ನಂಜನಗೂಡು: ಇರಾನ್ ಮತ್ತು ಇಸ್ರೇಲ್ ಯುದ್ಧದಿಂದ ಸಿಲಿಂಡರ್ ಗ್ಯಾಸ್ ಗಾಗಿ ಸಾರ್ವಜನಿಕರು ಪರದಾಡುತ್ತಿರುವುದು ಒಂದೆಡೆಯಾದರೆ, ನಂಜನಗೂಡಿನಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರಿಗೆ ಬರುವ ಸಿಲಿಂಡರ್ ಗ್ಯಾಸ್ ಗಳನ್ನು ಬ್ಲಾಕ್ ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಂಜನಗೂಡಿನ ನಂಜುಂಡೇಶ್ವರ ಇಂಡಿಯನ್ ಗ್ಯಾಸ್ ಏಜೆನ್ಸಿ ಕಚೇರಿಗೆ ಗ್ರಾಹಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಸುಡು ಬಿಸಿಲಿನಲ್ಲಿ ಜನರು ಕತ್ತರಿಸಿ ಹೋಗಿದ್ದಾರೆ. ಈ ನಡುವೆ ಗ್ಯಾಸ್ ಏಜೆನ್ಸಿಯವರು, ಗ್ರಾಹಕರ ಒಟಿಪಿಗಳನ್ನು ಅಕ್ರಮವಾಗಿ ಪಡೆದುಕೊಂಡು ಅವರಿಗೆ ಬರುತ್ತಿದ್ದ ಸಿಲಿಂಡರ್ ಗ್ಯಾಸ್ ಗಳನ್ನು ಬ್ಲಾಕ್ ನಲ್ಲಿ ಮೂರರಿಂದ ನಾಲ್ಕು ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಪ್ರತಿದಿನ ಗ್ರಾಹಕರು ನೂರಾರು ಸಂಖ್ಯೆಯಲ್ಲಿ ಸಿಲಿಂಡರ್ ಗ್ಯಾಸ್ ಗಾಗಿ ಪರದಾಡುತ್ತಿದ್ದಾರೆ.

ಆದರೆ ಇವರ ಗ್ಯಾಸ್ ಗಳನ್ನು ಮಾರಾಟ ಮಾಡಿಕೊಂಡು ದಂಧೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.