ಯಾದಗಿರಿ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಏಳು ಮಂದಿಯನ್ನು ಬಂಧಿಸಿದ್ದು, ಆರು ನಾಡಬಂದೂಕುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಸಿಕೊಂಡಿರುವ ಘಟನೆ ನಡೆದಿದೆ.

ಯಾದಗಿರಿ ಪ್ರಾದೇಶಿಕ ಅರಣ್ಯ ವಲಯದ ಅರಕೇರಾ (ಕೆ) ಶಾಖೆಯ ಮೋಟ್ನಳ್ಳಿ ಗಸ್ತಿನ ಬಗ್ಗಲುಮಡು ಸೆಕ್ಷನ್‌-4ರ ಸರ್ವೇ ನಂ.30ರ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಅಧಿಕಾರಿಗಳು ಇಲಾಖೆಯ ವಾಹನದಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದರು. ಈ ವೇಳೆ ಅರಣ್ಯ ಪ್ರದೇಶದಲ್ಲಿ ಜನರ ಗುಂಪಿನ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆಗ ಏಳು ಮಂದಿ ಅಲ್ಲಿ ಇರುವುದನ್ನು ಪತ್ತೆಹಚ್ಚಿದ್ದಾರೆ. ಸ್ಥಳದಲ್ಲಿ ಎರಡು ನವಿಲುಗಳನ್ನು ಬೇಟೆಯಾಡಿ ಸುಟ್ಟಿರುವುದು ಹಾಗೂ ಅವುಗಳ ಮಾಂಸ ಪತ್ತೆಯಾಗಿದ್ದು, ಎರಡು ಆಮೆಗಳು ಮತ್ತು 12 ಜೀವಿಗಳನ್ನು ಹಿಡಿದಿರುವುದು ಕಂಡುಬಂದಿದೆ.

ವಲಯ ಅರಣ್ಯಾಧಿಕಾರಿ ಬುರಾನುದ್ದೀನ್‌ ಹಾಗೂ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಹಂದ್ರಾಳ ನೇತತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಬಂಧಿತರನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬೀಮನಳ್ಳಿ ಸೇರಿದಂತೆ ವಿವಿಧ ಗ್ರಾಮದ ಆರೋಪಿಗಳಾದ ನಿಂಗಪ್ಪ, ವಾಸುದೇವ, ಕರೇಪ್ಪ, ಕಾಂತಪ್ಪ, ಯಲ್ಲಲಿಂಗ, ಬಸವರಾಜ ಹಾಗೂ ಮಲ್ಲಪ್ಪ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಕೂಲಿ ಕಾರ್ಮಿಕರು ಎಂದು ಅರಣ್ಯ ಇಲಾಖೆ ದಾಖಲೆಯಲ್ಲಿ ತಿಳಿಸಲಾಗಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಆಯುಧ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.