ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರಿನ ಆಡಳಿತ ಮಂಡಳಿ ವಿರುದ್ಧ ಭಾರೀ ಮೊತ್ತದ ಹಣಕಾಸು ಅವ್ಯವಹಾರ ಸೇರಿದಂತೆ ಮುಜರಾಯಿ ಇಲಾಖೆ ನಿಯಮ ಉಲ್ಲಂಘನೆ ಮತ್ತು ಆಡಳಿತ ವೈಫಲ್ಯದ ಗಂಭೀರ ಆರೋಪಗಳು ಕೇಳಿಬಂದಿದ್ದು, ಸ್ವತಂತ್ರ ತನಿಖೆಗೆ ಒತ್ತಾಯಿಸಲಾಗಿದೆ. ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸೆಪ್ಟೆಂಬರ್ 21 ರಂದು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ದೇವಸ್ಥಾನ ಸಂರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ.
ದೇವಸ್ಥಾನದ ಹಣಕಾಸು ವ್ಯವಹಾರ, ಆಸ್ತಿ ನಿರ್ವಹಣೆ ಮತ್ತು ರಾಜಕೀಯ ಹಸ್ತಕ್ಷೇಪದ ಬಗ್ಗೆ ತಕ್ಷಣ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ದೇವಸ್ಥಾನ ಸಂರಕ್ಷಣಾ ಸಮಿತಿ ಸದಸ್ಯರು, ಎಲ್ಲಾ ಆರೋಪಗಳಿಗೂ ದಾಖಲೆಗಳಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇವಸ್ಥಾನದ ಖಾತೆಯಿಂದ ₹3,00,248 ರೂ.ಗಳನ್ನು ಸ್ವಯಂ-ಚೆಕ್ ಮೂಲಕ ತೆಗೆಯಲಾಗಿದ್ದು, ಇದು ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿದೆ. ಜನವರಿ 2025 ರಿಂದ ಮೇ 2026 ರ ನಡುವೆ ಸಣ್ಣ ಖರ್ಚು, ದುರಸ್ತಿ ಹೆಸರಿನಲ್ಲಿ ₹40.03 ಲಕ್ಷಕ್ಕೂ ಅಧಿಕ ಹಣವನ್ನು ಇಲಾಖೆ ಅನುಮೋದನೆ ಇಲ್ಲದೆ ತೆಗೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಲ್ಲದೆ, ಕರ್ನಾಟಕ ಮುಜರಾಯಿ ನಿಯಮ 35ರ ಪ್ರಕಾರ ದೇವಸ್ಥಾನದ ಚಿನ್ನಾಭರಣಗಳನ್ನು ಪ್ರತಿ ವರ್ಷ ಅಧಿಕೃತ ಚಿನ್ನದ ಕೆಲಸಗಾರರಿಂದ ತೂಕ ಮಾಡಿಸಿ ಪ್ರಮಾಣೀಕರಿಸಬೇಕು. ಆದರೆ ಇಲ್ಲಿ ಅಂದಾಜು ತೂಕವನ್ನೇ ದಾಖಲಿಸಲಾಗಿದೆ.
ತೆಂಕಿಲದಲ್ಲಿ ದೇವಸ್ಥಾನಕ್ಕೆ ಸೇರಿದ 15 ಎಕರೆ ಜಮೀನಿನಲ್ಲಿದ್ದ ಬೆಲೆಬಾಳುವ ತೇಗ, ಹಲಸು, ಬೀಟೆ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಮತ್ತು ಮೌಲ್ಯಮಾಪನವಿಲ್ಲದೆ ಕಡಿದು ಸಾಗಿಸಲಾಗಿದೆ.
ದೇವಸ್ಥಾನದ ಹಳೆಯ ಕಟ್ಟಡಗಳ ನೆಲಸಮ ಮತ್ತು ಯಂತ್ರೋಪಕರಣಗಳ ಬಳಕೆಯ ಕಾಮಗಾರಿಗಳಿಗೆ ಟೆಂಡರ್ ಕರೆಯದೆ, ಲೋಕೋಪಯೋಗಿ ಇಲಾಖೆಯಿಂದ ಮೌಲ್ಯಮಾಪನವಿಲ್ಲದೆ ಗುತ್ತಿಗೆ ನೀಡಲಾಗಿದೆ. ಲಕ್ಷಾಂತರ ರೂ. ಬೆಲೆಬಾಳುವ ಹಳೆಯ ಕಟ್ಟಡ ಸಾಮಗ್ರಿಗಳನ್ನು ಕೇವಲ ₹45,000 ಮತ್ತು ₹52,000 ಕ್ಕೆ ಹರಾಜು ಮಾಡಲಾಗಿದೆ ಎಂದು ಸಮಿತಿ ಆರೋಪಿಸಿದೆ.
ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಅಧಿಕೃತ ರಶೀದಿ ಬದಲು ಅನಧಿಕೃತ ಗುಲಾಬಿ ಬಣ್ಣದ ಚೀಟಿ ಬಳಸಿ ಹಣ ಸಂಗ್ರಹಿಸಲಾಗಿದೆ. ಜೀರ್ಣೋದ್ಧಾರ ಸಮಿತಿಗೆ ಸರ್ಕಾರದ ಅನುಮೋದನೆ ಬರುವ ಮುನ್ನವೇ ದೇಣಿಗೆ ಸಂಗ್ರಹಕ್ಕೆ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಎಲ್ಲ ಅವ್ಯವಹಾರಗಳಿಗೆ ಆಡಳಿತ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಅವರ ಆಡಳಿತ ಹಸ್ತಕ್ಷೇಪವೇ ಕಾರಣ ಎಂದು ಆರೋಪಿಸಿರುವ ದೇವಸ್ಥಾನ ಸಂರಕ್ಷಣಾ ಸಮಿತಿ, ಜಿಲ್ಲಾಧಿಕಾರಿಗಳು ವಿಶೇಷ ತನಿಖಾ ತಂಡ (SIT) ರಚಿಸಬೇಕು, ಹಾಲಿ ಆಡಳಿತ ಸಮಿತಿಯನ್ನು ಅಮಾನತುಗೊಳಿಸಿ, ಕಾರ್ಯನಿರ್ವಾಹಕ ಅಧಿಕಾರಿಯನ್ನು ತನಿಖೆ ಮುಗಿಯುವವರೆಗೂ ಇಲ್ಲಿನ ಕರ್ತವ್ಯದಿಂದ ದೂರ ಇಡಬೇಕು ಎಂದು ಆಗ್ರಹಿಸಿದೆ.

