ನಂಜನಗೂಡು: ನಗರದ ಸರ್ಕಾರಿ ನಾಗಮ್ಮ ಶಾಲಾ ಆವರಣದಲ್ಲಿ ಮೈಸೂರು ಜಿಲ್ಲಾ ಪೊಲೀಸ್, ನಂಜನಗೂಡು ಉಪ ವಿಭಾಗ, ಸಂಚಾರ ಪೊಲೀಸ್ ಠಾಣೆ ನಂಜನಗೂಡು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜಾಥಾಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ರಸ್ತೆ ಸುರಕ್ಷತೆ ಮತ್ತು ಮಾಸಾಚರಣೆ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ನಂಜನಗೂಡಿನಲ್ಲಿ ಜಾಥಾ ಮತ್ತು ರಸ್ತೆ ಸಪ್ತಾಹ ಮಾಡುತ್ತಿದ್ದೇವೆ. ಕಾಲೇಜಿನ ವಿದ್ಯಾರ್ಥಿಗಳ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಹೆಲ್ಮೆಟ್ ಧರಿಸಿದೆ ಪ್ರಯಾಣ ಮಾಡುವುದು, ವಾಹನಚಲನೆ ಮಾಡುವಾಗ ಮೊಬೈಲ್ ಉಪಯೋಗಿಸುವುದು. ಹೀಗೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡುಬರುತ್ತದೆ. ಹಲವು ಜನರು ಕೂಡ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರತಿನಿತ್ಯ ಸಾಕಷ್ಟು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಜಾಗೃತಿ ಮೂಡಿಸಬೇಕಾಗಿದೆ. ಪೊಲೀಸರಿಗೋಸ್ಕರ ಹೆಲ್ಮೆಟ್ ಗಳನ್ನು ಧರಿಸುವುದಲ್ಲ ಅವರವರ ಜೀವವನ್ನು ರಕ್ಷಣೆ ಮಾಡಿಕೊಳ್ಳಲು ಹೆಲ್ಮೆಟ್ ಧರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ನಂತರ ಸರ್ಕಾರಿ ನಾಗಮ್ಮ ಶಾಲೆಯಿಂದ ಜೂನಿಯರ್ ಕಾಲೇಜಿನ ಮೈದಾನದವರೆಗೆ ವಿದ್ಯಾರ್ಥಿಗಳಿಂದ ಬೃಹತ್ ಜಾಥಾ ನಡೆಸಿ ಜನರಿಗೆ ಅರಿವು ಮೂಡಿಸಲಾಯಿತು. ವಾಹನ ಸವಾರರಿಗೆ ಹೆಲ್ಮೆಟ್ ಧರಿಸಿ ಪ್ರಯಾಣಿಸುವಂತೆ ಮನವರಿಕೆ ಮಾಡಲಾಯಿತು. ನಂಜನಗೂಡಿನ ದೇವಿರಮ್ಮ ಹಳ್ಳಿಯಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ವೇದಿಕೆ ಕಾರ್ಯಕ್ರಮವನ್ನು ಎಎಸ್ ಪಿ ಮಲ್ಲಿಕ್ ಶ್ರೀ ಶಿವರಾತ್ರೀಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಕಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈಗಾಗಲೇ ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಸವಾರರಿಗೆ 30 ಲಕ್ಷ ದಂಡ ವಿಧಿಸಲಾಗಿದೆ. ಅಪಘಾತ ಪ್ರಕರಣಗಳನ್ನು ತಡೆಗಟ್ಟಬೇಕು. ಸಿಸಿ ಕ್ಯಾಮೆರಾ ಮತ್ತು ಪೊಲೀಸ್ ಇದ್ದಾರೆ ಎಂದು ಹೆಲ್ಮೆಟ್ ಹಾಕುವುದಲ್ಲ. ನಮ್ಮ ಜೀವವನ್ನು ಕಾಪಾಡಿಕೊಳ್ಳಲು ಹೆಲ್ಮೆಟ್ ಧರಿಸುವುದು ನಮ್ಮ ಕರ್ತವ್ಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 400 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವುದೇ ಜೀವಕ್ಕೂ ಹಾನಿಯಾಗಬಾರದು. ಅಮೂಲ್ಯ ಜೀವಗಳನ್ನು ರಕ್ಷಿಸಬೇಕು.

ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿ ಅಪಘಾತದಲ್ಲಿ ಸಾವಿನ ಪ್ರಮಾಣ ಏರಿಕೆಯಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಬೈಕ್ ಕೊಡಬಾರದು. ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಪಘಾತದಿಂದಾಗುವ ಪ್ರಕರಣಗಳಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತದೆ. ಹಾಗಾಗಿ ಅಮೂಲ್ಯ ಜೀವಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ನಂಜನಗೂಡಿನಲ್ಲಿ ವರ್ಷಕ್ಕೆ 150 ರಿಂದ 200 ರಷ್ಟು ಅಪಘಾತ ಪ್ರಕರಣಗಳು ನಡೆಯುತ್ತಿದೆ. ಹಾಗೆಯೇ ಅಪಘಾತದಲ್ಲಿ 100 ಮಂದಿ ಸಾವನ್ನಪ್ಪುತ್ತಿದ್ದಾರೆ. ಮೈಸೂರಿನಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ 1000 ಕ್ಕೆ ಏರಿಕೆಯಾಗಿದೆ. ರಸ್ತೆ ದಾಟುವಾಗ ಎಚ್ಚರಿಕೆ ವಹಿಸಬೇಕು. ವಾಹನ ಸವಾರರು ಕಡ್ಡಾಯವಾಗಿ ಡಿಎಲ್, ಇನ್ಸೂರೆನ್ಸ್ ಮತ್ತು ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇನ್ನೂ ನಂಜನಗೂಡಿನ ಪತ್ರಕರ್ತರಿಗೆ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಿವೈಎಸ್ಪಿ ರಘು, ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿಎಂ ರವೀಂದ್ರ, ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲರಾದ ಹೊನ್ನೇಗೌಡ, ಶಿವಕುಮಾರ್, ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಕೃಷ್ಣಕಾಂತ ಕೋಳಿ, ಹುಲ್ಲಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಚೇತನ್ ಕುಮಾರ್, ಎಸ್.ಬಿ ತಿಮ್ಮಯ್ಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.