News Karnataka Kannada
Saturday, May 04 2024
ಮೈಸೂರು

ಈ ಆತಿಥ್ಯದ ಮನೆಗೆ ವಿದೇಶಿಗರೇ ಅತಿಥಿಗಳು

Mysore
Photo Credit :

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ದೂರದಿಂದ ಬರುವ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಿ ಕಣ್ತುಂಬಿಸಿ ಕೊಂಡು ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಿಕೊಂಡು ಹೋಗುತ್ತಾರೆ.

ಇನ್ನು ಕೆಲವರು ಒಂದಷ್ಟು ದಿನ ವಾಸ್ತವ್ಯ ಹೂಡಿ ಪ್ರವಾಸಿ ತಾಣಗಳನ್ನಷ್ಟೆ ನೋಡುವುದಲ್ಲದೆ, ಇಲ್ಲಿನ ವಿಶೇಷ ತಿನಿಸುಗಳನ್ನು ಸವಿಯುವ ಪ್ರಯತ್ನ ಮಾಡುತ್ತಾರೆ. ಹೀಗೆ ಇಷ್ಟಪಡುವವರಿಗಾಗಿ ಹೋಟೆಲ್ ಗಳಿದ್ದರೂ ಒಂದು ಆತ್ಮೀಯವಾದ ಕುಟುಂಬ ಸತ್ಕಾರದಿಂದ ವಂಚಿತರಾಗಿ ಬಿಡುತ್ತಾರೆ. ಆದರೆ ಇಂತಹ ಕೊರಗನ್ನು ನೀಗಿಸಿ ಅತಿಥಿಗಳಿಗೆ ಒಂದೊಳ್ಳೆಯ ಸಂಸ್ಕಾರದ ವಾತಾವರಣವನ್ನು ಕಟ್ಟಿಕೊಡುವ ಕೆಲಸವನ್ನು ಮೈಸೂರಿನ ನಿವಾಸಿ ಶಶಿಕಲಾ ಅವರು ಮಾಡುತ್ತಾ ಬಂದಿದ್ದಾರೆ.

ಭಾರತದ ಸಂಸ್ಕೃತಿ ಮತ್ತು ತಿನಿಸುಗಳನ್ನು ಇಷ್ಟಪಡುವ ವಿದೇಶಿಗರು ಇವರ ಆತಿಥ‍್ಯ ಮನೆಯ ಖಾಯಂ ಅತಿಥಿಗಳಾಗಿರುವುದು ವಿಶೇಷವಾಗಿದೆ. ಯಾರೇ ಆಗಲಿ ಶಶಿಕಲಾ ಅವರ ಮನೆಗೆ ತೆರಳಿದ್ದೇ ಆದರೆ ಮೈಸೂರು ಪಾಕದಿಂದ ಆರಂಭವಾಗಿ (ಮೈಸೂರು ವೀಳ್ಯದೆಲೆ)ತಾಂಬೂಲದವರೆಗೆ ವಿವಿಧ ಬಗೆಯ ತಿನಿಸುಗಳನ್ನು ಸವಿಯುವ ಅವಕಾಶದೊಂದಿಗೆ  ಅಕ್ಕರೆಯ ಅತಿಥ್ಯ, ಕಿವಿಗೆ ಇಂಪಾದ ಸಂಗೀತಯೂ ಲಭ್ಯವಾಗುತ್ತದೆ. ಹೀಗಾಗಿ ಒಮ್ಮೆ ಬಂದವರು ಮತ್ತೊಮ್ಮೆ ಇಲ್ಲಿಗೆ ಬರಲು ಹಾತೊರೆಯುತ್ತಾರೆ.

ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಮೈಸೂರಿನ ಸಂಪ್ರದಾಯ ಮತ್ತು ಇಲ್ಲಿನ ಸಾಂಪ್ರದಾಯಿಕ ಭೋಜನವನ್ನು ಪ್ರಚುರಪಡಿಸುವ ಕೆಲಸವನ್ನು ಶಶಿಕಲಾರವರು ಸದ್ದಿಲ್ಲದೆ ಮಾಡುತ್ತಿದ್ದಾರೆ. ಇಂತಹವೊಂದು ಆಲೋಚನೆ ಅವರಲ್ಲಿ ಮೂಡಿದ್ದು ಕೂಡ ಆಕಸ್ಮಿಕವಾಗಿಯೇ… ಶಶಿಕಲಾರವರ ಪತಿ ಅಶೋಕ್‌ರವರು ಟ್ರಾವೆಲ್ಸ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ವಿದೇಶಿ ಪ್ರವಾಸಿಗರ ಸಂಪರ್ಕ ಇದ್ದೇ ಇತ್ತು. ಒಮ್ಮೆ ಮೈಸೂರಿಗೆ ಬಂದ ವಿದೇಶಿ ಪ್ರವಾಸಿ ದಂಪತಿಗಳು ನಗರವನ್ನೆಲ್ಲಾ ಸುತ್ತಾಡಿ ಇಲ್ಲಿನ ಪಾರಂಪರಿಕ ಕಟ್ಟಡ, ಪ್ರವಾಸಿ ತಾಣಗಳನ್ನೆಲ್ಲಾ ನೋಡಿದ ಬಳಿಕ ಅವರಿಗೆ ಇಲ್ಲಿನ ಸಾಂಪ್ರದಾಯಿಕ ತಿನಿಸುಗಳನ್ನು ಸವಿಯುವ ಮನಸ್ಸಾಯಿತು. ಆದರೆ ಹೋಟೆಲ್‌ಗೆ ಹೋದವರಿಗೆ ಅಲ್ಲಿ ಕೂಡ ಮೈಸೂರಿನ ಸಾಂಪ್ರದಾಯಿಕ ತಿನಿಸುಗಳು ಕಾಣದಿದ್ದಾಗ ಬೇಸರವಾಯಿತು. ಆದರೆ ಇಲ್ಲಿಯ ತಿನಿಸುಗಳ ಬಗ್ಗೆ ಓದಿ ತಿಳಿದಿದ್ದ ಅವರಿಗೆ ಅದನ್ನೊಮ್ಮೆ ಸವಿಯಲೇ ಬೇಕೆಂಬ ಹಂಬಲ ಮಾತ್ರ ಕಡಿಮೆಯಾಗಿರಲಿಲ್ಲ.

ಆಗ ಅವರಿಗೆ ನೆನಪಾಗಿದ್ದು ಅಶೋಕ್. ನೇರವಾಗಿ ಅಶೋಕ್ ಬಳಿ ಬಂದ ಅವರು ನಮಗೆ ಮೈಸೂರಿನ ತಿನಿಸುಗಳನ್ನು ಸವಿಯುವ ಬಯಕೆಯಾಗಿದ್ದು ಅದಕ್ಕೆ ವ್ಯವಸ್ಥೆ ಮಾಡುವಂತೆ ದುಂಬಾಲು ಬಿದ್ದರು.  ಆಗ ಅನ್ಯ ಮಾರ್ಗವಿಲ್ಲದೆ ಅಶೋಕ್‌ರವರು ತಮ್ಮ ಮನೆಗೆ ಕರೆದೊಯ್ದು ಪತ್ನಿ ಶಶಿಕಲಾರವರ ಮುಖಾಂತರ ಅಡುಗೆ ಮಾಡಿ ಬಡಿಸಿದರು. ಮೈಸೂರು ಶೈಲಿಯ ಉಪ್ಪಿನಕಾಯಿ, ಚಟ್ನಿ, ಪುಳಿಯೋಗರೆ, ಪಲ್ಯ, ಚಪಾತಿ. ಮಜ್ಜಿಗೆ ಹುಳಿ, ಬೇಳೆ ತೊವ್ವೆ, ಅನ್ನ ಸಾಂಬಾರ್, ಮೈಸೂರು ಪಾಕ್, ಮೈಸೂರು ವೀಳ್ಯದೆಲೆ ಹೀಗೆ ವಿವಿಧ ತಿನಿಸುಗಳನ್ನು ಬಾಳೆಲೆಯಲ್ಲಿ ಸವಿದ ಅವರಿಗೆ ಖುಷಿಯೋ ಖುಷಿ. ಇತ್ತ ಅಶೋಕ್ ಹಾಗೂ ಶಶಿಕಲಾ ದಂಪತಿಗಳ ಮುಖದಲ್ಲಿ ತೃಪ್ತಿ ಅಲೆಯಾಡಿತ್ತು. ಹೀಗೆ ಆರಂಭವಾದ ಅತಿಥ್ಯ ಇಂದು ವಿದೇಶಿ ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿ ಗಮನಸೆಳೆಯುತ್ತಿದೆ.

ಶಶಿಕಲಾರವರ ಅತಿಥ್ಯದ ಮನೆಗೆ ತೆರಳುವ ವಿದೇಶಿ ಪ್ರವಾಸಿಗರನ್ನು ಆರತಿ ಮಾಡಿ ಸಂಪ್ರದಾಯ ಬದ್ಧವಾಗಿ ಸ್ವಾಗತಿಸಲಾಗುತ್ತದೆ. ಆ ಬಳಿಕ ಬಾಳಲೆಯಲ್ಲಿ ಸಾಂಪ್ರದಾಯಿಕ ಮೈಸೂರು ಶೈಲಿಯ ಊಟ.. ಊಟದ ಜೊತೆಯಲ್ಲಿ ಮಗನಿಂದ ಕಿವಿಗೆ ಇಂಪಾದ ಸಂಗೀತ.. ಊಟದ ಬಳಿಕ ಪುರುಷರಿಗೆ ಗಂಧದ ತಿಲಕವಾದರೆ ಮಹಿಳೆಯರಿಗೆ ಕುಂಕುಮ ಅರಿಶಿಣ, ಮೈಸೂರು ಮಲ್ಲಿಗೆ ಹೂವು ನೀಡಲಾಗುತ್ತದೆ. ಇಂತಹವೊಂದು ಆತಿಥ್ಯವನ್ನು ಸ್ವೀಕರಿಸಿದ ತೃಪ್ತಿ ಪ್ರವಾಸಿಗರಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಈಗಾಗಲೇ ಫ್ರಾನ್ಸ್, ಲಂಡನ್, ಇಟಲಿ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರವಾಸಿಗರು ಶಶಿಕಲಾರವರ ಆತಿಥ್ಯವನ್ನು ಸ್ವೀಕರಿಸಿ ಹೋಗಿದ್ದು, ಹಾಗೆಯೇ ಮೈಸೂರಿಗೆ ಆಗಮಿಸಿದ ಪ್ರವಾಸಿಗರು ಇವರ ಮನೆಯತ್ತ ಹೆಜ್ಜೆ ಹಾಕುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು