ಮೈಸೂರು: ಕಲಿಸು ಫೌಂಡೇಶನ್ ಶಿಕ್ಷಣದ ಗುಣಮಟ್ಟ ಸುಧಾರಿಸುವ ಕಾರ್ಯದಲ್ಲಿ ನಿರತವಾಗಿದ್ದು, ಈಗಾಗಲೇ ಸರ್ಕಾರಿ ಶಾಲೆಗಳ ಉನ್ನತಿಗೆ ಶ್ರಮಿಸುತ್ತಿದ್ದು ಪ್ರತಿ ಶಾಲೆಗಳಲ್ಲಿ ಒಂದು ಚಂದದ ಗ್ರಂಥಾಲಯ ಸ್ಥಾಪಿಸುವ ಉದ್ದೇಶ ಹೊಂದಿದ್ದು ಇದುವರೆಗೆ ಐವತ್ತು ಗ್ರಂಥಾಲಯಗಳನ್ನು ಸ್ಥಾಪಿಸಿ ಗಮನಸೆಳೆದಿದೆ.
ಕಲಿಸು ಫೌಂಡೇಶನ್ ಇದುವರೆಗೆ ಸುಮಾರು 60 ಸರ್ಕಾರಿ ಶಾಲೆಗಳಲ್ಲಿ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೇರೆ, ಬೇರೆ ರೀತಿಯಲ್ಲಿ ಸಹಾಯ ಮಾಡಿದ್ದು, ಜ್ಞಾನಾಲಯಗಳಿಗೆ ಹೆಚ್ಚಿನ ಒತ್ತು ನೀಡಿ ಶಾಲೆಗಳಲ್ಲಿ ಗ್ರಂಥಾಲಯವನ್ನು ನಿರ್ಮಿಸಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದಲ್ಲದೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ವೃದ್ಧಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ.
ಇದೀಗ 50ನೇ ಗ್ರಂಥಾಲಯವನ್ನು ಉದ್ಬೂರಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿದ್ದು,ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗ್ರಂಥಾಲಯವನ್ನು ಉದ್ಘಾಟಿಸಿದ್ದಾರೆ. ಕಲಿಸು ಫೌಂಡೇಶನ್ ನ ಕಾರ್ಯಕ್ಕೆ ಕಾರ್ಪೊರೇಟ್ ಕಂಪನಿ ವರ್ಲ್ಡ್ವೈಡ್ ಟೆಕ್ನಾಲಜೀಸ್ (ಡಬ್ಲೂಡಬ್ಲೂಟಿ ) ಸಹಕಾರ ನೀಡಿದ್ದು, ಇದರಿಂದ ಒಂದು ಸುಂದರ ಅಚ್ಚುಕಟ್ಟಾದ ಗ್ರಂಥಾಲಯ ಸ್ಥಾಪನೆ ಮಾಡಲು ಸಾಧ್ಯವಾಗಿದೆ.
ಇನ್ನು ಈ ಗ್ರಂಥಾಲಯವನ್ನು ನೋಡುವುದಾದರೆ, ವಿನ್ಯಾಸ , ಪರಿಕಲ್ಪನೆ ಅಭಿವೃದ್ಧಿ, ಗೋಡೆಗಳ ಮೇಲೆ ಚಿತ್ರಕಲೆ, ಪುಸ್ತಕದ ಕಪಾಟುಗಳು, ಮೇಜುಗಳು , ಪುಸ್ತಕಗಳನ್ನು ಸಂಗ್ರಹಿಸುವಿಕೆ, ದೃಶ್ಯ ಸಾಧನಗಳು, ಕಲಾ ಕೆಲಸ, ಎಲ್ಲವೂ ಗಮನಾರ್ಹವಾಗಿದೆ.
ಗ್ರಂಥಾಲಯ ಉದ್ಘಾಟನೆ ವೇಳೆ ಕಲಿಸು ಫೌಂಡೇಶನ್ ಸಂಸ್ಥಾಪಕ ಸಿಇಓ ನಿಖಿಲೇಶ್, ವಿಘ್ನೇಶ್, ಮನೋಜ್ ಕುಮಾರ್, ಶಾಲಾ ಶಿಕ್ಷಕ ವೃಂದ, ಗ್ರಾಮಸ್ಥರು ಇದ್ದರು.