ನಂಜನಗೂಡು: ಚಿರತೆ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂದೀಶಪ್ಪ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ದಾಳಿ ನಡೆಸಿ, ಅರೆ ಬರೆ ತಿಂದು ಬಿಸಾಡಿ ಹೋಗಿದೆ.
ಬೆಳಗಿನ ಜಾವದ ಸಮಯದಲ್ಲಿ ಚಿರತೆ ದಾಳಿ ನಡೆಸಿದ್ದು, ಇನ್ನುಳಿದ ಹಸುಗಳಿಗೆ ಗಾಯಗೊಳಿಸಿದೆ. ಕರುವನ್ನು ಎಳೆದೊಯ್ದು ತಿಂದು ಹಾಕಿದ್ದು, ಕಳೆದ ಕೆಲವು ದಿನಗಳಿಂದಷ್ಟೇ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಮತ್ತೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈ ಭಾಗದಲ್ಲಿ ಚಿರತೆಯ ಕಾಟ ಹೆಚ್ಚಾಗುತ್ತಿದ್ದು , ಜಮೀನುಗಳಿಗೆ ರೈತರು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯಲಾಗುವುದು ಹಾಗೂ ಕರುವನ್ನು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.