ಮೈಸೂರು: ನಕಲಿ ಒಡವೆಗಳನ್ನ ಗಿರವಿ ಇಟ್ಟು ಖಾಸಗಿ ಬ್ಯಾಂಕ್ ಗೆ ವಂಚಿಸಿದ ಆರೋಪದ ಮೇಲೆ ಚಿನ್ನಾಭರಣ ಮೌಲ್ಯಮಾಪಕ ಸೇರಿದಂತೆ 7 ಮಂದಿ ವಿರುದ್ದ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್ ಗೆ ವಂಚಕರು 56.78 ಲಕ್ಷ ಉಂಡೆನಾಮ ಹಾಕಿದ್ದಾರೆ. ಬ್ಯಾಂಕ್ ನ ಮುಖ್ಯಸ್ಥರಾದ ಸುರೇಶ್ ಕಣ್ಣನ್ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ಅಬ್ದುಲ್ ಜಮೀಲ್, ಮಂಡ್ಯದ ಸಾಗರ್, ಪುಟ್ಟರಾಜು, ರವಿಕುಮಾರ್, ಈತನ ಪತ್ನಿ ದಿವ್ಯ, ಬೆಂಗಳೂರಿನ ನಾಗರತ್ನರೆಡ್ಡಿ ಹಾಗೂ ಮೌಲ್ಯಮಾಪಕ ಟಿ.ನರಸೀಪುರದ ರವೀಂದ್ರ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ.

14-03-2024 ರಂದು 6 ಆರೋಪಿಗಳ ಹೆಸರಲ್ಲಿ ಒಟ್ಟು 782 ಗ್ರಾಂ ಚಿನ್ನಾಭರಣ ಗಿರವಿ ಇಟ್ಟು 56,78,000/- ರೂ ಸಾಲ ಪಡೆದಿದ್ದಾರೆ.ಆರೋಪಿಗಳ ಚಿನ್ನಾಭರಣವನ್ನ ರವೀಂದ್ರ ಕುಮಾರ್ ಪರಿಶೀಲಿಸಿ ಅಸಲಿ ಚಿನ್ನವೆಂದು ಅಧಿಕೃತವಾಗಿ ಸರ್ಟಿಫೈ ಮಾಡಿದ್ದಾರೆ.

ಈ ಆಧಾರದ ಮೇಲೆ ಗಿರವಿ ಸಾಲ ನೀಡಲಾಗಿದೆ. ಜನವರಿ 14,2026 ರಂದು ಮರುಮೌಲ್ಯಮಾಪನ ಮಾಡಲು ರಮೇಶ್ ಎಂಬುವರು ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲಿಸಿದಾಗ ನಕಲಿ ಚಿನ್ನವೆಂದು ಬೆಳಕಿಗೆ ಬಂದಿದೆ. 7 ಮಂದಿ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.