ಉಡುಪಿ: ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಘ್ನವಿನಾಶಕ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಗಣಪನಿಗೆ ರೂಪ ನೀಡುವ ಕುಶಲಕರ್ಮಿಗಳಿಗೆ ಮಾತ್ರ ಅಗತ್ಯವಾದ ಮಣ್ಣಿನ ಕೊರತೆ ಎದುರಾಗಿದೆ.

ಉಡುಪಿಯ ಕಿದಿಯೂರಿನ ಭಾಸ್ಕರ್ ಕೋಟ್ಯಾನ್ ಕುಟುಂಬ ಕಳೆದ 35 ವರ್ಷಗಳಿಂದ ಗಣಪತಿ ಮೂರ್ತಿ ನಿರ್ಮಾಣದ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಪ್ರತಿ ವರ್ಷ 10ರಿಂದ 15ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ನಿರ್ಮಿಸುವ ಈ ಕುಟುಂಬಕ್ಕೆ, ಈ ಬಾರಿ ಅಗತ್ಯ ಪ್ರಮಾಣದ ಜೆಡಿ ಮಣ್ಣು ದೊರೆಯದೆ ಸಂಕಷ್ಟ ಎದುರಾಗಿದೆ.

ಮಣ್ಣಿಗೆ ರೂಪ ಕೊಟ್ಟು, ಬಣ್ಣ ಹಚ್ಚಿ, ಭಕ್ತಿಯ ಪ್ರತಿರೂಪವಾಗಿ ಗಣಪನನ್ನು ಸಿದ್ಧಪಡಿಸುವುದು ಭಾಸ್ಕರ್ ಕೋಟ್ಯಾನ್ ಕುಟುಂಬದ ಪರಂಪರೆಯ ಕಾಯಕ. ಮೂರ್ತಿಯ ಗಾತ್ರಕ್ಕೆ ಅನುಗುಣವಾಗಿ ಮಣ್ಣನ್ನು ಸಿದ್ಧಪಡಿಸಿ, ಹಂತ ಹಂತವಾಗಿ ರೂಪ ನೀಡಲಾಗುತ್ತದೆ. ಬಳಿಕ ಬಣ್ಣಗಳ ಮೂಲಕ ಗಣಪನಿಗೆ ಅಂತಿಮ ಸ್ಪರ್ಶ ನೀಡಲಾಗುತ್ತದೆ.

ಇದು ಕೇವಲ ಭಾಸ್ಕರ್ ಕೋಟ್ಯಾನ್ ಅವರೊಬ್ಬರ ಕೆಲಸವಲ್ಲ. ಇಡೀ ಕುಟುಂಬವೇ ಈ ಕಾಯಕದಲ್ಲಿ ಕೈಜೋಡಿಸುತ್ತದೆ. ದಂಪತಿಗಳೊಂದಿಗೆ ಮಕ್ಕಳು ಕೂಡ ಮೂರ್ತಿ ನಿರ್ಮಾಣದ ವಿವಿಧ ಹಂತಗಳಲ್ಲಿ ಸಹಕರಿಸುತ್ತಾರೆ. ವಿಶೇಷವಾಗಿ ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮೂರ್ತಿಗಳ ಅಂತಿಮ ಹಂತದ ಕೆಲಸದಲ್ಲಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ತೊಡಗಿಸಿಕೊಳ್ಳುತ್ತಾರೆ.

ಕಾರ್ಖಾನೆ ಬಂದ್, ಮಣ್ಣಿನ ಕೊರತೆ
ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಾಂಪ್ರದಾಯಿಕ ಕಾಯಕಕ್ಕೆ ಇದೀಗ ಮಣ್ಣಿನ ಕೊರತೆಯ ಬಿಸಿ ತಟ್ಟಿದೆ. ಗಣಪತಿ ಮೂರ್ತಿ ನಿರ್ಮಾಣಕ್ಕೆ ಅಗತ್ಯವಾಗಿರುವ ಜೆಡಿ ಮಣ್ಣು ಸಿಗುವುದು ಕಷ್ಟವಾಗಿದೆ. ಮಣ್ಣು ಪೂರೈಕೆ ಮಾಡುತ್ತಿದ್ದ ಕಾರ್ಖಾನೆ ಬಂದ್ ಆಗಿರುವುದರಿಂದ ಅಗತ್ಯ ಪ್ರಮಾಣದಲ್ಲಿ ಮಣ್ಣು ದೊರೆಯುತ್ತಿಲ್ಲ.

ಮಣ್ಣಿನ ಪೂರೈಕೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಗಣಪತಿ ಮೂರ್ತಿ ನಿರ್ಮಾಣದ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಭಾಸ್ಕರ್ ಕೋಟ್ಯಾನ್ ಅವರದ್ದು.
ಗಣಪನ ನೆಪದಲ್ಲಿ ಒಂದಾಗುವ ಕುಟುಂಬ

ಮೂರ್ತಿ ನಿರ್ಮಾಣದ ಕಾಯಕದ ಜೊತೆಗೆ ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂದರ್ಭವೂ ಇದಾಗಿದೆ. ಕೆಲಸದ ನಿಮಿತ್ತ ಮಕ್ಕಳು ಬೇರೆ ಬೇರೆ ಊರುಗಳಿಗೆ ತೆರಳಿದ್ದರೂ ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಕುಟುಂಬ ಮತ್ತೆ ಒಂದಾಗುತ್ತದೆ.

ತಂದೆಯೊಂದಿಗೆ ಸೇರಿ ಗಣಪನಿಗೆ ರೂಪ ನೀಡುವ ಕೆಲಸದಲ್ಲಿ ಕೈಜೋಡಿಸುವುದು ಮಕ್ಕಳಿಗೂ ಸಂತಸದ ವಿಚಾರ. ಹೀಗಾಗಿ ಗಣಪತಿ ಮೂರ್ತಿ ನಿರ್ಮಾಣ ಇಲ್ಲಿ ಕೇವಲ ವೃತ್ತಿಯಾಗದೆ, ಕುಟುಂಬವನ್ನು ಬೆಸೆಯುವ ಪರಂಪರೆಯಾಗಿ ಮುಂದುವರಿದಿದೆ.

35 ವರ್ಷಗಳಿಂದ ಮಣ್ಣಿಗೆ ಜೀವ ತುಂಬಿ ಗಣಪನನ್ನು ರೂಪಿಸುತ್ತಿರುವ ಭಾಸ್ಕರ್ ಕೋಟ್ಯಾನ್ ಕುಟುಂಬದ ಕಾಯಕದಲ್ಲಿ ಭಕ್ತಿ, ಪರಂಪರೆ ಹಾಗೂ ಕುಟುಂಬದ ಒಗ್ಗಟ್ಟು ಮೇಳೈಸಿದೆ. ಗಣಪನಿಗೆ ರೂಪ ನೀಡುವ ಈ ಕುಶಲಕರ್ಮಿಗಳ ಕೈಗಳಿಗೆ ಅಗತ್ಯವಾದ ಮಣ್ಣು ನಿರಂತರವಾಗಿ ದೊರೆತಾಗ ಮಾತ್ರ ಇಂತಹ ಸಾಂಪ್ರದಾಯಿಕ ಕಲೆ ಮತ್ತು ಕಾಯಕವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಲು ಸಾಧ್ಯ.