News Karnataka Kannada
Friday, May 03 2024
ಮೈಸೂರು

ಕಾರ್ಮಿಕರಿಗೆ ದುಡಿಮೆಯೇ ಧರ್ಮ ದೇವರು: ಬನ್ನೂರು ರಾಜು

ಕಾಯಕವೇ ಕೈಲಾಸ ಎಂಬಂತೆ ದುಡಿಮೆಯನ್ನೇ ನಂಬಿ ಪ್ರಾಮಾಣಿಕವಾಗಿ ಬದುಕುತ್ತಿರುವ ಯಾವುದೇ ಕಾರ್ಮಿಕರಾಗಲಿ ಅವರಿಗೆ ದುಡಿಮೆಯೇ ಜಾತಿ, ಮತ, ಧರ್ಮ ಮತ್ತು ದೇವರು ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.
Photo Credit : By Author

ಮೈಸೂರು: ಕಾಯಕವೇ ಕೈಲಾಸ ಎಂಬಂತೆ ದುಡಿಮೆಯನ್ನೇ ನಂಬಿ ಪ್ರಾಮಾಣಿಕವಾಗಿ ಬದುಕುತ್ತಿರುವ ಯಾವುದೇ ಕಾರ್ಮಿಕರಾಗಲಿ ಅವರಿಗೆ ದುಡಿಮೆಯೇ ಜಾತಿ, ಮತ, ಧರ್ಮ ಮತ್ತು ದೇವರು ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಕುವೆಂಪು ನಗರದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಸಂಘದ ಆವರಣದಲ್ಲಿ ಏರ್ಪಡಿಸಿದ್ದ 2024 ರ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಮಾಡಲಾಗದ್ದನ್ನು ಒಂದು ಸಂಘ ಮಾಡಬಲ್ಲದು ಹಾಗಾಗಿ ಸಂಘ ಶಕ್ತಿ ಅದರಲ್ಲೂ ವಿಶೇಷವಾಗಿ ಕಾರ್ಮಿಕ ಶಕ್ತಿ ಬಹುದೊಡ್ಡದೆಂದೂ, ಇಂಥಾ ಶಕ್ತಿಯಿಂದ ಸಮಾಜದ ಕ್ಷೇಮಾ ಭಿವೃದ್ಧಿ ಸಾಧ್ಯ. ಆದರ್ಶನೀಯ ಶ್ರೇಷ್ಠ ವ್ಯಕ್ತಿ ಸರ್ ಎಂ ವಿಶ್ವೇಶ್ವರಯ್ಯನವರ ಹೆಸರಿನಲ್ಲಿರುವ ಈ ಸಂಘವು ತನ್ನದೇ ಆದ ಸಂಘಟನೆಯಿಂದ ನಿಸ್ವಾರ್ಥದ ಜನೋಪಯೋಗಿ ಕಾರ್ಯಗಳನ್ನು, ಮಾಡುತ್ತಿರುವ ಒಂದು ವಿಶಿಷ್ಟ ಸಂಸ್ಥೆಯಾಗಿದೆ ಎಂದರು.

ದಿನದರ್ಶಿಕೆ ಎಂಬುದು ನಮ್ಮಲ್ಲಿ ಅಕ್ಷರ ಸಂಸ್ಕೃತಿಗೂ ಮೊದಲೇ ಇದ್ದು ಅದು ಕಾಲಕ್ಕೆ ತಕ್ಕಂತೆ ಆಯಾ ಕಾಲಘಟ್ಟಗಳಲ್ಲಿ ತಂತ್ರಜ್ಞಾನದೊಡನೆ ಬೆಳೆದು ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಬಹು ವರ್ಣಮಯವಾಗಿ ವಿವಿಧ ರೂಪಗಳಲ್ಲಿ ಜನಾಕರ್ಷಣೀಯವಾಗಿದೆ. ‘ದಿನದರ್ಶಿಕೆ’ ಎಂಬುದು ಇಂದು ನಿನ್ನೆಯದಲ್ಲ. ಇದಕ್ಕೆ ಸುದೀರ್ಘವಾದ ಪ್ರಾಚೀನ ಇತಿಹಾಸವಿದೆ. ಭಾರತೀಯ ಸಂಸ್ಕೃತಿಯಲ್ಲಿ ಇದು ಹಾಸು ಹೊಕ್ಕಾಗಿದ್ದು ನಮ್ಮ ಪರಂಪರೆಯಲ್ಲಿ ಇದಕ್ಕೊಂದು ವಿಶಿಷ್ಟ ಸ್ಥಾನವಿದ್ದು ದಿನಗಣನೆಯ ಸಮಯ ಪ್ರಜ್ಞೆಯ ಪ್ರತೀಕವಾ ಗಿದೆ. ಗೋಡೆಯಲ್ಲಿದ್ದುಕೊಂಡೇ ನಮ್ಮನ್ನು ಪ್ರತಿದಿನವೂ ಎಚ್ಚರಗೊಳಿಸುವ ಒಂದು ವಿಶಿಷ್ಟ ಸಾಧನ ದಿನದರ್ಶಿಕೆ.

