News Karnataka Kannada
Wednesday, May 08 2024
ಮೈಸೂರು

ಮೈಸೂರಿನಲ್ಲಿ ಬಾಲಕನ ಅಪಹರಿಸಿದ್ದ ನಾಲ್ವರ  ಬಂಧನ

Mysore Y
Photo Credit : By Author

ಮೈಸೂರು: ಮೈಸೂರನ್ನು ಬೆಚ್ಚಿಬೀಳಿಸಿದ್ದ ವೈದ್ಯದಂಪತಿಯ ಪುತ್ರನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಅಪಹರಣಕಾರರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಅಪಹರಣದ ಕುರಿತಂತೆ  ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ  ಮಾಹಿತಿ ನೀಡಿದ್ದು, ಅಪಹರಣ ಕೃತ್ಯದಲ್ಲಿ ಐವರು ಭಾಗಿಯಾಗಿದ್ದು, ನಾಲ್ವರನ್ನು ಬಂಧಿಸಿದ್ದು, ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಮೈಸೂರು ನಗರ, ಗ್ರಾಮಾಂತರ ಮತ್ತು ಬೆಂಗಳೂರು ಭಾಗದವರಾಗಿದ್ದಾರೆ. ಎಲ್ಲರೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಓದಿಕೊಂಡಿರುವ 20 ರಿಂದ 25 ವರ್ಷದ ವಯೋಮಾನದರಾಗಿದ್ದಾರೆ.

ವೈಜ್ಞಾನಿಕ ಸಾಕ್ಷಿಗಳ ಆಧಾರದ ಮೇಲೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ವೈದ್ಯ ದಂಪತಿಗಳ ಮಗನನ್ನು ರಕ್ಷಿಸಿ, 18ಗಂಟೆಗಳ ಅವಧಿಯಲ್ಲಿ ಅಪಹರಿಸಿದ್ದ 4 ಜನ ಆರೋಪಿಗಳನ್ನು ವಿರಾಜಪೇಟೆಯಲ್ಲಿ ಬಂಧಿಸಿ, ಕೃತ್ಯಕ್ಕೆ ಬಳಸಿದ್ದ 5ಮೊಬೈಲ್ ಫೋನ್‌ಗಳು ಮತ್ತು 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ ಅವಶ್ಯಕತೆ ಇದ್ದ ಕಾರಣ ಈ ಕೆಲಸ ಮಾಡಲಾಗಿದೆ ಎಂದು ಆರೋಪಿಗಳು ಹೇಳಿರುವುದಾಗಿ ತಿಳಿಸಿದ ಅವರು ಇದರ ಹೊರತಾಗಿ ಬೇರೆ ಕಾರಣಗಳೇನಾದರೂ ಇವೆಯಾ ಎಂಬ ಉದ್ದೇಶದಿಂದ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಇಬ್ಬರು ಅದ್ವೈತ್ ಡೇ ಕೇರ್ ನಡೆಸುತ್ತಿದ್ದರು. ಇನ್ನಿಬ್ಬರು  ಚಾಲಕರಾಗಿದ್ದಾರೆ. ಅಲ್ಲದೇ, ಪ್ರಮುಖ ಆರೋಪಿಯೊಬ್ಬ ಬಾಲಕನ ತಾತನ ಆರೈಕೆ ಮಾಡುವ ಕೆಲಸವನ್ನು ಕೆಲವು ದಿನಗಳ ಕಾಲ ಮಾಡಿದ್ದನು. ಬಾಲಕನ ಕುಟುಂಬದವರಿಗೆ ಗೊತ್ತಿರುವವರೇ ಆಗಿದ್ದು, ಹಲವು ದಿನಗಳ ಹಿಂದೆಯೇ ಬಾಲಕನ ಅಪಹರಣಕ್ಕೆ ಪ್ಲಾನ್ ಮಾಡಲಾಗಿತ್ತು. ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಇಲ್ಲಿಯವರೆಗಿನ ತನಿಖೆಯಿಂದ ತಿಳಿದು ಬಂದಿದ್ದು, ಇನ್ನು ತನಿಖೆ ನಡೆಯುತ್ತಿದೆ ಎಂದರು.

