ನಂಜನಗೂಡು: ನಾನು ಬದುಕಿದ್ದಾಗ ಸರಿಯಾದ ರಸ್ತೆ ಇರಲಿಲ್ಲ, ಹೊಲಕ್ಕೆ ಹೋಗಲು ಪರದಾಡುತ್ತಿದ್ದೆವು, ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಸಾಗಿಸಲೂ ಸಂಕಷ್ಟ ಎದುರಿಸುತ್ತಿದ್ದೆವು. ರಸ್ತೆ ಸರಿಪಡಿಸಿ ಎಂದು ಎಷ್ಟೇ ಬಾರಿ ಮನವಿ ಮಾಡಿದರೂ ಯಾರೂ ನಮ್ಮ ಗೋಳು ಕೇಳಲಿಲ್ಲ. ಕೊನೆಗೆ ನಾನು ಸತ್ತ ಮೇಲಾದರೂ ನೆಮ್ಮದಿಯಾಗಿ ಸ್ಮಶಾನ ಸೇರಬಹುದು ಎಂದುಕೊಂಡಿದ್ದೆ. ಆದರೆ, ಅಲ್ಲಿಗೂ ಈ ಕೆಸರುಮಯ ರಸ್ತೆಯೇ ಅಡ್ಡಿಯಾಯಿತು. ನಾಲ್ಕು ಜನರ ಹೆಗಲ ಮೇಲೆ ನನ್ನ ಮೃತದೇಹವನ್ನು ಹೊತ್ತು ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಸಾಗಿಸಲು ನನ್ನವರೇ ಪರದಾಡಬೇಕಾಯಿತು.

ಬದುಕಿದ್ದಾಗಲೂ ರಸ್ತೆ ಸೌಕರ್ಯವಿಲ್ಲದೆ ನರಳಿದೆ, ಸತ್ತ ಮೇಲೂ ನೆಮ್ಮದಿಯ ಅಂತಿಮ ಪಯಣ ಸಿಗಲಿಲ್ಲ. ಜನಪ್ರತಿನಿಧಿಗಳೇ, ಅಧಿಕಾರಿಗಳೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. ನನ್ನಂತಹ ಮತ್ತೊಬ್ಬರ ಅಂತಿಮ ಪಯಣ ಹೀಗೆ ಸಂಕಷ್ಟಮಯವಾಗದಿರಲಿ..! ಇದು ಯಾವುದೋ ಕುಗ್ರಾಮದ ಕಥೆಯಲ್ಲ. ನಂಜನಗೂಡು ತಾಲ್ಲೂಕಿನ ಚಿನ್ನದಗುಡಿಹುಂಡಿ ಗ್ರಾಮದ ಜನರ ನಿತ್ಯದ ಗೋಳು.

ಸುಮಾರು 4 ಸಾವಿರ ಜನಸಂಖ್ಯೆ ಹೊಂದಿರುವ ಚಿನ್ನದಗುಡಿಹುಂಡಿ ಗ್ರಾಮದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣವಾದ ಬಳಿಕ ಗ್ರಾಮಸ್ಥರ ಸಂಕಷ್ಟ ಹೆಚ್ಚಾಗಿದೆ. ವೈಜ್ಞಾನಿಕವಾಗಿ ನಿರ್ಮಾಣವಾಗದ ಕೆಳಸೇತುವೆಯಲ್ಲಿ ಮಳೆ ನೀರು ಸಂಗ್ರಹವಾಗಿ ಕೆಸರು ಗದ್ದೆಯಂತಾಗುತ್ತದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಾಧ್ಯವಾಗದೆ ಪರದಾಡುವಂತಾಗಿದೆ. ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಮನೆಗೆ ಸಾಗಿಸುವುದೂ ದುಸ್ತರವಾಗಿದೆ.

ಆದರೆ ಗ್ರಾಮಸ್ಥರ ಸಂಕಷ್ಟಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆ ಕಣ್ಣೀರು ತರಿಸುವಂತಿದೆ. ಗ್ರಾಮದ ಮಹದೇವಮ್ಮ ಎಂಬ ಮಹಿಳೆ ಇತ್ತೀಚೆಗೆ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಬೇಕಿತ್ತು. ಆದರೆ, ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿರುವ ರೈಲ್ವೆ ಕೆಳಸೇತುವೆಯಲ್ಲಿ ಮಳೆ ನೀರು ನಿಂತು ಕೆಸರು ತುಂಬಿಕೊಂಡಿತ್ತು. ಪರಿಣಾಮ, ನಾಲ್ಕು ಜನರ ಹೆಗಲ ಮೇಲೆ ಶವವನ್ನು ಹೊತ್ತುಕೊಂಡು ಕೆಸರುಮಯ ರಸ್ತೆಯಲ್ಲಿ ಸಾಗಿಸಲು ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು.

ಜೀವನದ ಕೊನೆಯ ಪಯಣದಲ್ಲೂ ನೆಮ್ಮದಿಯಿಂದ ಸಾಗಲು ಸಾಧ್ಯವಾಗದ ಈ ದೃಶ್ಯ ಗ್ರಾಮಸ್ಥರ ಮನಕಲಕಿದೆ. ಬದುಕಿರುವಾಗ ರಸ್ತೆ ಸೌಕರ್ಯಕ್ಕಾಗಿ ಅಧಿಕಾರಿಗಳ ಬಾಗಿಲು ತಟ್ಟಿದರೂ ಪ್ರಯೋಜನವಾಗಿಲ್ಲ. ಇದೀಗ ಸಾವಿನ ನಂತರವೂ ಶವ ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜನರಿಗೆ ಮೂಲಭೂತ ರಸ್ತೆ ಸೌಲಭ್ಯ ಕಲ್ಪಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಲ್ಲವೇ? ಒಬ್ಬ ವ್ಯಕ್ತಿ ಬದುಕಿದ್ದಾಗ ಗೌರವಯುತವಾಗಿ ಬದುಕಲು ರಸ್ತೆ ಬೇಕು. ಮೃತಪಟ್ಟಾಗ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲೂ ರಸ್ತೆ ಬೇಕು.

ಬದುಕಿದ್ದಾಗ ರಸ್ತೆಗಾಗಿ ಕಣ್ಣೀರು, ಸತ್ತಾಗ ಶವ ಸಾಗಿಸಲು ಕಣ್ಣೀರು… ಚಿನ್ನದಗುಡಿಹುಂಡಿ ಗ್ರಾಮಸ್ಥರ ಈ ನೋವಿಗೆ ಇನ್ನಾದರೂ ಅಧಿಕಾರಿಗಳು ಸ್ಪಂದಿಸುತ್ತಾರೆಯೇ?ಕಾದು ನೋಡಬೇಕಿದೆ.

–ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.