ಉಡುಪಿ: ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಶುಕ್ರವಾರ ಸದಸ್ಯರೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಆಹಾರ, ಚಿಕಿತ್ಸೆ ಮತ್ತು ಆರೈಕೆ ನೀಡಿ ಆರೋಗ್ಯವನ್ನು ಸುಧಾರಿಸುವ ಮಕ್ಕಳ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರ(ಎನ್‌ಆರ್‌ಸಿ)ವೇ ಉಡುಪಿ ಜಿಲ್ಲಾ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಲ್ಲದೆ ಇರುವುದು ಖೇಧಕರ ಹೇಳಿದರು.

ಪ್ರತಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಈ ಕೇಂದ್ರ ಇದೆ. ಆದರೆ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸರಕಾರದ ಸುಪರ್ದಿಗೆ ಬಂದು ನಾಲ್ಕು ವರ್ಷಗಳಾದರೂ ಇನ್ನೂ ಎನ್‌ಆರ್‌ಸಿಯನ್ನು ಆರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬಹಳ ಬೇಸರದ ಸಂಗತಿ. ಈ ಬಗ್ಗೆ ಜಿಲ್ಲಾಡಳಿತ, ಡಿಎಚ್‌ಓ, ಜಿಲ್ಲಾ ಸರ್ಜನ್ ಯಾವ ಕಾರಣಕ್ಕಾಗಿ ಇದನ್ನು ಇನ್ನೂ ಆರಂಭಿಸಿಲ್ಲ ಎಂಬುದರ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಮಕ್ಕಳು ದಾಖಲಾದ ಮೇಲೆ ಪ್ರತಿಯೊಂದು ಹೆಸರು, ತಾಯಿ ಹೆಸರು ದಾಖಲೆ ಮಾಡಿ, ಬಳಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆದರೆ ಇಲ್ಲಿ ಕೇಸ್ ಶೀಟ್ ನೋಡಿದರೆ ಹಿನ್ನೆಲೆಯಲ್ಲಿ ಬರೆಯಲಾಗಿದೆ. ವಿವರ ಮಗುವಿನ ತಂದೆ ತಾಯಿ ಹೆಸರು ವಿಳಾಸ ಕೂಡ ಇಲ್ಲ. ಇದರಿಂದ ತಪ್ಪಾದ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚು ಇರುತ್ತದೆ. ಇದರಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಅನಾವಶ್ಯಕವಾಗಿ ಆ ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಆದುದರಿಂದ ವೈದ್ಯರು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.

View this post on Instagram

A post shared by News Karnataka (@newskarnataka)