ಅಯೋಧ್ಯೆ: ದೇಣಿಗೆ ಕಳ್ಳತನ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ರಾಮ ಮಂದಿರ ನಿರ್ವಹಣೆಯ ಹೊಣೆ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಹೊಸ ಹೊಸ ಕ್ರಮಗಳನ್ನು ಜಾರಿಗೆ ತರಲು ಮುಂದಾಗುತ್ತಿದೆ. ಈಗಾಗಲೇ ದೇಗುಲಕ್ಕೆ ಮೊದಲ ಸಿಇಒ ಆಯ್ಕೆ ಮಾಡಲಾಗಿದ್ದು, ಇದೀಗ, ಮಂದಿರದ ಸಿಬ್ಬಂದಿಯ ಶಿಸ್ತು ಹೆಚ್ಚಿಸಲು ಸಹ ಮುಂದಾಗಿದೆ.

ಶಿಸ್ತು ಹೆಚ್ಚಿಸಲು ಹೊಸ ನೀತಿ: ಶ್ರೀ ರಾಮ ಮಂದಿರ ದೇಗುಲದಲ್ಲಿ ನಡೆಯುವ ಕೆಲಸ ಕಾರ್ಯಗಳಲ್ಲಿ ಮತ್ತು ಸಿಬ್ಬಂದಿಯಲ್ಲಿ ಶಿಸ್ತು ಹೆಚ್ಚಿಸಲು ಟ್ರಸ್ಟ್ ಹೊಸ ನೀತಿಯನ್ನು ರೂಪಿಸುತ್ತಿದೆ. ಸಿಬ್ಬಂದಿಗೆ ವಸ್ತ್ರಸಂಹಿತೆ, ಸೇವೆಗಳಲ್ಲಿ ಸ್ಪಷ್ಟ ಮಾರ್ಗಸೂಚಿ, ಭಕ್ತರಿಗೆ ಅನುಕೂಲವಾಗುವಂತಹ ಕ್ರಮಗಳು ಇದರಲ್ಲಿರಲಿವೆ ಎಂದು ತಿಳಿದು ಬಂದಿದೆ.

ಹೊಸದಾಗಿ ನೇಮಕಗೊಂಡ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಜಿತೇಂದ್ರ ಮಿಶ್ರಾ ಅವರು ಈ ನೀತಿಯನ್ನು ಸ್ಪಷ್ಟವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಹೊಸ ನೀತಿಯು ದೇವಾಲಯದ ಸಂಕೀರ್ಣದಲ್ಲಿ ನಿಯೋಜಿತರಾಗಿರುವ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅನ್ವಯಿಸುತ್ತದೆ.

ಹೊಸ ನೀತಿಯಲ್ಲಿದೆ ವಸ್ತ್ರ ಸಂಹಿತೆ: ಲಭ್ಯವಿರುವ ಮಾಹಿತಿಯ ಪ್ರಕಾರ, ಟ್ರಸ್ಟ್ ರಚಿಸುತ್ತಿರುವ ಹೊಸ ನೀತಿಯಲ್ಲಿ ವಸ್ತ್ರಸಂಹಿತೆ ಪ್ರಮುಖವಾಗಿದೆ. ಮಂದಿರದಲ್ಲಿ ವಿವಿಧ ಜವಾಬ್ದಾರಿ ಹೊತ್ತಿರುವ ಉದ್ಯೋಗಿಗಳಿಗೆ ನಿರ್ದಿಷ್ಟ ಡ್ರೆಸ್ ಕೋಡ್‌ ರೂಪಿಸಲಾಗುತ್ತಿದೆ.

ದೇವಾಲಯ ಆಡಳಿತ, ಯಾತ್ರಿಕರ ಸೌಲಭ್ಯಗಳು, ಭದ್ರತೆ, ನೈರ್ಮಲ್ಯ, ತಾಂತ್ರಿಕ ಕಾರ್ಯಾಚರಣೆಗಳು ಮತ್ತು ಇತರ ಸೇವೆಗಳಲ್ಲಿ ತೊಡಗಿರುವ ಸಿಬ್ಬಂದಿಯ ನಿರ್ದಿಷ್ಟ ಜವಾಬ್ದಾರಿಗಳಿಗೆ ಅನುಗುಣವಾಗಿ ವಸ್ತ್ರಸಂಹಿತೆ ರೂಪಿಸಲಾಗುತ್ತಿದೆ. ಇದರಿಂದ, ಭಕ್ತರು ಸಂಕೀರ್ಣದೊಳಗೆ ನಿಯೋಜಿಸಲಾದ ಸಿಬ್ಬಂದಿಯನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ ಎಂಬುದು ಇದರ ಹಿಂದಿರುವ ಉದ್ದೇಶ.

ನೂತನ ಸಿಇಒಗೆ ವಿಶೇಷ ಅಧಿಕಾರ ನೀಡುವ ಸಾಧ್ಯತೆ: ಹೊಸ ನೀತಿಯಲ್ಲಿ, ಕೆಲಸ, ಜವಾಬ್ದಾರಿಗಳು, ಶಿಸ್ತು, ನಡವಳಿಕೆ ಮತ್ತು ಕರ್ತವ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಸಹ ಒಳಗೊಂಡಿದೆ. ನೂತನ ಸಿಇಒ ಜಿತೇಂದ್ರ ಮಿಶ್ರಾ ಅವರಿಗೆ ವಿಶೇಷ ಅಧಿಕಾರಗಳನ್ನು ನೀಡುವ ಸಾಧ್ಯತೆಯೂ ಇದೆ. ಆಡಳಿತ ಮತ್ತು ಸಿಬ್ಬಂದಿ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರ ಇದಾಗಿರಲಿದೆ ಎಂದು ತಿಳಿದುಬಂದಿದೆ.

ಕರಡು ನೀತಿಯನ್ನು ಸಿದ್ಧಪಡಿಸಿದ ನಂತರ, ಅದನ್ನು ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ. ಆ ಬಳಿಕವೇ ಮಂದಿರದಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೆ ಹೊಸ ನಿಯಮಗಳು ಅನ್ವಯಿಸಲಿದೆ ಎಂದು ಟ್ರಸ್ಟ್​​ನ ಪ್ರಧಾನ ಕಾರ್ಯದರ್ಶಿ ಗೋವಿಂದ್ ದೇವ್ ಗಿರಿ ಅವರು ಮಾಹಿತಿ ನೀಡಿದ್ದಾರೆ.