ಕುವೆಂಪುನಗರ ಠಾಣಾ ಸರಹದ್ದಿನ ಮುಡಾ ಲೇಔಟ್ ರಸ್ತೆಯಲ್ಲಿ ವೈದ್ಯ ದಂಪತಿಯ 12 ವರ್ಷದ ಮಗ ಸೈಕಲ್ ಓಡಿಸಿಕೊಂಡು ಹೋಗುತ್ತಿರುವ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ಅಪಹರಣ ಮಾಡಿಕೊಂಡು ಹೋಗಿದ್ದು,  ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡು ತಕ್ಷಣ ಪ್ರತ್ಯಕ್ಷದರ್ಶಿಗಳನ್ನು ಮತ್ತು ಮನೆಯವರೊಂದಿಗೆ ಚರ್ಚಿಸಿ ಡಿಸಿಪಿ ಪ್ರದೀಪ್ ಗುಂಟಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಕಾರ್ಯಾಚರಣೆ ಕೈಗೊಂಡ ಕೆಲವೇ ಗಂಟೆಯಲ್ಲಿ ಬಾಲಕನನ್ನು ರಕ್ಷಣೆ ಮಾಡಲಾಯಿತು. ತನಿಖೆ ಇನ್ನು ನಡೆಯುತ್ತಿರುವುದರಿಂದ ಕಾರ್ಯಾಚರಣೆ ಸಂಬಂಧ ಮತ್ತು ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

ಹೋಮ್ ನರ್ಸಿಂಗ್ ಕೇರ್ ಸೇವೆ ಒದಗಿಸುವ ಕಂಪನಿಗಳು ಸಾಕಷ್ಟಿವೆ. ಹೋಮ್ ನರ್ಸಿಂಗ್ ಸೇವೆ ಮತ್ತು ಚಾಲಕನ ಹುದ್ದೆಗೆ  ನೇಮಿಸಿಕೊಳ್ಳುವ ಮುನ್ನ ಪೊಲೀಸರಿಂದ ಅವರ ಹಿನ್ನೆಲೆ ಪರಿಶೀಲಿಸುವುದನ್ನು ಕಡ್ಡಾಯ ಮಾಡಬೇಕಿದೆ. ಯಾಕೆಂದರೆ ಪ್ರತಿಯೊಬ್ಬರ ಹಿನ್ನೆಲೆಯೂ ಗೊತ್ತಿರುವುದಿಲ್ಲ. ಏಕಾಏಕಿ ಅವರನ್ನು ಇಂತಹ ಕೆಲಸಕ್ಕೆ ಸೇರಿಸಿಕೊಂಡರೆ ಮನೆಯ ಒಳ ಮತ್ತು ಹೊರವನ್ನು ತಿಳಿದುಕೊಂಡು ಈ ರೀತಿಯ ಕೆಲಸಕ್ಕೆ ಮುಂದಾಗುತ್ತಾರೆ. ಹಾಗಾಗಿ, ಸಾರ್ವಜನಿಕರು ಇಂತಹ ಕೆಲಸಗಳಿಗೆ ಯಾರನ್ನೆ ನೇಮಿಸಿಕೊಳ್ಳಬೇಕಾದರೂ ಅವರ ಹಿನ್ನೆಲೆ ಚೆಕ್ ಮಾಡಿಸಬೇಕು ಎಂದು ಚಂದ್ರಗುಪ್ತ ಸಲಹೆ ನೀಡಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಅವರ  ಮಾರ್ಗದರ್ಶನದಲ್ಲಿ, ನರಸಿಂಹರಾಜ ವಿಭಾಗದ  ಎಸಿಪಿ ಶಿವಶಂಕರ್ ಮತ್ತು ಸಿಸಿಬಿ ಘಟಕದ ಎಸಿಪಿ ಅಶ್ವತ್ ನಾರಾಯಣ್, ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ  ಸಂತೋಷ್, ರಾಜು ಜಿ.ಸಿ, ಶೇಖರ್, ಅಜರುದ್ದಿನ್, ಪ್ರಕಾಶ್, ರವೀಂದ್ರ, ಷಣ್ಮುಗ ವರ್ಮ, ಪಿಎಸ್‌ಐಗಳಾದ ಕು.ರಾಧ ಎಂ, ಗೋಪಾಲ್ ಸೇರಿದಂತೆ ಎಲ್ಲ ಸಿಬ್ಬಂದಿಯೂ ಒಂದಲ್ಲ ಒಂದು ರೀತಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರದೀಪ್ ಗುಂಟಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು