News Karnataka Kannada
Friday, May 03 2024
ಮೈಸೂರು

ಇತಿಹಾಸದ ಪುಟ ಸೇರುತ್ತಿವೆ ಮೈಸೂರಿನ ಚಿತ್ರಮಂದಿರಗಳು

Olimpia
Photo Credit : News Kannada

ಮೈಸೂರು: ಒಂದು ಕಾಲದಲ್ಲಿ ಸಿನಿರಸಿಕರ ಮನಸೆಳೆದು ರಸದೌತಣ ನೀಡಿದ್ದ ಮೈಸೂರು ನಗರದ ಚಿತ್ರಮಂದಿರಗಳು ಒಂದರ ಮೇಲೊಂದರಂತೆ ಬಾಗಿಲು ಹಾಕುತ್ತಿವೆ. ಕಳೆದೊಂದು ದಶಕದಲ್ಲಿ ಅದರಲ್ಲೂ ಕೊರೊನಾ ಬಳಿಕ ಹಲವು ಚಿತ್ರಮಂದಿರಗಳು ಆಟ ಮುಗಿಸಿವೆ.

ನಟರ ಬೃಹತ್ ಪೋಸ್ಟರ್ ಗಳಿಂದ ಕಂಗೊಳಿಸುತ್ತಾ ದಿನಕ್ಕೆ ಮೂರು ಆಟಗಳು ಎಂದೆಲ್ಲ ದೊಡ್ಡದಾಗಿ ಬರೆಯುತ್ತಾ ಸದಾ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಚಿತ್ರಮಂದಿರಗಳು ಆರ್ಥಿಕ ಸಂಕಷ್ಟದಿಂದ ಮುಚ್ಚುತ್ತಿವೆ. ದಿನಕ್ಕೆ ಮೂರು ಆಟವೆಂದು ಬೋರ್ಡ್ ಹಾಕುತ್ತಿದ್ದವರು ಬೋರ್ಡ್ ತೆಗೆದಿಟ್ಟು ಆಟ ಮುಗಿಯಿತು ಎನ್ನುತ್ತಿದ್ದಾರೆ.

ಕೊರೊನಾ ಬಳಿಕ ಮೈಸೂರಿನಲ್ಲಿ ಶಾಂತಲಾ, ಸರಸ್ವತಿ, ಲಕ್ಷ್ಮಿ ಬಾಗಿಲು ಹಾಕಿದ್ದು, ಈಗ ನಗರದ ಗಾಂಧಿಚೌಕದ ಹೃದಯ ಭಾಗದಲ್ಲಿದ್ದ ಒಲಂಪಿಯಾ ಥಿಯೇಟರ್ ಆ ಸಾಲಿಗೆ ಸೇರಿದೆ. ಈ ಥಿಯೇಟರ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿದ್ದರು. ಈ ಥಿಯೇಟರ್ ಆಸುಪಾಸಿನಲ್ಲಿದ್ದ ಮೂರ್ನಾಲ್ಕು ಥಿಯೇಟರ್ ಸೇರಿದಂತೆ ನಗರದಲ್ಲಿ ಹತ್ತಾರು ಥಿಯೇಟರ್ ಇದ್ದರೂ ಎಲ್ಲ ಥಿಯೇಟರ್ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಅವತ್ತಿನ ಮಟ್ಟಿಗೆ ಜನ ಸಾಮಾನ್ಯರಿಗೆ ಸಿನಿಮಾ ಬಿಟ್ಟರೆ ಮನರಂಜನೆ ಪಡೆಯಲು ಬೇರೆ ದಾರಿಗಳಿರಲಿಲ್ಲ. ಹೀಗಾಗಿ ಥಿಯೇಟರ್ ಮಾಲೀಕರಿಗೆ ತೊಂದರೆಯಾಗುತ್ತಿರಲಿಲ್ಲ.

ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲವೂ ಅಭಿವೃದ್ಧಿಯಾಗಿದೆ. ಸಿನಿಮಾ ಗಳನ್ನು ಮನೆಯಲ್ಲಿಯೇ ಕುಳಿತು ನೋಡುವ ಮತ್ತು ಬೇರೆ ಬೇರೆ ಕಾರಣಗಳಿಂದ ಥಿಯೇಟರ್ ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದ ಥಿಯೇಟರ್ ಗಳಿಗೆ ನಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣ ಸರ್ಕಾರ ವಿಧಿಸಿದ ನಿರ್ಬಂಧ ಸಂಪೂರ್ಣ ನಷ್ಟಕ್ಕೆ ಕಾರಣವಾಯಿತು. ಕೊರೊನಾ ಬಳಿಕ ಥಿಯೇಟರ್ ಗೆ ಬರುವ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸಿದ್ದು, ನಷ್ಟದ ಹೊರೆಯನ್ನು ಮಾಲೀಕರು ಹೊರುವಂತಾಗಿದೆ. ಇದೆಲ್ಲದರ ಕಾರಣದಿಂದ ಒಂದರ ಮೇಲೊಂದರಂತೆ ಥಿಯೇಟರ್ ಗಳನ್ನು ಮುಚ್ಚಲು ಮಾಲೀಕರು ಮುಂದಾಗುತ್ತಿದ್ದಾರೆ. ಈಗ ಒಲಂಪಿಯಾ ಚಿತ್ರಮಂದಿರದ ಸರದಿಯಾಗಿದೆ.

ಮೈಸೂರು ನಗರದಲ್ಲಿ ಸುಮಾರು 26 ಚಿತ್ರಮಂದಿರಗಳಿದ್ದವು. ಅವತ್ತಿನ ದಿನಗಳಲ್ಲಿ ಈ ಎಲ್ಲ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿದ್ದರು.ಈ ಚಿತ್ರಮಂದಿರಗಳ ಪೈಕಿ ಒಲಂಪಿಯಾ ಒಂದಾಗಿತ್ತು. ಇದನ್ನು 1949ರಲ್ಲಿ ನಿರ್ಮಿಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಅದೆಷ್ಟೋ ಮಂದಿ ಈ ಚಿತ್ರಮಂದಿರದಲ್ಲಿ ಚಿತ್ರ ನೋಡಿದ್ದಾರೆ. ಆದರೀಗ ಇತಿಹಾಸದ ಪುಟಕ್ಕೆ ಇದು ಸೇರಲಿದ್ದು ಇನ್ನೇನಿದ್ದರೂ ನೆನಪಷ್ಟೆ.

ಇತ್ತೀಚೆಗಿನ ದಿನಗಳಲ್ಲಿ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಮಂದಿರಗಳತ್ತ ಮುಖ ಮಾಡುತ್ತಿದ್ದು, ಸಿಂಗಲ್ ಸ್ಕ್ರೀನ್ ನ ಚಿತ್ರಮಂದಿರಗಳತ್ತ ತೆರಳಲು ಹಿಂದೇಟು ಹಾಕುತ್ತಿರುವುದು ಕೂಡ ಚಿತ್ರಮಂದಿರಗಳು ನಷ್ಟ ಹೊಂದಲು ಕಾರಣವಾಗಿದೆ. ಚಿತ್ರಮಂದಿರಗಳು ಮುಚ್ಚುತ್ತಿರುವುದರಿಂದ ಸದ್ಯ ನಗರದಲ್ಲಿ 26ರಷ್ಟಿದ್ದ ಚಿತ್ರಮಂದಿರದ ಸಂಖ್ಯೆ ಹತ್ತಕ್ಕಿಳಿದಿದೆ ಮುಂದೆ ಏನಾಗಲಿದೆಯೋ ಗೊತ್ತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು