ಮೈಸೂರು: ಯುವತಿಯರನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಮಾಡಿಕೊಂಡು ಪ್ರೀತಿ ಪ್ರೇಮದ ನಾಟಕವಾಡಿ ದೈಹಿಕವಾಗಿ ಬಳಸಿ ಲಕ್ಷಾಂತರ ರೂ.ಹಣವನ್ನು ಕೀಳುತ್ತಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಬಿ.ಜಿ.ಶಿವಪ್ರಕಾಶ್ ಬಂಧಿತ ಆರೋಪಿ. ಯುವತಿಯರಿಗೆ ಫೇಸ್ಬುಕ್, ಗೂಗಲ್ ಮೀಟ್ ಮೂಲಕ ಗಾಳ ಹಾಕುತ್ತಿದ್ದ ಈತ, ಅವರಿಗೆ ತನ್ನ ಬೆತ್ತಲೆ ಫೋಟೋ ಕಳುಹಿಸುತ್ತಿದ್ದ. ಹಲವು ಯುವತಿಯರ ಜೊತೆ ಪ್ರೀತಿ ನಾಟಕವಾಗಿ, ಏಕಾಂತದಲ್ಲಿರೋ ವಿಡಿಯೋ ಮಾಡಿಕೊಳ್ಳುತ್ತಿದ್ದ ಕಾಮುಕ, ಹಣಕ್ಕಾಗಿ ಪೀಡಿಸುತ್ತಿದ್ದ. ಮರ್ಯಾದೆಗೆ ಅಂಜಿ ಅದೆಷ್ಟೋ ಯುವತಿಯರು ಹಣ ಕೊಟ್ಟು ಇವನ ಕಾಟ ತಪ್ಪಿದರೆ ಸಾಕಪ್ಪ ಎಂದು ನಲುಗಿದ್ದರು ಎನ್ನಲಾಗಿದೆ.
ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿ ಪ್ರೀತಿಯ ನಾಟಕವಾಡಿದ್ದ ಶಿವಪ್ರಕಾಶ್, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಾ ೨೦ ಲಕ್ಷ ಹಣ ಪೀಕಿದ್ದ. ನೊಂದ ಯುವತಿ ಮೈಸೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್ ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಯುವತಿಯರ ಜೊತೆ ಅಶ್ಲೀಲ ಚಾಟಿಂಗ್, ಬೆತ್ತಲೆ ದೃಶ್ಯಗಳು ಮೊಬೈಲ್ನಲ್ಲಿ ಇವೆ ಎಂದು ತಿಳಿದು ಬಂದಿದೆ.