ಶಿವರಾಜ್ ಕುಮಾರ್ ಹಾಗೂ ತಮಿಳು ಯುವ ನಟ ಅಭಿಶನ್ ಜೀವಿಂತ್ ಅವರ ನಟನೆಯಲ್ಲಿ ‘ಪಿಕಾಸೊ’ ಸಿನಿಮಾ ಮೂಡಿಬರುತ್ತಿದೆ. ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅನ್ನು ನೆನ್ನೆ (ಸೆ.7) ಅನಾವರಣಗೊಳಿಸಲಾಗಿದೆ. ರಿಷಬ್ ಶೆಟ್ಟಿ ಅವರು ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಗೌತಮ್ ಶಿವರಾಮನ್ ಅವರು ‘ಪಿಕಾಸೊ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದು, ಅಪ್ಪನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರತಂಡ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಶಿವರಾಜ್ ಕುಮಾರ್ ಹಾಗೂ ಅಭಿಶನ್ ಜೀವಿಂತ್ ಅವರು ಪಂಚೆ ತೊಟ್ಟು ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ನಟ ಅಭಿಶನ್ ಜೀವಿಂತ್ ಅವರು ಪೋಸ್ಟ್ ಹಂಚಿಕೊಂಡು, ‘ಪಿಕಾಸೊ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದು ಬರೆದಿದ್ದಾರೆ. ನಟ ರಿಷಬ್ ಶೆಟ್ಟಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು, ‘ನಮ್ಮ ಪ್ರೀತಿಯ ಶಿವಣ್ಣ ನಟನೆಯ ‘ಪಿಕಾಸೊ’ ಸಿನಿಮಾದ ಮೊದಲ ಲುಕ್ ಬಿಡುಗಡೆಗೊಂಡಿದೆ. ಚಿತ್ರತಂಡಕ್ಕೆ ಶುಭವಾಗಲಿ’ ಎಂದು ಬರೆದುಕೊಂಡಿದ್ದಾರೆ.
‘ಡ್ರಾಮಾ ಕಂಪನಿ’ ಬ್ಯಾನರ್ ಅಡಿಯಲ್ಲಿ ಎ.ಬಾಲಮುರುಗನ್ ಅವರು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಶಿವಾನಿ ನಗರಂ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾಗೆ ಲಿಯೋನ್ ಜೇಮ್ಸ್ ಅವರ ಸಂಗೀತವಿದೆ. ಶಿವರಾಜ್ ಕುಮಾರ್ ಅವರು ಕೊನೆಯದಾಗಿ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್ ನಟನೆಯ ಮುಂಬರುವ ‘ಜೈಲರ್ 2’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

