News Karnataka Kannada
Sunday, May 05 2024
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ಅಧ್ಯಯನ ಅಗತ್ಯ: ಡಿವೈ.ಎಸ್.ಪಿ. ಎಂ. ಮಹೇಂದ್ರ

Untitled 1 Recovered
Photo Credit :

ಮೈಸೂರು: ಸಕಲ ಪೂರ್ವ ಸಿದ್ಧತೆಯೊಂದಿಗೆ ಸೂಕ್ತ ವೇಳಾಪಟ್ಟಿ ತಯಾರಿಸಿಕೊಂಡು, ಸಂಗ್ರಹಿಸಿದ ಪುಸ್ತಕಗಳನ್ನು ಏಕಾಗ್ರತೆ ಮತ್ತು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ವಿಷಯ ಗ್ರಹಿಸಿ  ಜೀರ್ಣಿಸಿಕೊಂಡರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ಉತ್ತೀರ್ಣರಾಗಬಹುದು ಎಂದು ಪ್ರೊಬೇಷನರಿ ಡಿವೈ.ಎಸ್.ಪಿ. ಎಂ. ಮಹೇಂದ್ರ ಆಕಾಂಕ್ಷಿಗಳಿಗೆ ಸಲಹೆ  ನೀಡಿದರು.

ನಗರದ ಸರಸ್ವತಿಪುರಂನಲ್ಲಿರುವ ಗ್ಲೋಬಲ್ ಕಾಂಪಿಟೇಟಿವ್ ಅಕಾಡೆಮಿಯ ವತಿಯಿಂದ ನಡೆದ ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳ ಕುರಿತ ಒಂದು ದಿನದ ಉಚಿತ ಕಾರ್ಯಾಗಾರ ಉದ್ಘಾಟಿಸಿದ ಮಾತನಾಡಿದ ಅವರು, ಫೇಸ್ ಬುಕ್ ಮತ್ತು ವಾಟ್ಸಾಪ್ ಸಮಯ ಕೊಲ್ಲುತ್ತವೆ. ಇದರಿಂದ ದೂರ ಉಳಿದು ವ್ಯಾಪಕವಾಗಿ ಓದಿ ಮುಖ್ಯ ಮಾಹಿತಿಗಳನ್ನು ಟಿಪ್ಪಣಿ ಮಾಡಿಕೊಳ್ಳುವ ಮೂಲಕ ಪರೀಕ್ಷೆ ತಯಾರಿ ಮಾಡಿಕೊಳ್ಳಬೇಕು ಎಂದರು.

ಎಲ್ಲ ಪರೀಕ್ಷೆಗೂ ಸ್ಪರ್ಧಾಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಯಾವುದೇ ಪರೀಕ್ಷೆಯಾದರೂ ಸಾವಿರ ಹುದ್ದೆಗೆ ಲಕ್ಷಾಂತರ ಮಂದಿ ಪರೀಕ್ಷೆ ಬರೆಯುತ್ತಾರೆ. ಯಾವುದೇ ಪರೀಕ್ಷಾ ವಾಮಮಾರ್ಗ ಹಿಡಿಯದೆ, ಯಾವುದೇ ವದಂತಿಗಳಿಗೆ ಕೊವಿಗೊಡದೆ, ಜ್ಞಾನವೇ ಶಕ್ತಿ ಎಂದರಿತು ಪ್ರಾಮಾಣಿಕವಾಗಿ  ಪರೀಕ್ಷೆ ಬರೆದು ಬಯಸಿದ ಹುದ್ದೆಗೆ ಆಯ್ಕೆಯಾಗಿ ಸಮಾಜಕ್ಕೆ  ಉತ್ತಮ ಅಧಿಕಾರಿಗಳಾಗಿ ಎಂದು ಶುಭಹಾರೈಸಿದರು.

ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ವರ್ತಮಾನದ ಕಾಲಘಟ್ಟ ಸ್ಪರ್ಧಾತ್ಮಕವಾದದ್ದು. ಯಾವುದೇ ನೌಕರಿಗೆ ಹೋಗಬೇಕಾದರೂ ಸ್ಪರ್ಧೆಯ ತೀವ್ರ ಪೈಪೋಟಿ ಇದ್ದೇ ಇರುತ್ತದೆ. ಗುರಿ ಮತ್ತು ದಾರಿಯ ಸ್ಪಷ್ಟಪಡಿಕೊಂಡು ಲಭ್ಯವಿರುವ ಪುಸ್ತಕಗಳು, ಪತ್ರಿಕೆಗಳು, ಗ್ರಂಥಾಲಯಗಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ವಿಷಯ ಮತ್ತು ಮಾಹಿತಿ ಸಂಗ್ರಹಿಸಿ ಶ್ರದ್ಧೆ, ಆಸಕ್ತಿ, ಆತ್ಮವಿಶ್ವಾಸದಿಂದ ಆಳವಾದ ಅಧ್ಯಯನ ಮಾಡಿ ಓದಬೇಕು. ಓದಿದ್ದನ್ನು ಮನನ ಮಾಡಿಕೊಂಡು, ಆಗಾಗ ಪುನರಾವಲೋಕಿಸುವುದರಿಂದ ಕಲಿತ ವಿಚಾರ ಬಲವಾಗಿ ಉಳಿಯುತ್ತದೆ ಎಂದು ಕಿವಿಮಾತು  ಹೇಳಿದರು.

ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎ.ಇ. ರಘು ಆಲನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿಪುರಂ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಸಿ.ಎಂ. ರವೀಂದ್ರ ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗ್ಗೆ’ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಸಂಪನ್ಮೂಲ ವ್ಯಕ್ತಿ ಕೆ. ರಾಜೇಶ್ ಅವರ ‘ಸಾಮಾನ್ಯ ಭೂಗೋಳ ಶಾಸ್ತ್ರ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಅಧಿಕ ಮಂದಿ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಜೊತೆಗೆ ಸಂವಾದ ಸಹ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು