ನಂಜನಗೂಡು: ಗೌರಿ–ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ನಂಜನಗೂಡಿನಲ್ಲಿ ಗಣೇಶ ಮೂರ್ತಿಗಳ ಖರೀದಿ ಭರಾಟೆ ಜೋರಾಗಿದೆ. ಈ ನಡುವೆ ಗಣೇಶನ ಮೂರ್ತಿಗೂ ಸೀಟ್ ಬೆಲ್ಟ್ ಹಾಕಿಸುವ ಮೂಲಕ ಸಂಚಾರಿ ನಿಯಮ ಪಾಲನೆಯ ಮಹತ್ವ ಸಾರಿದ ಯುವಕರ ಕಾರ್ಯ ಗಮನ ಸೆಳೆದಿದೆ.
ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಯುವಕರ ಗುಂಪು, ಗಣೇಶನ ಮೂರ್ತಿಯನ್ನು ಖರೀದಿಸಿಕೊಂಡು ಕಾರಿನಲ್ಲಿ ಸಾಗಿಸುವ ವೇಳೆ ಮೂರ್ತಿಯನ್ನು ಮುಂಭಾಗದಲ್ಲಿ ಸುರಕ್ಷಿತವಾಗಿ ಕುಳ್ಳಿರಿಸಿ, ಸೀಟ್ ಬೆಲ್ಟ್ ಹಾಕಿದ್ದಾರೆ.
‘ರೂಲ್ಸ್ ಅಂದ್ರೆ ರೂಲ್ಸ್..!’ ಎಂದು ಹೇಳಿರುವ ಯುವಕರು, ಗಣೇಶನ ಮೂರ್ತಿಗೆ ಸೀಟ್ ಬೆಲ್ಟ್ ಹಾಕಿರುವ ದೃಶ್ಯದ ಮೂಲಕ ವಾಹನ ಸವಾರರಿಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಯುವಕ ಕಿರಣ್ ಕುಮಾರ್, ಗಣೇಶನ ಮೂರ್ತಿಗೆ ದುಡ್ಡು ಕೊಟ್ಟು ಖರೀದಿಸಿದ್ದೇವೆ. ಅದಕ್ಕೆ ಏನೂ ಆಗಬಾರದು ಎಂಬ ಕಾರಣಕ್ಕೆ ಸೀಟ್ ಬೆಲ್ಟ್ ಹಾಕಿದ್ದೇವೆ. ಆದರೆ, ವಾಹನದಲ್ಲಿ ಸಂಚರಿಸುವಾಗ ಕೆಲವರು ತಮ್ಮದೇ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಹೇಳಿದ್ದಾರೆ.
ಗಣೇಶನಿಗೆ ಏನಾದರೂ ಆಗಬಾರದು ಎಂದು ನಾವು ಇಷ್ಟೊಂದು ಕಾಳಜಿ ವಹಿಸುತ್ತೇವೆ. ಆದರೆ ಮನುಷ್ಯನಿಗೆ ಅಪಘಾತವಾಗಿ ಗಾಯವಾದರೆ ಆಸ್ಪತ್ರೆಗೆ ದಾಖಲಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಹಾಗಿದ್ದರೂ ನಮ್ಮ ಅಮೂಲ್ಯ ಜೀವದ ಬಗ್ಗೆ ಯಾಕೆ ಕಾಳಜಿ ವಹಿಸುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಗಣೇಶನಿಗೆ ಸೀಟ್ ಬೆಲ್ಟ್ ಹಾಕಿರುವುದನ್ನು ನೋಡಿದರೂ ಜನರು ಸಂಚಾರಿ ನಿಯಮಗಳ ಮಹತ್ವ ಅರಿತು, ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಯುವಕರು ನೀಡಿದ್ದಾರೆ. ಹಬ್ಬದ ಸಂಭ್ರಮದ ನಡುವೆ ಒಂದು ಚಿಕ್ಕ ಪ್ರಯತ್ನದ ಮೂಲಕ ದೊಡ್ಡ ಸಾಮಾಜಿಕ ಸಂದೇಶ ಸಾರಿರುವ ಚುಂಚನಹಳ್ಳಿ ಯುವಕರ ನಡೆ ಇದೀಗ ಗಮನ ಸೆಳೆದಿದೆ.
-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.

