ಮೈಸೂರು: ಮೊನ್ನೆ ಮೊನ್ನೆಯಷ್ಟೆ ಸಂಸತ್ತಿನಲ್ಲಿ ಭಾರಿ ಭದ್ರತಾ ಲೋಪವಾಗಿತ್ತು. ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದು ಸಂಸತ್ತಿನೊಳಗೆ ನುಗ್ಗಿದ್ದ ಇಬ್ಬರು ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ್ದರು. ಆದರೆ ಈ ಕೃತ್ಯ ನಡೆಸಿದ್ದವರಿಗೆ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಅವರು ಇದುವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಈ ಕುರಿತು ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
ಅಧಿವೇಶನ ಮುಗಿಸಿ ವಾಪಸಾಗಿರುವ ಅವರು ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿ, ಆ ವಿಚಾರದಲ್ಲಿ ಯಾವುದೇ ವಿವರಣೆ ಕೊಡುವುದಿಲ್ಲ. ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ’ ಎಂದರು. ‘ಪ್ರತಾಪ ಸಿಂಹ ದೇಶದ್ರೋಹಿಯೇ ಅಥವಾ ದೇಶಪ್ರೇಮಿಯೇ ಎನ್ನುವುದು ಬೆಟ್ಟದ ಚಾಮುಂಡಿ ತಾಯಿ ಹಾಗೂ ಕೊಡಗಿನ ಕಾವೇರಿ ತಾಯಿಗೆ ಗೊತ್ತು. ನನ್ನ ಲೇಖನಗಳನ್ನು ಓದಿದ ಓದುಗರಿಗೆ ಗೊತ್ತು’ ಎಂದು ಹೇಳಿದ್ದಾರೆ.