News Karnataka Kannada
Wednesday, May 01 2024
ಮೈಸೂರು

ಮನುಷ್ಯತ್ವದಿಂದ ದೇವರಾದ ಸಿದ್ಧಗಂಗಾಶ್ರೀಗಳು: ಬನ್ನೂರು ರಾಜು

ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಮನುಷ್ಯತ್ವದಿಂದ ದೈವತ್ವಕ್ಕೇರಿದ ದೇವಪುರುಷರು ಸಿದ್ಧ ಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳೆಂದು ಸಾಹಿತಿ ಬನ್ನೂರು ಕೆ.ರಾಜು ಗುಣಗಾನ ಮಾಡಿದರು.
Photo Credit : By Author

ಮೈಸೂರು: ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಮನುಷ್ಯತ್ವದಿಂದ ದೈವತ್ವಕ್ಕೇರಿದ ದೇವಪುರುಷರು ಸಿದ್ಧ ಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳೆಂದು ಸಾಹಿತಿ ಬನ್ನೂರು ಕೆ.ರಾಜು ಗುಣಗಾನ ಮಾಡಿದರು.

ನಗರದ ಕೃಷ್ಣಮೂರ್ತಿ ಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಸಿದ್ಧಗಂಗೆಯ ಸಿದ್ಧಿ ಪುರುಷ ಶ್ರೀ ಶಿವಕುಮಾರ ಸ್ವಾಮೀಜಿಗಳ 117 ನೇ ಜಯಂತಿ ಮತ್ತು ಶ್ರೀ ಸಿದ್ಧ ಗಂಗಾ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ನಡೆದಾಡುವ ದೇವರೆಂದೇ ನಾಡಿನಾದ್ಯಂತ ಹೆಸರಾಗಿ ತ್ರಿವಿಧ ದಾಸೋಹಕ್ಕೊಂದು ದೈವತ್ವ ತಂದು ಕೊಟ್ಟ ತ್ರಿವಿಧ ದಾಸೋಹ ಬ್ರಹ್ಮ ಸಿದ್ಧಗಂಗೆಯ ಸಿದ್ಧಿ ಪುರುಷ ಶ್ರೀ ಶಿವಕುಮಾರ ಸ್ವಾಮೀಜಿ ಗಳು ಬುದ್ಧ, ಬಸವ, ಯೇಸು, ಗಾಂಧಿ, ಅಂಬೇಡ್ಕರ್, ಪೈಗಂಬರ್ , ಪ್ಲೇಟೋ, ಅರಿ ಸ್ಟಾಟಲ್ , ಮಹಾವೀರ, ಮದರ್ ತೆರೆಸಾ, ರಾಮಕೃಷ್ಣ ಪರಹಂಸ, ವಿವೇಕಾನಂದ ಮುಂತಾದ ಜಗತ್ತಿನ ನೂರಾರು ಚಿಂತಕರ,ದಾರ್ಶನಿಕರ, ಮಹಾತ್ಮರ, ಮಹನೀಯರ ತತ್ವ್ಞಾದರ್ಶಗಳ ಒಟ್ಟು ಮೊತ್ತ ದಂತಿದ್ದರೆಂದರು.

ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಸಿದ್ದಗಂಗಾ ಮಠಾಧೀಶರಾಗಿ ಪ್ರಸಿದ್ಧರಾಗಿದ್ದ ‘ಕರ್ನಾಟಕ ರತ್ನ’ ಡಾ.ಶಿವಕುಮಾರ ಸ್ವಾಮೀಜಿ ಅವರು ಅನ್ನಕ್ಕಾಗಿ ಸಿದ್ಧಗಂಗೆಯಲ್ಲಿ ಅಂದು ಹಚ್ಚಿದ ಒಲೆ ಇಂದಿಗೂ ಉರಿಯುತ್ತಲೇ ಇದೆ. ಆಶ್ರಯಕ್ಕಾಗಿ ಅವರು ಅಡಿಗಲ್ಲಿಟ್ಟ ತಾಣ ಸೇವಾಸೌಧವಾಗಿ ಈಗಲೂ ಬೆಳೆಯುತ್ತಲೇ ಇದೆ. ಅವರು ಹೊತ್ತಿಸಿದ್ದ ಅಕ್ಷರ ಜ್ಯೋತಿ ಆರದ ನಂದಾ ದೀಪವಾಗಿ ಈ ಕ್ಷಣಕ್ಕೂ ಬೆಳಗುತ್ತಲೇ ಇದೆ.

ಪ್ರತಿನಿತ್ಯ ಇಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಊಟ ಮಾಡುತ್ತಾರೆಂದರೆ, ಸಹಸ್ರಾರು ಮಂದಿ ಆಶ್ರಿತರಾಗಿದ್ದಾರೆಂದರೆ, ಈ ಸಂಸ್ಥೆಗಳಲ್ಲಿ ಸುಮಾರು ಅರ್ಧಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದರೆ ಯಾರು  ಬೇಕಾದರೂ ಊಹಿಸಬಹುದು ಶಿವಕುಮಾರ ಸ್ವಾಮೀಜಿಯ ಮಹಾ ಕರ್ತೃತ್ವ ಶಕ್ತಿಯನ್ನು ಹಾಗೂ ಕಾಯಕದ ಮಹಾ ಮಹಿಮೆಯನ್ನು. ಇವರನ್ನು ನಡೆದಾಡುವ ದೇವರು, ಮಹಾ ಮಹಿಮರು, ಅವತಾರ ಪುರುಷರು, ಕರ್ಮ ಯೋಗಿಗಳು, ಇಪ್ಪತ್ತೊಂದನೆ ಶತಮಾನದ ಬಸವಣ್ಣನವರು ಹೀಗೆ ಹಲವಾರು ಪದ ಪುಂಜಗಳಿಂದ, ಬಿರುದು ಬಾವಲಿಗಳಿಂದ ಕರೆದು ಆನಂದಿಸುವ ಭಕ್ತಜನ ಸಮೂಹವೇ ಇದೆ. ಇವರಲ್ಲಿ ಹೆಚ್ಚಿನವರು ಸಿದ್ದಗಂಗೆಯ ಸ್ವಾಮೀಜಿಯ ಸದ್ಬೆಳಕಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡವರೇ ಆಗಿದ್ದಾರೆ.

ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಮತ್ತು ಖ್ಯಾತ ವಿದ್ವಾಂಸ ಅಭಿನವ ಪಂಪ ಡಾ. ಎಲ್.ಬಸವರಾಜು ಅವರಂತಹ ಅನೇಕ ಮಂದಿ ಮಹಾ ಪ್ರತಿಭೆಗಳು ಇಲ್ಲಿ ಅರಳಿ ಜಗದ್ವಿಖ್ಯಾತರಾಗಿ ಸಿದ್ದಗಂಗೆಯ ಕೀರ್ತಿಯನ್ನು ಜಗದಗಲ ಬೆಳಗಿದ್ದಾರೆಂದು ಹೇಳಿದ ಅವರು, ಸಿದ್ಧಗಂಗಾ ಶ್ರೀಗಳು ಅಕ್ಷರಶಃ 12ನೇ ಶತಮಾನದ ಬಸವಾದಿ ಶರಣರ ಆಶಯದ ಅನ್ವರ್ಥದಂತಿದ್ದು 111 ವರ್ಷಗಳ ಸುದೀರ್ಘಕಾಲ ಕನ್ನಡ ನಾಡಿನ ಬೆಳಕಾಗಿ ಬದುಕಿದ್ದರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಗಳ ಸ್ಮರಣಾರ್ಥ ವಿವಿಧ ಕ್ಷೇತ್ರಗಳ ಸಾಧಕರಾದ ಹೆಚ್. ವಿ. ಮುರಳೀಧರ್ (ಶಿಕ್ಷಣ), ರಾಮದಾಸ್ (ಸಾರ್ವಜನಿಕ ಸೇವೆ), ಟಿ.ಎಂ.ರವಿಕುಮಾರ್ (ಉದ್ಯಮಿ), ಉಮ್ಮತ್ತೂರು ಚಂದ್ರು (ಸಮಾಜ ಸೇವೆ), ಸುರೇಶ್ ಗೌಡ (ಕಲಾ ಕ್ಷೇತ್ರ), ರುಕ್ಮಿಣಿ (ಸಮಾಜ ಸೇವೆ) ಇವರುಗಳಿಗೆ ಪ್ರಸ್ತುತ ಸಾಲಿನ ಪ್ರತಿಷ್ಠಿತ “ಶ್ರೀ ಸಿದ್ಧ ಗಂಗಾ ಸಿರಿ ರಾಜ್ಯ ಪ್ರಶಸ್ತಿ” ಯನ್ನು ನೀಡಿ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಕವಯಿತ್ರಿ ಡಾ.ಲೀಲಾ ಪ್ರಕಾಶ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.

ಪ್ರಾರಂಭದಲ್ಲಿ ಕು.ಅನಘಾ ಸುಶ್ರಾವ್ಯವಾಗಿ ಪ್ರಾರ್ಥನೆ ಮಾಡಿದರೆ, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವ ರಾಜೇಂದ್ರಸ್ವಾಮಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಗಾಯಕ ಚೆನ್ನ ಬಸಪ್ಪ ಅವರು ಸಿದ್ಧ ಗಂಗಾ ಶ್ರೀಗಳನ್ನು ಕುರಿತು ವಚನ ಗಾಯನ ನಡೆಸಿ ಕೊಟ್ಟರು. ಸಂಸ್ಕೃತಿ ಚಿಂತಕ ಡಾ.ರಘು ರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿ ವಿ. ಎಂ. ಮಣಿ ಕಂಠ ಇನ್ನಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು