಯುವ ದೃಶ್ಯ ಸತಿ ಪತಿಯ ಒಲವಿನ ದ್ಯೋತಕವಾಗಿ ಮೂಡಿ ಬರುತ್ತದೆ.

ಸಾಕು ಸಾಕು ನಿಮ್ಮ ನಾಟಕ |ಬಿಡಿ ಬಿಡಿ|

ಏಕೆನುಡಿವಿರಿರದೆ ಕೌತುಕ ||ಪಲ್ಲ||
ವಿಷವ ಮೆದ್ದು ಬದುಕಿಕೊಂಡು |
ಎಸೆದು ನಾಗಲೋಕ ಕಂಡ |
ಶಶಿ ಕುಲೇಂದ್ರ ಪುಣ್ಯ ಪುರುಷ |
ನಸಮ ಸಾಹಸಿ|ಸಾಕು ಸಾಕು ||||

ಪಂಚಪತಿಯರನ್ನು ಹೊಂದಿರುವ ಪಾಂಚಾಲೆಯ ಕುಸುಮದಾಸೆಯನ್ನು ಈಡೇರಿಸಲು “ನನ್ನಿಂದ ಅಸಾಧ್ಯ ” ಎಂಬಂತೆ ಪರೋಕ್ಷವಾಗಿ ಮಾತನಾಡಲು ಪ್ರಾರಂಭಿಸಿದ ಪೃಥಾಸುತನಿಗೆ ಪಾಂಚಾಲೆ ಖೇದಗೊಂಡು ನುಡಿಯುವ ಮಾತು ಭೀಮನ ಪರಾಕ್ರಮವನ್ನು ನೆನಪಿಸುವಲ್ಲಿಯೂ ಭೀಮನನ್ನು ಎಚ್ಚರಿಸುವಲ್ಲಿಯೂ ಪೂರಕವಾಗಿ ಒದಗಿಬರುತ್ತದೆ.

” ವಿಪರೀತ ಬಯಕೆಗಳೇಕೆ? ಘೋರ ವಿಪಿನದಿ ಶೃಂಗಾರಬೇಕೆ? ಸತ್ಯ ನೆಪವಲ್ಲ ಜಗದಲ್ಲಿ ಅಪವಾದ ಬರುವುದು ” ಎಂದು ಭೀಮನು ದ್ರುಪದ ನಂದನೆಯ ಬಳಿಯಲ್ಲಿ ತಿಳಿಸಿದಾಗ ” ವನವಾದರೇನು ನನಗೆ | ಹೂಪಡೆವ ಮನವಾಯ್ತು ಬೇಕದೆನಗೆ” ಎಂದು ಸಾಮಾನ್ಯ ವನಿತೆಯ ಹಾಗೆ ಕ್ಷತ್ರಿಯಾಣಿ ಹಠ ಹಿಡಿಯಲು ಪ್ರಾರಂಭಿಸಿದಾಗ ಭೀಮಸೇನ “ಛಲಬೇಡ ತೊಲಗು ಬರಿದೆ | ನಿನ್ನ ಹಠ| ಗೆಲಲಾರದೆಲೆಗೆ ಪ್ರಮದೆ|| ಅಳಿವುದನೆ ನೀ ಬಯಸಿದೆ | ತರಲಾರೆ ||
ತಿಳಿದು ನಡೆ ನಡೆ ನುಡಿಯದೆ” ಎಂದು ಗದರಲು ದ್ರೌಪದಿಯು ವಾಸ್ತವವನ್ನು ಅರಿತುಕೊಳ್ಳಲು ಮುಂದಾಗುತ್ತಾಳೆ. ಅಂದು ತುಂಬಿದ ಸಭೆಯಲ್ಲಾದ ಅವಮಾನಕ್ಕೆ ಸರಿಯಾದ ಪ್ರತೀಕಾರವನ್ನು ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ ಪತಿಯ ವಾಸ್ತವದ ಬಗೆಯನ್ನು ಕಂಡು ದುಃಖಿಸುತ್ತಾಳೆ.

ಪತಿಯ ಮಾತನು ಕೇಳಿ ಸುದತಿಯು |
ವ್ಯಥಿಸಿ ಕಂಬನಿದುಂಬಿ ಮರುಗುತ |
ಕ್ಷಿತಿಯೊಳಗೆ ಹತಭಾಗ್ಯಳಾದೆನು ಬಯಕೆ ಬರಿದಾಯ್ತು||
ಪತಿಗಳೈವರ ಮಡದಿಗೀಪರಿ |
ಗತಿಗಳಾದುದು ಬದುಕೆ ಮುಂದಿನ |
ಯತುನಗಳು ಸಾವೆಂದು ಮುಂಬರೆ ತಡೆದ ಪವನಜನು ॥೧॥

ಪಂಚಪತಿಗಳಿದ್ದರೂ ಅವಮಾನದ ಕಣ್ಣಿಯಲಿ ತಾನು ಬಂಧಿತಳಾಗಿರುವುದು ಆ ವಿಧಿಯ ವಿಡಂಬನೆಯೇ ಇರಬೇಕು ಎಂದು ಭಾವಿಸಿಕೊಂಡ ದ್ರೌಪದಿ ಹೂ ತರಲು ಮುಂದಾಗದಿರುವ ಪತಿ ಧರ್ಮಕ್ಕೆ ಸತ್ಫಥವನ್ನು ಎಂತು ತೋರಿಸಿಯಾನು? ಕೌರವರಿಂದೊದಗಿದ ದುಷ್ಟ ಕೃತ್ಯಗಳಿಗೆ ಎಂತು ಶಾಸ್ತಿಯನ್ನು ಮಾಡುವನೋ? ಎಂದು ಯೋಚಿಸಿ- ಚಿಂತಿಸಿ ದುಃಖತಪ್ತಳಾಗಿ “ತನಗಿನ್ನು ಸಾವೇ ಗತಿ” ಎಂದು ನಿರ್ಧರಿಸಿ ಮುಂದಡಿಯಿಡುತ್ತಾಳೆ.  ಆಕ್ಷಣ ಕಣ್ಣೀರ ಕೋಡಿಯನ್ನು ಹರಿಸುತ್ತಿದ್ದ ಇಂದುಮುಖಿಯನ್ನು ಕಂಡ ಧುರಧೀರನಾದ ಪವನಸುತ ತಡೆದು ನುಡಿವ ಸೊಗಸು ಪ್ರಸಂಗದ ಪ್ರಾಣಭಾಗ.

ಬಿಡು ಬಿಡೀ ಕಣ್ಣೀರ ನೋಡೆನು | ಜಡಜಮುಖಿಯೀರೇಳು ಲೋಕದಿ |
ಅಡಗಿರಲು ಬಿಡೆ ಪುಡುಕಿ ಸುಮವನು | ಕೊಡಿಪೆನೆಂದ||

ಪವಿತ್ರ ಮುಡಿಗಾದ ಅಪಮಾನಕ್ಕೆ ನಿಜವಾಗಿ ಸಿಂಗರಿಸಬೇಕಾಗಿರುವ ಹೂವು- ಕಲಿಭೀಮನ ಪ್ರತಿಜ್ಞೆ, ಭವಿತವ್ಯದಲ್ಲಿ ಒದಗಬಹುದಾದ ಕುರುಕ್ಷೇತ್ರದ ಕರಾಳಮುಖವನ್ನು ಕವಿ ಭೀಮನ ಮೂಲಕ ಹೇಳಿಸುವ ರೀತಿ ಸೃಜನಶೀಲತೆಯ ದ್ಯೋತಕವೇ ಸರಿ. ದ್ರೌಪದಿಯು ಅಪೇಕ್ಷಿಸಿದ ಪುಷ್ಪವನ್ನು ಕೊಡುವೆನೆಂದು ಎಂದಿನಂತೆ ಪ್ರತಿಜ್ಞೆ ಮಾಡಿದ ಭೀಮನನ್ನು ಕಂಡು ದ್ರೌಪದಿಯು ಪ್ರಮೋದ ಮುದಿತ ಹೃದಯದವಳಾಗುತ್ತಾಳೆ.

ಹೃದಯವಲ್ಲಭನೊಲಿಯಲರ್ತಿಯ |
ಹೃದಯದಿಂ ಹೃದಯೇಶ್ವರಿಯ ವರ |
ಹೃದಯವರಳಲು ಹೃದಯಗಳದೊಂದಾಯ್ತು ಬಿಗಿದಪ್ಪೆ||
ಮಧುರ ಭಾಷಿತ ಮಧುರ ಭಾವದಿ |
ಮಧುರ ಮೌನ ತಾಳಲಿನಿಯನ |
ಮಧುರ ಭಾಷಿಣಿ ಮುದದಿ ಕೈಬೀಸುತ್ತ ಬೀಳ್ಕೊಡಲು ||||

ಇನಿಯನ ಆಶಾದಾಯಕವಾದ ನುಡಿಯ ಬೆಡಗಿಗೆ ಮನಸೋತು ಭಾಷ್ಪಲೋಚನೆಯಾದ ದ್ರೌಪದಿ ಭೀಮನನ್ನು ಪುಷ್ಪಾನ್ವೇಷಣೆಗಾಗಿ ಕಳುಹಿಸಿಕೊಡುತ್ತಾಳೆ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.‌ ಮಾರುತ ತನ್ನ ಮಕ್ಕಳನ್ನು ಒಂದಾಗಿಸಬೇಕೆನ್ನುವ ಉದ್ದೇಶದಿಂದ ಪುಷ್ಪಗಂಧವನ್ನು ಪಸರಿಸಿದನೋ ಏನೋ ಎಂಬಂತೆ ಭಾಸವಾಗುವ ಮುಂದಿನ ದೃಶ್ಯಗಳಲ್ಲಿ ಪವನಸುತದ್ವಯರು ಮುಖಾಮುಖಿಯಾಗುವುದು ಭೀಮನ ಪಾಲಿನ ಸರ್ವೋದಯದ ಕ್ಷಣ. ಪುಷ್ಪಾನ್ವೇಷಣೆಯನ್ನೇ ಕೇಂದ್ರವಾಗಿರಿಸಿಕೊಂಡು ವನದಲ್ಲಿ ಗುಲ್ಲೆಬ್ಬಿಸಿಕೊಂಡು ಬರುತ್ತಿದ್ದ ತನ್ನನುಜನಿಗೆ ದುಡುಕು ಭೂಷಣವಲ್ಲವೆಂಬುದನ್ನು ಅರಿವಾಗಿಸಲು ದಾರಿಗಡ್ಡವಾಗಿ ಅಣಕದಿಂದ ಮುದಿ ಕೋಡಗನಾಗಿ ಬಿದ್ದು ಕೊಂಡ ಹನೂಮಂತನಿಗೆ ಭೀಮನು ಎದುರಾಗುತ್ತಾನೆ. ಬಿಡುದಾರಿಯನ್ನು ಎಂದು ಭೀಮನಿಂದ ಗರ್ವ ಭರಿತವಾದ ನುಡಿ ವ್ಯಕ್ತವಾಗಲು ಹನೂಮಂತ ” ದಾರಿಯಿದೆ ವಿಚಾರವಂತಗೆ ನೋಡೆ ಮದ ವಿಕಾರಿಗೇನು ಜ್ಞಾನಪಥವಿದೆ?” ಎಂದಾಗ ಬಲವೇ ಪ್ರಧಾನವೆನ್ನುವ ನೆಲೆಯಲ್ಲಿ ಅಡ್ಡಲಾಗಿ ಬಿದ್ದಿದ್ದ ಕಪಿಯನ್ನು ಬದಿಗೆ ಸರಿಸಲು ಹವಣಿಸಿದ ಭೀಮ ನೆಲಮುಖನಾಗುವ ದೃಶ್ಯ ಪ್ರಸಂಗದಲ್ಲಿ ಭೀಮನಿಗಾಗುವ ಜ್ಞಾನೋದಯದ ಸನ್ನಿವೇಶ.
ಕಪಿರೂಪದಲ್ಲಿರುವ ಮಹಿಮಾನ್ವಿತ ತನ್ನಣ್ಣನೆಂಬ ಸತ್ಯವನ್ನು ಅರಿತುಕೊಂಡ ಬಲಭೀಮ ಅಣ್ಣನಿಗೆ ಶರಣಾಗುತ್ತಾನೆ. ತನ್ನನುಜನನ್ನು ಆಲಿಂಗಿಸಿದ ಆಂಜನೇಯ ಸೌಗಂಧಿಕಾ ಪುಷ್ಪದಿರವನ್ನು ಕೌಂತೇಯನಿಗೆ ತಿಳಿಸುವ ಜೊತೆಗೆ ಭವಿಷ್ಯದಲ್ಲಿ ಒದಗಬಹುದಾದ ಕದನಮಖವನ್ನು ಅರಿತುಕೊಂಡು ಭೀಮನನ್ನು ವಜ್ರಶರೀರಿಯನ್ನಾಗಿಸುತ್ತಾನೆ.

ದ್ರುಪದಜೆಯ ಮನದ ಹೆಬ್ಬಯಕೆಯನ್ನು ಈಡೇರಿಸುವಲ್ಲಿ ಪೂರಕವೂ- ಪ್ರೇರಕವೂ ಆದ ವಜ್ರಬಲ ಸೌಗಂಧಿಕಾ ಪುಷ್ಪದ ಅನ್ವೇಷಣೆಯನ್ನು ಕುಬೇರನ ಅಲಕಾವತಿ ಪಟ್ಟಣದ ಚೈತ್ರರಥವೆಂಬ ವನದೆಡೆಗೆ ತಂದು ನಿಲ್ಲಿಸುತ್ತದೆ. ಸೌಗಂಧಿಕಾ ಪುಷ್ಪವನ್ನು ಪಡೆಯುವಲ್ಲಿ ಮುಂದಾದ ಧೀರಭೀಮನ ಚೋರತನದ ಕೃತ್ಯವನ್ನು‌ ಕಂಡ ಕುಬೇರ ಈ “ಕ್ಷುಲ್ಲಕ ತನ” ಶೋಭೆಯಲ್ಲವೆಂದಾಗ ಧರ್ಮವಿಷ್ಟರಕ್ಕಾಗಿ ನಡೆದ ಅವೆಷ್ಟೋ ಕದನ‌ಗಳ ಪರಿಚಯವನ್ನು ಭೀಮನು ಮಾಡುತ್ತಾನೆ. ವಾದದ ವಾರಿ ಕಟ್ಟೆಯೊಡೆದು ಕೆಟ್ಟು ಹರಿಯಲಾರಂಭಿಸಿದಾಗ ಕುಸುಮಲೋಚನೆಯ ಕುಸುಮಾಭೀಷ್ಟಕ್ಕಾಗಿ ಕುಬೇರ ಮತ್ತು ಕೌಂತೇಯನ ನಡುವೆ ಕದನ ಏರ್ಪಟ್ಟಾಗ ದೇವತೆಗಳ ಅಶರೀರವಾಣಿಗೆ ಶರಣಾಗಿ ಯುದ್ಧನಿಲ್ಲಿಸಬೇಕಾದ ದೃಶ್ಯ ಪ್ರಸಂಗಕ್ಕೆ ಇನ್ನಷ್ಟು ಬಲನೀಡುತ್ತದೆ.

ಅಶರೀರವಾಣಿಯ ಆದೇಶದಂತೆ ಸೌಗಂಧಿಕೆಯನ್ನು ಕುಬೇರನು ಭೀಮನಿಗಿತ್ತು ಹರಸುತ್ತಾನೆ. ವೀರಾಧಿವೀರ ವೃಕೋದರ ಚಂದದಿಂದಲಿ ಸೌಗಂಧ ಸುಮವನ್ನು ಇಂದುಮುಖಿಗೆ ಮುಡಿಸುವೆನೆಂದು ಮನದೊಳಗೆ ಆನಂದವನ್ನು ಹೊಂದಿ ದ್ರುಪದಜೆಯ ಮುಂದೆ ಪ್ರತ್ಯಕ್ಷನಾಗುತ್ತಾನೆ. ಭೀಮನ ಕೈಯೊಳಿದ್ದ ಸೌಗಂಧಿಕೆಯನ್ನು ಕಂಡ ದ್ರೌಪದಿ ನಸು ನಗುತ ತನ್ನ ಮುಡಿಯನ್ನು ತೋರಿಸುತ್ತಾ ” ಎನಗೆ ಬಯಕೆಗಳಿಲ್ಲವದರಲಿ | ಮನದ ನೋವುಗಳನ್ನು ತಣಿಸುವ | ಎಣಿಕೆಗಳು ಇವು ” ಎಂಬುದಾಗಿ ನುಡಿದಾಗ ಪ್ರಸಂಗದ ಧ್ವನಿ ಸಮಗ್ರವಾಗಿ ಪ್ರತಿಷ್ಠಿತವಾಗುವುದರ ಜೊತೆಗೆ ಪಾಂಚಾಲೆಯ ಮಾತು ಭೀಮನಿಗೆ ತಾನು ಮಾಡಿದ ಪ್ರತಿಜ್ಞೆಯನ್ನು ನೆನಪಿಸುತ್ತದೆ. ಹೂವನ್ನು ಕಂಡು ದ್ರೌಪದಿಯು ನುಡಿಯುವ ನುಡಿ ಅವಳ ಹಾಗೂ ಪಾಂಡವರ ನಡೆಯನ್ನು ಪ್ರಸಂಗವು ದೃಶ್ಯೀಕರಿಸುತ್ತದೆ.

ಹೂವಿನಿಂದೆನಗಧಿಕ | ನೀವೇ ನನ್ನ
ಜೀವನ ಸೌಗಂಧಿಕಾ |
ಭಾವದ ಶೃಂಗಾರ ಜೀವ ಜೀವನವೆಲ್ಲ ||
ನೀವು ಹೂವಿದು ಕ್ಷಣಿಕ || ಪಲ್ಲ||
ವನದಲಿ ಮನನೊಂದು | ಕುನಿದು ಕುಳಿತ ನಿಮ್ಮ |
ಘನತೆ ಕುಗ್ಗುವುದೆನುತ | ಕಳುಹಿದೆನಿಲ್ಲಿ |

ನನಗೇತಕೀಸುಮ | ರಣದ ಚಿಂತನೆಯೆಂದು |
ವನಿತೆ ಪೇಳ್ದಳು ನಗುತ | ಬಿಗಿದಪ್ಪುತ ||||

“ಪಂಚ ಪಾಂಡವರೇ ನನ್ನ ಜೀವನಕ್ಕೆ ಸೌಗಂಧವನ್ನು ಕೊಡುವ ಸುಮಗಳು… ಕಟ್ಟಲಾರದ ಮುಡಿಗೆ ಈ ಹೂವನ್ನೆಂತು ಮುಡಿದುಕೊಳ್ಳಲಿ? ಚಿಂತೆಯನ್ನಾಂತು ಬಂಡೆಯಂತೆ ನಿರ್ಭಾವ, ನಿರ್ಮಮಕಾರ ಚಿತ್ತರಾಗಿ ಕುಳಿತ ನಿಮ್ಮನ್ನು ಚಿಂತೆಯಿಂದ ವಿಮುಖರನ್ನಾಗಿಸುವಲ್ಲಿ ಈ ಒಂದು ಹೂವು ಕೇವಲ ನೆಪವಾಗಿ ಬಂತು” ಎಂದು ದ್ರೌಪದಿ ನುಡಿಯುವಲ್ಲಿ ಭವಿತವ್ಯದ ಯೋಜನೆಯ ಕಡೆಗಿರುವ ದ್ರುಪದಜೆಯ ಬದ್ಧತೆಯನ್ನು ಪ್ರಸಂಗವು ಧ್ವನಿಸುತ್ತದೆ. ಭಾವಕಿಯ ನುಡಿಕೇಳಿದ ಭೀಮ “ಸತಿ ನೀ ಹೂವ ಬಯಸಿಹುದಲ್ಲ ಗಂಡನ ಬಾಳ ಬಯಸಿದೆ” ಎಂದು ಹೇಳುತ್ತಾ “ಪಾವನಾತ್ಮಕ ಹನುಮ ಹರಸಿದ, ಈ ವಿಧದಿ ಸೋಲಿಲ್ಲ, ರಣವನೀವ ಖೂಳನ ಕರುಳ ಸೌಗಂಧಿಕೆಯ ಮುಡಿಸುವೆನು” ಎಂದು ಮರು ಪ್ರತಿಜ್ಞೆ ಮಾಡುವಲ್ಲಿ ಭೀಮನ ಅಂತರ್ಪುಟವನ್ನು ಕವಿ ಸುಂದರವಾಗಿ ಅವಲೋಕಿಸಿದ್ದಾರೆ. ಲೋಕಾಂತರದ, ಸಾವಿರದಳಗಳಿರುವ ತಾವರೆಯಂತಿರುವ “ಸೌಗಂಧಿಕ”ದ ಸುತ್ತ ಸಾವಿರದ ಘಟನೆಗಳಾಗುವುದು ದಿವ್ಯವೂ, ಭೌಮವೂ ಆದ ದೃಶ್ಯಗಳಾಗಿ ಪ್ರಸಂಗದಲ್ಲಿ ಮೂಡಿಬರುತ್ತದೆ. ಹನುಮನ ಮೂಲಕ ಭೀಮನಿಗಾಗುವ ರಾಮಾನುಗ್ರಹ, ಪ್ರತಿಸ್ಮೃತಿ ವಿದ್ಯೋಪದೇಶದ ಮುಖೇನ ಪಾರ್ಥನಿಗಾಗುವ ಶಿವಾನುಗ್ರಹ, ಸಮರದೊಳಗಿನ ಸತ್ಯವನ್ನು ಸುಂದರಗೊಳಿಸಿದ ಪ್ರಸಂಗದೊಳಗಿರುವ ಕವಿಯ ಕವಿತಾ ಪ್ರೌಢಿಮೆ ಸ್ಮರಣೀಯ, ಮನನೀಯ, ಪ್ರಶಂಸನೀಯವೇ ಸರಿ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
200
Deevith S. K. Peradi

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು