News Karnataka Kannada
Friday, May 03 2024
ಮೈಸೂರು

ಇನ್ನೂ ನನಸಾಗದ ಅಂಬೇಡ್ಕರ್ ಕಂಡ ಕನಸು : ಬನ್ನೂರು ರಾಜು

ಸಾಹಿತಿ ಬನ್ನೂರು ಕೆ. ರಾಜು
Photo Credit : By Author

ಮೈಸೂರು: ಆಂಗ್ಲರ ಕಪಿಮುಷ್ಠಿಯಲ್ಲಿದ್ದ ಬ್ರಿಟಿಷ್ ಭಾರತವನ್ನು ಸಂವಿಧಾನಾತ್ಮಕವಾಗಿ ನಮ್ಮ ಸ್ವತಂತ್ರ ಭಾರತವನ್ನಾಗಿ ಕಟ್ಟಿದವರು ಅಂಬೇಡ್ಕರರಾದರೂ,ಅವರು ಕಂಡ ಸಂಪೂರ್ಣ ಜಾತ್ಯಾತೀತ ಭಾರತದ ಕನಸು ದೇಶದಲ್ಲಿ ಇನ್ನೂ ನನಸಾಗಿಲ್ಲವೆಂದು ಸಾಹಿತಿ ಬನ್ನೂರು ಕೆ. ರಾಜು ವಿಷಾದಿಸಿದರು.

ನಗರದ ಝಾನ್ಸಿರಾಣಿ ಲಕ್ಷ್ಮೀ ಬಾಯಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ ) ಮತ್ತು ಸಾಂಸ್ಕೃತಿಕ ಸಮಿತಿಯಿಂದ ಕಾಲೇಜಿನ ಕಲಾ ಮಂಟಪದಲ್ಲಿ ನಡೆದ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ಭಾರತ ರತ್ನ ಡಾ.ಬಿ.ಅರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿಗೂ ಇಡೀ ದೇಶವನ್ನು ಕಾಡುತ್ತಿರುವ ಜಾತಿ, ಮತ, ಧರ್ಮ, ವರ್ಣ, ವರ್ಗ, ಪಂಥಗಳೆಂಬ ಭೇದ ಭಾವಗಳ ರೋಗಗಳಿಗೆ ಅಂಬೇಡ್ಕರ್ ಸಿದ್ಧಾಂತವೇ ಸಿದ್ದೌಷಧಿ ಎಂದರು.

ಸಾಮಾನ್ಯವಾಗಿ ಬಾಬಾ ಸಾಹೇಬರೆಂದರೆ ಕೆಳ ಜಾತಿಯಲ್ಲಿ ಹುಟ್ಟಿದ್ದಕ್ಕಾಗಿ ಬಾಲ್ಯದಿಂದಲೂ ಅವರು ಅಸ್ಪೃಶ್ಯತೆಯ ಕರಿ ನೆರಳಿನಲ್ಲಿ ಅನೇಕ ನೋವುಗಳನ್ನು ಅನುಭವಿಸಿ ಅದರಿಂದ ನರಳಿ ಅಪಮಾನಕ್ಕೆ ಒಳಗಾದವರು. ಕೊನೆಗೆ ಇದೆಲ್ಲದರ ವಿರುದ್ಧ ಸಿಡಿದೆದ್ದು ಶಿಕ್ಷಣವೆಂಬ ಅಸ್ತ್ರದಿಂದ ಉನ್ನತ ಜ್ಞಾನ ಗಳಿಸಿ “ಭಾರತ ಸಂವಿಧಾನ” ಬರೆದು ಸಂವಿಧಾನ ಶಿಲ್ಪಿ ಎನಿಸಿ ಅಸ್ಪೃಶ್ಯರ ಉದ್ದಾರಕ್ಕಾಗಿ ಹೋರಾಟ ಮಾಡಿದವರು, ದಲಿತರಿಗೆ ಮೀಸಲಾತಿ ತಂದುಕೊಟ್ಟರೆಂಬುದಷ್ಟಕ್ಕೆ ಮುಕ್ತಾಯಗೊಳಿಸಿ, ದೇಶವೇ ಹೆಮ್ಮೆಪಡುವಂತಹ ಅಂಬೇಡ್ಕರರ ನಿಜವಾದ ಇತಿಹಾಸವನ್ನೇ ಮುಚ್ಚಿಬಿಡುತ್ತಾರೆ. ವಾಸ್ತವವಾಗಿ ಅಂಬೇಡ್ಕರ್ ಬದುಕು ಮಾತ್ರ ಇತಿಹಾಸವಲ್ಲ. ಅವರೇ ಒಂದು ಚರಿತ್ರೆ. ಈ ದೇಶದಲ್ಲಿ ಅಂಬೇಡ್ಕರ್ ಎಂಬ ಮಹಾ ಚೇತನ ಜನಿಸದೇ ಇದ್ದಿದ್ದರೆ ದೇಶದ ಬಹುಜನರ ಬದುಕು ಅದರಲ್ಲೂ ಮಹಿಳೆಯರ ಮತ್ತು ಕಾರ್ಮಿಕರ ಹಾಗೂ ರೈತರ ಬದುಕು ಇನ್ನೆಷ್ಟು ಸಂಕಷ್ಟಕ್ಕೆ ತಳ್ಳಲ್ಪಡುತ್ತಿತ್ತೋ ಏನೋ. ತಮ್ಮ ಮೇಧಾವಿತನ ದಿಂದ ಬ್ರಿಟಿಷ್ ಭಾರತದಲ್ಲೇ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದು ನಂತರ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಯಾರು ಊಹಿಸದ ರೀತಿಯಲ್ಲಿ ದೇಶದ ಅಭಿವೃದ್ಧಿ ಹಾಗೂ ಸಮಾಜ ಸುಧಾರಣೆಗೆ ತಮ್ಮನ್ನೇ ಸಮರ್ಪಿಸಿಕೊಂಡ ಬಾಬಾ ಸಾಹೇಬರು ಪಂಚ ವಾರ್ಷಿಕ ಯೋಜನೆಯಲ್ಲಿ ನೆಹರು ಅವರಿಗೆ ಒತ್ತಾಸೆಯಾಗಿ ನಿಂತವರು ಎಂದು ಹೇಳಿದರು.

1942 ರಲ್ಲಂತೂ ದೇಶದ ಪರಿಸ್ಥಿತಿ ಹದಗೆಟ್ಟಿದ್ದ ಸಂದರ್ಭದಲ್ಲಿ ದೇಶದ ಕೃಷಿ, ಕೈಗಾರಿಕೆ, ಮಹಿಳಾಭಿವೃದ್ಧಿ, ಆರ್ಥಿಕತೆ, ಪುನರ್ವಸತಿ, ಸೈನಿಕ ಕಲ್ಯಾಣ ಸೇರಿದಂತೆ ಅನೇಕ ಜನಪರ ಕೆಲಸಗಳಿಗಾಗಿ ಬ್ರಿಟಿಷ್ ಗವರ್ನರ್ ಜನರಲ್ ರಿಂದ ರಚಿಸಲ್ಪಟ್ಟಿದ್ದ ಪುನರುಜ್ಜೀವನ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ರವರು ಅಲ್ಲಿ ತಳ ಸಮುದಾಯ ವನ್ನು, ಶೋಷಿತರನ್ನು ಮೇಲೆತ್ತುವಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದರು. ದೇಶದಲ್ಲೇ ಪ್ರಥಮವಾಗಿ ರೈತರ ಪರ ದನಿಯೆತ್ತಿದ್ದ ಅಂಬೇಡ್ಕರ್, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೂ ಮೂಲ ಪುರುಷರಾಗಿದ್ದು, ಹಿಂದೂ ಸಾಮಾಜಿಕ ಸುಧಾರಣೆಗೂ ಕಾರಣರಾಗಿದ್ದರು. ಮಹಿಳೆಯರಿಗೆ ಅನೇಕ ಅನುಕೂಲಗಳನ್ನು ಒದಗಿಸಿಕೊಟ್ಟಿದ್ದ ಬಾಬಾ ಸಾಹೇಬರು ಮಹಿಳೆಯರಿಗಾಗಿ ಹಿಂದೂ ಸಂಹಿತೆ ಮಸೂದೆಯ ಮೂಲಕ ನ್ಯಾಯ ಕೊಡಿಸಲು ಹೋರಾಡಿದ್ದು ಮಸೂದೆ ಜಾರಿಗೊಳಿಸಲು ಸಾಧ್ಯವಾಗದೇ ಹೋದಾಗ ತಮ್ಮ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇಂತಹ ಸಮಾಜದ ಚಿಂತಕ, ಮಹಾ ಮೇಧಾವಿ ಅಂಬೇಡ್ಕರರನ್ನು ಈ ದೇಶ ಜಾತಿ ಕಣ್ಣಿನಿಂದ ನೋಡದೆ ಹೋಗಿದ್ದಲ್ಲಿ ಪ್ರತಿಯೊಬ್ಬರ ಮನೆಯ ಭಗವಂತನಾಗಿ ಅಂಬೇಡ್ಕರ್ ಇರುತ್ತಿದ್ದರೆಂದ ಅವರು, ಬದುಕಿದ್ದಾಗಲೂ ಮತ್ತು ಸತ್ತ ನಂತರವೂ ಶೋಷಣೆಗೊಳಪಟ್ಟ ದೇಶದ ಏಕೈಕ ಮಹಾನಾಯಕರೆಂದರೆ ಅದು ಅಂಬೇಡ್ಕರ್ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ರಾದ ಡಾ. ಡಿ.ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಾಹಿತಿ ಮತ್ತು ಪತ್ರಕರ್ತರಾದ ಬನ್ನೂರು ರಾಜು ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕಿ ಪಿ.ಆರ್. ವನಿತಾ, ಸಹ ಪ್ರಾಧ್ಯಾಪಕಿ ಡಾ.ದೀಪಾ ಅರ್. ಹೆಬ್ಬಾರ್, ಉಪನ್ಯಾಸಕರಾದ ಅಬ್ದುಲ್ ರೆಹಮಾನ್, ಗಿರಿಜಾ ನಾಗೇಂದ್ರಸ್ವಾಮಿ, ಸಿದ್ದೇಗೌಡ, ಕೆಂಡಗಣ್ಣೇಗೌಡ ಹಾಗೂ ಸಾಂಸ್ಕೃತಿಕ ಸಮಿತಿಯ ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷೆ ಅನುಷಾ ಸಂಗಯ್ಯ, ಉಪಾಧ್ಯಕ್ಷೆ ಡಿ.ಎಸ್.ಅಂಬಿಕಾ ಮುಂತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಗಣ್ಯರೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದ ನಂತರ ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು