News Karnataka Kannada
Monday, April 29 2024
ಮೈಸೂರು

ಮೈಸೂರು: ದೇಶ ಮೆಚ್ಚಿದ ಧೀರ ಸೇನಾನಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ
Photo Credit : By Author

ಮೈಸೂರು: ಸ್ವತಂತ್ರ ಭಾರತದ ಭಾರತೀಯ ಸೇನೆಯ ಮೊಟ್ಟಮೊದಲ ಮಹಾ ದಂಡನಾಯಕರಾಗಿ ವಿಶ್ವವೇ ನಿಬ್ಬೆರಗಾಗುವಂತೆ ಭಾರತದ ಸೇನೆಯನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭಾರತ ಸೇನೆಯ ಮಹತ್ಸಾಧಕರಾಗಿದ್ದು ದೇಶ ಮೆಚ್ಚಿದ ಧೀರ ಸೇನಾನಿಯಾಗಿದ್ದರೆಂದು ಸಾಹಿತಿ ಬನ್ನೂರು ಕೆ.ರಾಜು ಗುಣಗಾನ ಮಾಡಿದರು.

ನಗರದ ಪ್ರತಿಷ್ಠಿತ ಸೇವಾ ಸಂಸ್ಥೆಗಳಾದ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಹೆಬ್ಬಾಳಿನ ಶ್ರೀ ಭೈರವೇಶ್ವರ ನಗರದ ಅಣ್ಣಯ್ಯಪ್ಪ ಸ್ಮಾರಕ ಶ್ರೀ ಭೈರವೇಶ್ವರ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಭೈರವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದ ಅವರು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನವರು ಮೂವತ್ನಾಲ್ಕು ವರ್ಷ ಗಳ ಸುಧೀರ್ಘ ಕಾಲ ಸೇನೆ ಯಲ್ಲಿ ಸೇವೆ ಸಲ್ಲಿಸಿ ದೇಶಕ್ಕಾಗಿ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿ ಕೊಂಡಿದ್ದರೆಂದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ನವರು ಭಾರತೀಯ ಸೇನೆಗೆ ಸೇರಿದ ಕ್ಷಣದಿಂದಲೂ ಇಡೀ ದೇಶವನ್ನು ಆವಾಹನೆ ಮಾಡಿಕೊಂಡು ತಮ್ಮ ದೇಹದ ನರನಾಡಿಗಳಲ್ಲೂ, ರಕ್ತದ ಕಣ ಕಣದಲ್ಲೂ ದೇಶವನ್ನೇ ತುಂಬಿಕೊಂಡಿದ್ದ ಮಹಾನ್ ದೇಶ ಪ್ರೇಮಿ.ಇಂಥಾ ವೀರ ಸೇನಾನಿ,ಅಪ್ರತಿಮ ದೇಶ ಭಕ್ತ ಕಾರ್ಯಪ್ಪನಂತಹ ದೇಶೋದ್ಧಾರಕ ಸುಪುತ್ರನನ್ನು ಪಡೆದ ಭಾರತ ಮಾತೆ ನಿಜಕ್ಕೂ ಧನ್ಯಳು. ಹಾಗೆಯೇ ಇವರು ಕರ್ನಾಟಕದ ಕಲಿಯೆಂಬುದು ಮತ್ತು ಯೋಧರ ನಾಡು ಕೊಡಗಿನ ವೀರ ಕುವರ ಕನ್ನಡಿಗರೆಂಬುದೇ ನಮಗೆ ಹೆಚ್ಚು ಹೆಮ್ಮೆಯ ವಿಷಯ. ಕೊಡಗಿನ ಜೀವನದಿ ಕಾವೇರಿಯಷ್ಟೇ ನಿರ್ಮಲವಾದ ಪರಿಶುದ್ಧ ವ್ಯಕ್ತಿತ್ವದ ಶಿಸ್ತಿನ ಸಿಪಾಯಿ, ನಿಸ್ವಾರ್ಥಿ ಕಾರ್ಯಪ್ಪ ಭಾರತೀಯ ಸೇನೆಯಲ್ಲಿ ತಮ್ಮ ಜೀವವನ್ನೇ ಇಟ್ಟಿದ್ದರು. ಜೀವನವನ್ನೂ ಕೂಡ ಅಲ್ಲಿಂದಲೇ ಕಾಣುತ್ತಿದ್ದರು. ಕುಂತಲ್ಲಿ, ನಿಂತಲ್ಲಿ, ನಡೆದಲ್ಲಿ, ನುಡಿದಲ್ಲಿ, ಕನಸಲ್ಲಿ, ಮನಸಲ್ಲಿ, ಎಲ್ಲೆಲ್ಲೂ ಅವರಿಗೆ ದೇಶ ಮತ್ತು ದೇಶ ಸೇವೆ ಹಾಗೂ ದೇಶದ ಸೇನೆಯೇ ಸರ್ವಸ್ವವಾಗಿತ್ತು. ಇಂಥ ಭಾರತೀಯ ಸೇನೆಯ ಮಹಾದಂಡನಾಯಕನ ಸೇವೆಯ ವೈಖರಿ,ಸಮಯ ಪ್ರಜ್ಞೆ, ಶಿಸ್ತು ಪಾಲನೆ ಮತ್ತು ಅವರ ಆದರ್ಶ ಬದುಕು ಯಾವತ್ತೂ ದೇಶಕ್ಕೆ ಮಾದರಿ ಆಗುವಂತದ್ದು. ವಿಶೇಷವಾಗಿ ಯುವಜನರು ಇವರು ಹಾಕಿ ಹೋಗಿರುವ ಹೆಜ್ಜೆಗಳನ್ನು ಅನುಸರಿಸಬೇಕು ಹಾಗೂ ಅನುಕರಿಸಬೇಕು ಎಂದರು.

ಭೂಸೇನೆ,ವಾಯುಸೇನೆ, ನೌಕಾ ಸೇನೆ, ಹೀಗೆ ಸ್ವತಂತ್ರ ಭಾರತದ ಮೂರೂ ಸೇನೆಗಳ ಮೊಟ್ಟ ಮೊದಲ ಮಹಾ ದಂಡನಾಯಕರಾಗಿ ಕಾರ್ಯಪ್ಪ ಭಾರತೀಯ ಸೇನೆಗೆ ತಮ್ಮದೇ ಆದ ಮಹತ್ತರ ಕೊಡುಗೆ ನೀಡಿದ್ದಾರೆ. ದೇಶದ ಸೇನೆಯಲ್ಲಿನ ಮಹತ್ವಪೂರ್ಣ ಕ್ರಾಂತಿಕಾರಿ ಕೆಲಸಗಳನ್ನು ಇಡೀ ಜಗತ್ತಿಗೆ ಮಾದರಿಯಾಗುವಂತೆ ಮಾಡಿ ಜಗತ್ತಿನ ಉದ್ದಗಲಕ್ಕೂ ಸೇನಾ ಸಾರ್ವಭೌಮರಾಗಿ ಮಿಂಚಿದ್ದಾರೆ. ಇದಿಷ್ಟೇ ಅಲ್ಲದೆ ಇವತ್ತಿಗೂ ಭಾರತೀಯ ಸೇನೆ ಜಗತ್ತಿಗೆ ಸವಾಲೊಡ್ಡುವಂತೆ ಸಶಕ್ತವಾಗಿ ಬಲಿಷ್ಠವಾಗಿದೆಯೆಂದರೆ ಇದಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಕೊಟ್ಟಿರುವ ಸುಭದ್ರ ತಳಪಾಯವೇ ಆಗಿದೆ ಎಂದ ಬನ್ನೂರು ರಾಜು ಅವರು, ಪ್ರತಿಯೊಬ್ಬರೂ ಸದಾ ಸ್ಮರಿಸುವಂತಹ ಅನುಸರಿಸುವಂತಹ ದೇಶಭಕ್ತಿಯ ಸೇನಾ ಚೈತನ್ಯ ವಾಗಿದ್ದ ಕಾರ್ಯಪ್ಪನವರು ಭಾರತದ ವೀರಪುತ್ರರಾಗಿ, ವಿಶ್ವಚೇತನರಾಗಿ ದಾಖಲೆ ಬರೆದವರೆಂದು ಕಾರ್ಯಪ್ಪ ಅವರ ಸೇನಾ ಕಾರ್ಯಗಳ ಸಾಧನೆಯನ್ನು ಶ್ಲಾಘಿಸಿದರಲ್ಲದೆ, ಕೊಡವರು ಯಾವತ್ತೂ ಕೊಡುವವರು. ಅದರಲ್ಲೂ ಯೋಧರನ್ನು ಕೊಡುವುದರಲ್ಲಿ ನಿಸ್ಸೀಮರು. ಅದರಂತೆ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಸೇರಿದಂತೆ ಭಾರತೀಯ ಸೇನೆಗೆ ಬಹಳಷ್ಟು ಯೋಧರನ್ನು ಕೊಟ್ಟು ಯೋಧರ ನಾಡು ಕೊಡಗು ಎಂಬ ಮಹತ್ವಪೂರ್ಣ ಗೌರವಕ್ಕೆ ಪಾತ್ರರಾಗಿದ್ದಾರೆಂದು ಅಭಿಮಾನಪೂರ್ವಕವಾಗಿ ಹೇಳಿದರು.

ಖ್ಯಾತ ಚಿತ್ರ ಕಲಾವಿದೆ ಹಾಗು ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಶ್ರೀ ಭೈರವೇಶ್ವರ ವಿದ್ಯಾ ಸಂಸ್ಥೆಯ ನಿರ್ದೇಶಕಿ ಮತ್ತು ಪ್ರಾಂಶುಪಾಲೆ ಕುಮಾರಿ ಎಸ್. ಸೌಮ್ಯ ಅವರು ಅಧ್ಯಕ್ಷತೆ ವಹಿಸಿ ಮಾತಾಡಿದರು. ಚಿತ್ರಕಲಾ ಶಿಕ್ಷಕ ಎಂ.ಅರ್. ಮನೋಹರ್ ಪ್ರಾಸ್ತಾವಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಪಂಚಾಕ್ಷರಿ, ಹಿರಣ್ಮಯಿ ಪ್ರತಿಷ್ಟಾನದ ಅಧ್ಯಕ್ಷರೂ ಆದ ಖ್ಯಾತ ಶಿಕ್ಷಣ ತಜ್ಞ ಎ. ಸಂಗಪ್ಪ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ನಿತೀಶ್ ಕುಮಾರ್, ಎಂ. ರೋಹನ್, ಮನೀಶ್ ಗೌಡ, ತೃಪ್ತಿ, ಸಂಜನಾ, ಎಂ.ಈಶ್ವರಿ, ಮೋನಿಶ್, ಪ್ರಿಯಾಂಕ, ಸುಬ್ರಹ್ಮಣ್ಯ ಅವರುಗಳಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ಶಿಕ್ಷಕಿ ಕಾಮಾಕ್ಷಿ, ಶಿಕ್ಷಕಿಯರಾದ ಅಂಜಲಿ, ಇಂದಿರಾ, ಸಂಗೀತ, ದಿವ್ಯಶ್ರೀ, ಮಮತಾ ಇನ್ನಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗಾಂಧೀಜಿ ಸ್ಮರಣಾರ್ಥ ಹುತಾತ್ಮ ದಿನದ ಅಂಗವಾಗಿ ಮೌನಾಚರಣೆ ಯೊಡನೆ ಮಹಾತ್ಮ ಗಾಂಧೀಜಿಯವರನ್ನು ಸ್ಮರಿಸಲಾಯಿತು. ಹಾಗೆಯೇ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ 124ನೇ ಜನ್ಮದಿನೋತ್ಸವದ ಸ್ಮರಣೆ ಮಾಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು