ಉಡುಪಿ: ಅಪಘಾತಕ್ಕೀಡಾದ ವಾಹನವನ್ನು ಹೆದ್ದಾರಿಯಿಂದ ಮೇಲೆತ್ತುವ ಕಾರ್ಯಾಚರಣೆ ವೇಳೆ ನಿಯಂತ್ರಣ ತಪ್ಪಿದ ಸರಕು ಸಾಗಣೆ ಲಾರಿಯೊಂದು ಹೈವೇ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಶಿರೂರಿನ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ. ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಸರಕು ತುಂಬಿದ ಲಾರಿಯನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ತಡೆದು ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು.
ಈ ವೇಳೆ ಇಳಿಜಾರು ರಸ್ತೆಯಲ್ಲಿ ಅತಿವೇಗವಾಗಿ ಬಂದ ಮತ್ತೊಂದು ಲಾರಿ ನಿಯಂತ್ರಣ ತಪ್ಪಿ ಹೈವೇ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಸಮೀಪದಲ್ಲಿದ್ದ ನಾಲ್ಕು ಬೈಕ್ಗಳಿಗೂ ಡಿಕ್ಕಿ ಹೊಡೆದಿದೆ. ರಬ್ಬರ್ ತುಂಬಿಕೊಂಡಿದ್ದ ಈ ಲಾರಿ ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

