ನಂಜನಗೂಡು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೊಸಕಡಜೆಟ್ಟಿ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣವನ್ನು ರಾಜಿ ಮೂಲಕ ಮುಚ್ಚಿಹಾಕಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮೃತ ಮಹಿಳೆಯನ್ನು ಹೊಸಕಡಜೆಟ್ಟಿ ಗ್ರಾಮದ ಮಹದೇವಮ್ಮ ಅಲಿಯಾಸ್ ಗಾಳಿಮಾದಿ ಎಂದು ಗುರುತಿಸಲಾಗಿದೆ. ಮಹದೇವಮ್ಮ ಅವರು ಗ್ರಾಮದ ವ್ಯಕ್ತಿಯೊಬ್ಬರಿಗೆ ಹಣ ಸಾಲ ನೀಡಿದ್ದರು ಎನ್ನಲಾಗಿದ್ದು, ಹಣ ವಸೂಲಿಗೆ ತೆರಳಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನವೀನ್ ಎಂಬಾತ ಕಿರಿಕ್ ತೆಗೆದು ಕೋಲಿನಿಂದ ಮಹದೇವಮ್ಮ ಅವರ ತಲೆಗೆ ಹೊಡೆದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಹದೇವಮ್ಮ ಅವರು ಬಳಿಕ ತಮ್ಮ ಸಹೋದರನ ಮನೆಗೆ ತೆರಳಿ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆರೋಪಿ ನವೀನ್ ಪರವಾಗಿ ಬಂದ ಕೆಲ ಮಧ್ಯವರ್ತಿಗಳು ಮೃತಳ ಮಗಳು ಗೀತಾ ಅವರಿಗೆ ₹20 ಸಾವಿರ ಹಣ ನೀಡಿ ರಾಜಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದರಿಂದ ಆಕ್ರೋಶಗೊಂಡ ಗೀತಾ, “ನನಗೆ ಹಣ ಬೇಡ, ನನ್ನ ತಾಯಿಯ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು” ಎಂದು ಕಣ್ಣೀರಿಟ್ಟು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ, ಪೊಲೀಸ್ ಠಾಣೆಯ ಆವರಣದ ಬಳಿಯೇ ರಾಜಿ ಸಂಧಾನಕ್ಕೆ ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಗಂಭೀರ ಸ್ವರೂಪದ ಪ್ರಕರಣದಲ್ಲಿ ಇಂತಹ ರಾಜಿ ಪ್ರಯತ್ನ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ತಾಯಿಯನ್ನು ಕಳೆದುಕೊಂಡಿದ್ದೇವೆ. ಹಣ ಪಡೆದು ಪ್ರಕರಣ ಮುಚ್ಚಿಹಾಕಲು ನಮಗೆ ಯಾವುದೇ ಆಸಕ್ತಿ ಇಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು” ಎಂದು ಮೃತಳ ಮಗಳು ಗೀತಾ ಆಗ್ರಹಿಸಿದ್ದಾರೆ.

ಘಟನೆ ನಡೆದು ೨೪ ಗಂಟೆಗಳು ಕಳೆದರೂ ಪ್ರಕರಣ ದಾಖಲಾಗಿಲ್ಲ ಎಂಬ ಕುಟುಂಬಸ್ಥರ ಆರೋಪ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ನೈಜ ಸಂಗತಿ ತನಿಖೆಯಿಂದ ಹೊರಬರಬೇಕಿದ್ದು, ಪೊಲೀಸರು ತಕ್ಷಣ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸ್ ಇಲಾಖೆಯ ಅಧಿಕೃತ ಸ್ಪಷ್ಟನೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.