News Karnataka Kannada
Friday, April 19 2024
Cricket
ಮೈಸೂರು

ಮೈಸೂರಿನಲ್ಲಿ ಹಲಸು ಪ್ರಿಯರ ಗಮನ ಸೆಳೆದ ಹಲಸು ಮೇಳ

Jackfruit Mela attracts attention of jackfruit lovers in Mysuru
Photo Credit : News Kannada

ಮೈಸೂರು: ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದಿಂದ ಸಹಜ ಸೀಡ್ಸ್, ನಮ್ಮ ಫಾರ್ಮರ್ ಮಾರ್ಕೆಟ್ ಸಹಯೋಗದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಹಲಸಿನ ಮೇಳ ಹಲಸು ಪ್ರಿಯರ ಗಮನ ಸೆಳೆಯುತ್ತಿದೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೇಳದಲ್ಲಿ ಬಾಯಲ್ಲಿ ನೀರೂರಿಸುವ ಕೆಂಪು, ಬಿಳಿ, ಹಳದಿ ಮತ್ತು ಸಂಪಿಗೆ ಬಣ್ಣದ ಹಲಸಿನ ಹಣ್ಣು ಗ್ರಾಹಕರ ಸೆಳೆಯುತ್ತಿದ್ದು, ಇದರ ರುಚಿ ನೋಡಿದವರು ಮನಸೋತರು. ಕರ್ನಾಟಕದ ವಿವಿಧೆಡೆಯಿಂದ ಬಂದಿದ್ದ 25 ಹಲಸು ಬೆಳೆಗಾರರ ಬಗೆಬಗೆಯ ಹಲಸು, ತರಹೇವಾರಿ ಖಾದ್ಯಗಳನ್ನು ಉಣ ಬಡಿಸಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಹಲಸಿನ ಹಣ್ಣನ್ನು ಕತ್ತರಿಸಿ ಮೇಳ ಉದ್ಘಾಟಿಸಿದರು. ಚನ್ನರಾಯಪಟ್ಟಣದ ಹೂವಿನಹಳ್ಳಿಯ ರಮೇಶ್ ಅವರ ತೋಟದಲ್ಲಿ ಸ್ವಾದಿಷ್ಟಕರ ಹಲಸಿನ ತಳಿಯಾದ ಹೂಮಲ್ಲಿ ಹಲಸು ತಳಿಯನ್ನು ಅನಾವರಣ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಮೇಳದಲ್ಲಿ ವಿವಿಧ ಬಗೆಯ ಹಲಸಿನ ತಳಿಗಳ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕೆಂಪು ಹಲಸು ಮೇಳದ ಆಕರ್ಷಣೆಯಾಗಿದ್ದು, ಜನರು ಮುಗಿಬಿದ್ದು ಖರೀದಿಸಿದರು. ಒಂದು ಕೆಜಿ ಹಸಲಿನ ಹಣ್ಣಿಗೆ 200ರಿಂದ 250 ರೂ.ದರ ನಿಗದಿಪಡಿಸಿದ್ದು, ಕೆಲವರು ಒಂದು, ಎರಡು ಕೆಜಿ ಖರೀದಿಸಿದರೆ, ಹಲವರು ಉಂಡೆ ಹಲಸಿನ ಹಣ್ಣನ್ನು ಖರೀದಿಸಿದರು. ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಹಲಸು-ಬಿದಿರಕ್ಕಿ ಪಾಯಸ, ಹಲಸು ಬಿರಿಯಾನಿ, ಹಲಸು ಪಲಾವ್ ಹಲಸು ಪ್ರಿಯರ ಆಕರ್ಷಣೆಯಾಗಿವೆ.

ಹಲಸಿನ ಬೀಜದ ಪೇಯ ಕಾಫಿ ಮೇಳದಲ್ಲಿ ಗಮನ ಸೆಳೆದರೆ, ಹಲಸು ಕತ್ತರಿಸುವ ಯಂತ್ರ ನೋಡುಗರ ಗಮನ ಸೆಳೆಯುತ್ತಿದೆ. ದೇವನಹಳ್ಳಿಯ ತೇಜು ನರ್ಸರಿಯವರು ಸಿದ್ದು ಹಲಸು, ರುದ್ರಾಕ್ಷಿ ಬಕ್ಕೆ, ಜೇನು ಹಲಸು, ಅಂಟುರಹಿತ ಹಲಸು, ಭೈರಸಂದ್ರ, ವಿಯೆತ್ನಾಂ ಸೂಪರ್ ಅರ್ಲಿ, ನಾಗಚಂದ್ರ, ರಾಮಚಂದ್ರ, ಲಾಲ್‌ಬಾಗ್ ಮಧುರ, ಸಿಂಗಾಪುರ ಹಲಸು, ಸರ್ವ ಋತು ಹಲಸು, ಪ್ರಕಾಶ್ ಕೊಳ್ಳೇಗಾಲ, ಉಂಡೆ ಹಲಸು, ಏಕಾದಶಿ ಹಲಸು, ಅಂಬಲಿ ಹಲಸು, ದಿವ್ಯಹಲಸು ಜೇನು ಬೊಕ್ಕ ಮೊದಲಾದ ೨೫ಕ್ಕೂ ಹೆಚ್ಚು ಹಲಸಿನ ತಳಿಗಳು, ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದ್ದು, ಅನೇಕರು ಎರಡು-ಮೂರು ಸಸಿಗಳನ್ನು ಖರೀದಿಸುತ್ತಿದ್ದು ಸಾವಾನ್ಯವಾಗಿತ್ತು.

ತುಮಕೂರಿನ ಚೇಳೂರಿನ ಕೆಂಪು ಮತ್ತು ಬಿಳಿ, ಹಳದಿ ಹಲಸು, ಕೈಲಾಸ್ ನ್ಯಾಚುರಲ್‌ನವರು ಬೆಳೆದಿರುವ ಹಲಸಿನ ತಳಿಗಳು ಕೈ ಬೀಸಿ ಕರೆದರೆ, ಮೈಸೂರಿನ ಬೆಳುವಲ ತೋಟದವರ ದ್ರಾಕ್ಷಿ ಹಲಸು ನೋಡುಗರ ಗಮನ ಸೆಳೆಯುತ್ತಿದೆ. ತಿಪಟೂರು ಮತ್ತು ಚೇಳೂರಿನಿಂದ ಬಂದಿರುವ ಕೆಂಪು ತೊಳೆಯ ಚಂದ್ರ ಹಲಸು ಖರೀದಿಸಲು ಜನರು ಮುಗಿಬಿದ್ದರೆ, ಕೊಳ್ಳೇಗಾಲದ ಸಹಜ ಕೃಷಿಕ ಕೈಲಾಸ ಮೂರ್ತಿಯವರು ತಮ್ಮ ತೋಟದ ಬಗೆಬಗೆಯ ಹಲಸಿನ ತಳಿಗಳನ್ನು ಜನರಿಗೆ ಪರಿಚಯಿಸಿದರು. ಬೆಳವಲ ತೋಟದ ಫುಟ್‌ಬಾಲ್ ಗಾತ್ರದ ರುದ್ರಾಕ್ಷಿ ಹಲಸು ನೋಡುಗರನ್ನು ಸೆಳೆಯಿತು.

ಮುಂಗಾರಿಗೆ ಬಿತ್ತಲು ತರಕಾರಿ ಬೀಜ, ಸಿರಿಧಾನ್ಯ ಮತ್ತು ದೇಸಿ ಭತ್ತದ ಬೀಜಗಳನ್ನು ಸಹಜ ಸೀಡ್ಸ್ ಮಾರಾಟ ಮಾಡುತ್ತಿದೆ. ತೆಂಗು, ಮಾವು ಮೊದಲಾದ ಹಣ್ಣಿನ ಗಿಡಗಳನ್ನು ಪುತ್ತೂರಿನ ಜಾಕ್ ಅನಿಲ್ ಮಾರಾಟಕ್ಕೆ ಇಟ್ಟಿದ್ದರೆ, ಧಾರವಾಡದ ದೇವಧಾನ್ಯ ರೈತ ಉತ್ಪಾದಕರ ಕಂಪನಿ ಸಿರಿಧಾನ್ಯಗಳನ್ನು ರೈತರಿಂದ ನೇರ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರೆ, ಸಾವಯವದಲ್ಲಿ ಬೆಳೆದ ಮಾವು ಮತ್ತು ನೇರಳೆ ಮಾರಾಟಕ್ಕೂ ಉತ್ತಮ ಸ್ಪಂದನೆ ದೊರೆಯಿತು. ಮೈಸೂರು, ನಾಗರಹೊಳೆ ಕಾಡು, ಕುಂದಗೋಳ, ಶಿಗ್ಗಾಂವ, ಧಾರವಾಡ ತಾಲ್ಲೂಕಿನ ರೈತರ ಗುಂಪುಗಳು ಬಗೆಬಗೆಯ ಧಾನ್ಯ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ಮೇಳಕ್ಕೆ ತಂದು ಮಾರಾಟ ಮಾಡುತ್ತಿರುವುದರಿಂದ ಮಧುಮೇಹದ ಸಮಸ್ಯೆ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದ ದೃಶ್ಯ ಕಂಡು ಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು