ನೆಲ್ಯಾಡಿ: 75ರ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಹಾಗೂ ಬೆಥನಿ ವಿದ್ಯಾಸಂಸ್ಥೆ ನಡುವೆ ಯು-ಟರ್ನ್ ಕಲ್ಪಿಸುವಂತೆ ಆಗ್ರಹಿಸಿ ಸೆ. 9ರಂದು ಬೆಳಗ್ಗೆ ನೆಲ್ಯಾಡಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಡಿಸಿ ಮತ್ತು ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅವರು, ಸೇಫ್ಟಿ ಇಂಜಿನಿಯರ್ ತಂಡದಿಂದ ಪರಿಶೀಲಿಸಿ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭದಿಂದಲೇ ಈ ಭಾಗದಲ್ಲಿ ಯು-ಟರ್ನ್ ಕಲ್ಪಿಸುವಂತೆ ಸ್ಥಳೀಯರು ಸಂಸದರು, ಶಾಸಕರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗ್ರಾಮ ಪಂಚಾಯತ್ ಮತ್ತು ಗುತ್ತಿಗೆದಾರರಿಗೆ ಮನವಿ ಸಲ್ಲಿಸಿದ್ದರು. ಆರಂಭದಲ್ಲಿ ಭರವಸೆ ನೀಡಿದ್ದರೂ ಕಾಮಗಾರಿ ಅಂತಿಮ ಹಂತ ತಲುಪಿದರೂ ಯು-ಟರ್ನ್ ಕಲ್ಪಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಾಗ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿದ್ದು, ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಮಾರ್ಗ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಇಲ್ಲಿವೆ. ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಮಾರ್ಗ ಬಳಸುತ್ತಿದ್ದು, ಯು-ಟರ್ನ್ ಇಲ್ಲದಿದ್ದರೆ 2 ರಿಂದ 3 ಕಿ.ಮೀ. ಸುತ್ತು ಬಳಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರತಿಭಟನೆಗೆ ನೆಲ್ಯಾಡಿ ವ್ಯಾಪ್ತಿಯ 51ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿದ್ದವು.

View this post on Instagram

A post shared by News Karnataka (@newskarnataka)