ನಂಜನಗೂಡು: ಒಂದೇ ತಿಂಗಳಿನಲ್ಲಿ ನಂಜನಗೂಡಿನ ನಂಜುಂಡೇಶ್ವರ 2 ಕೋಟಿ ರೂ. ಒಡೆಯನಾಗಿದ್ದಾನೆ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಇದ್ದ ಎಲ್ಲ ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಚಿನ್ನಾಭರಣವನ್ನು ದೇವಸ್ಥಾನದ ದಾಸೋಹ ಭವನದಲ್ಲಿ ದೇವಸ್ಥಾನದ ಸಿಬ್ಬಂದಿಗಳು ಹಾಗೂ ಬ್ಯಾಂಕ್ ಆಫ್ ಬರೋಡ ಸಿಬ್ಬಂದಿಗಳು ಎಣಿಕೆ ಮಾಡಿದರು.

ಒಟ್ಟಾರೆ ಹುಂಡಿಯಲ್ಲಿ 2,11,49,728 ನಗದು, 58 ಗ್ರಾಂ ಚಿನ್ನ. 2 ಕೆಜಿ 500 ಗ್ರಾಂ ಬೆಳ್ಳಿ ಅಲ್ಲದೇ ,46 ವಿದೇಶಿ ಕರೆನ್ಸಿಗಳು ಕೂಡ ಸಂಗ್ರಹವಾಗಿದೆ. ಅಲ್ಲದೆ ನಿಷೇಧಿಸಿದ್ದ ಹಳೆಯ 500 ಮತ್ತು 2000‌ ಸಾವಿರ ನೋಟುಗಳು ಪತ್ತೆಯಾಗಿವೆ. ದೊಡ್ಡ ಜಾತ್ರೆಯಿಂದ ಹುಂಡಿ ಎಣಿಕೆಯಲ್ಲಿ ಏರಿಕೆ ಕಂಡಿದೆ. ನಂಜನಗೂಡಿನಲ್ಲಿ 15 ದಿನಗಳ ಹಿಂದೆ ದೊಡ್ಡ ಜಾತ್ರೆ ನಡೆದ್ದಿತ್ತು, ಈ ವೇಳೆಯಲ್ಲಿ ರಥ ಎಳೆಯಲು ಹಾಗೂ ನಂಜುಂಡೇಶ್ವರ ದರ್ಶನ ಪಡೆಯಲು ಲಕ್ಷಾಂತರ ಮಂದಿ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಪರಿಣಾಮ, ನಂಜುಂಡೇಶ್ವರ ಹುಂಡಿಯಲ್ಲಿ ಆದಾಯದ ಪ್ರಮಾಣ ಹೆಚ್ಚಳವಾಗಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ಪ್ರತಿ ತಿಂಗಳು , ಹುಂಡಿ ಎಣಿಕೆ ಮಾಡುತ್ತಿದ್ದಾಗ 1 ಕೋಟಿಯೊಳಗೆ ಕಾಣಿಕೆ ಸೀಮಿತವಾಗಿತ್ತು. ಆದರೀಗ, 2 ಕೋಟಿ ರೂ., ದಾಟಿದೆ. ಈ ಬಾರಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಭಾರತ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಈ ಸಂದರ್ಭ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಮುಜರಾಯಿ ಇಲಾಖೆಯ ತಹಶೀಲ್ದಾರ್ ಭಾಗ್ಯ, ಸಹಾಯಕ ಅಧಿಕಾರಿ ಸತೀಶ್, ಸೇರಿದಂತೆ ದೇವಾಲಯದ ಇನ್ನಿತರ ಅಧಿಕಾರಿಗಳು ‌ಹಾಜರಿದ್ದರು.