ಕಳೆದು ಹೋದ ನಂತರ ಮತ್ತೆ ಮರಳಿ ಬಾರದ ವಸ್ತುವೆಂದರೆ ಅದು ಸಮಯ. ಹಾಗಾಗಿ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ಕಾರ್ಮಿಕರು ಸಮಯದ ಮಹತ್ವವನ್ನು ಬಲ್ಲವರಾಗಿರಬೇಕು. ಇಂತಹ ಅಮೂಲ್ಯವಾದ ಕಾಲದ ಬೆಲೆಯನ್ನು ಪ್ರತಿದಿನ ನೆನಪಿಸುವ ದಿನದರ್ಶಿಕೆಯನ್ನು ಬಹುಸುಂದರವಾಗಿ ಅಷ್ಟೇ ವಿಶಿಷ್ಟವಾಗಿ ಹೊರತಂದಿರುವ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಕಾನೂನು ಸಲಹೆಗಾರ ವಕೀಲ ಎನ್. ಸುಂದರ್ ರಾಜು ಅವರು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಒಂದು ಸಂಘವನ್ನು ಅದೂ ಕೂಡ ಕಾರ್ಮಿಕರ ಸಂಘವನ್ನು ಕಟ್ಟುವುದು ಸುಲಭ. ಆದರೆ ಅದನ್ನು ಸನ್ಮಾರ್ಗದಲ್ಲಿ ನಡೆಸಿ, ಬೆಳೆಸಿ,ಉಳಿಸುವುದು ಬಹಳ ಕಷ್ಟ. ಆದರೆ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಎಲ್ಲರೂ ಒಗ್ಗೂಡಿ ಜನಮುಖಿ ಯಾಗಿ ಕೆಲಸ ಮಾಡುತ್ತಿರುವ ಒಂದು ಅಪರೂಪದ ಕಾರ್ಮಿಕ ಸಂಘಟನೆಯಾಗಿದೆ. ಇದೇ ಒಗ್ಗಟ್ಟನ್ನು ಅವರು ಕಾಪಾಡಿ ಕೊಂಡು ಹೋಗಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ಕ್ರಿಯಾ ಶೀಲ ವಕೀಲರಿಗೆ ಕೊಡ ಮಾಡುವ ಪ್ರಸ್ತುತ ಸಾಲಿನ “ಬೆಸ್ಟ್ ಪ್ಯಾನಲ್ ಅವಾರ್ಡ್” ಪುರಸ್ಕೃತರಾದ ಎನ್.ಸುಂದರ್ ರಾಜು ಅವರನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಎಸ್. ಮಹೇಶ್ ಜಯನಗರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಎಂ.ಎಸ್. ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ರವಿಕುಮಾರ್, ಖಜಾಂಚಿ ಎಂ.ಪ್ರಕಾಶ್, ನಿರ್ದೇಶಕರುಗಳಾದ ಚಂದ್ರೇಗೌಡ, ಯೋಗೇಶ್ ಹೆಬ್ಬಾಳ್, ಕುಮಾರ್, ರುದ್ರ ಸ್ವಾಮಿ, ಯೋಗೇಶ್ ಜಯನಗ ರ, ಮೊಹಮದ್ ಜಾಕಿರ್ ಹುಸೇನ್, ರಂಗಕರ್ಮಿ ಜಗದೀಶ್ ಇನ್ನಿತರರು ಉಪಸ್ಥಿತರಿದ್ದರು. ನಿರ್ದೇಶಕ ಚಂದ್ರೇಗೌಡ ಅವರು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು