ಉಡುಪಿ: ಕೊಲ್ಲಿ ರಾಷ್ಟ್ರದಲ್ಲಿ ಯುದ್ಧಭೀತಿಯಿಂದ ಉಂಟಾಗಿರುವ ಅನಿಲ ವ್ಯತ್ಯಯದಿಂದಾಗಿ ಹೋಟೆಲ್ ಮಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಎರಡು ದಿನಗಳೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿ ಜಿಲ್ಲಾ ಹೋಟೆಲ್ ಮಾಲಕರ ಸಂಘದ ವತಿಯಿಂದ ನಗರದ ಡಯಾನ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಣಿಜ್ಯ ಬಳಕೆಯ ಅನಿಲ ಅಲಭ್ಯತೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂದಿದ್ದಾರೆ.
ಕೊಲ್ಲಿ ರಾರ್ಷ್ಟಗಳ ಯುದ್ಧದಿಂದಾಗಿ ಇಡೀ ಜಗತ್ತಿನಾದ್ಯಂತ ಉಂಟಾಗಿರುವ ತಾತ್ಕಾಲಿಕ ಸಮಸ್ಯೆಯಿದು. ಹಾಗಾಗಿ ಲಭ್ಯವಿರುವ ಅನಿಲವನು ಹೇಗೆ ವಿತರಿಸಬೇಕು. ಎನ್ನುವ ಬಗ್ಗೆ ಚಿಂತಿಸಬೇಕು. ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳದೇ ಸಮಸ್ಯೆ ಬಗೆಹರಿಸಿಕೊಳ್ಳುವ ಕಡೆ ಗಮನಹರಿಸುವ ಅಗತ್ಯತೆ ಇದೆ.
ಒಂದು ವಾರದಲ್ಲಿ ಈ ಸಮಸ್ಯೆ ಪರಿಹಾರವಾಗಲಿದ್ದು, ಅಲ್ಲಿವರೆಗೆ ಲಭ್ಯವಿರುವ ಸಿಲಿಂಡರ್‌ಗಳ ವಿತರಣೆಗೆ ವಿಧಿಸಿರುವ ನಿಯಮವನ್ನು ಸಡಿಲಗೊಳಿಸಿ, ಹೋಟೆಲ್ ಮಾಲಕರಿಗೂ ಅನಿಲ ವಿತರಿಸಲು ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದರು.

