News Karnataka Kannada
Tuesday, April 30 2024
ಮೈಸೂರು

ಮೈಸೂರು: ‘ಮುಕ್ತಕ’ ಸಾಹಿತ್ಯದ ಒಂದು ವಿಶಿಷ್ಟ ಸ್ವರೂಪ – ಬನ್ನೂರು ರಾಜು

'Muktaka' is a unique form of literature - Bannur Raju
Photo Credit : By Author

ಮೈಸೂರು: ಕಳೆದ ಇಪ್ಪತ್ತನೇ ಶತಮಾನದವರೆಗೂ ಸಾಹಿತ್ಯದ ಒಂದು ವಿಶಿಷ್ಟ ಸ್ವರೂಪವಾದ ‘ಮುಕ್ತಕ’ ರಚನೆಯ ಬಗ್ಗೆ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಆದರೀಗ ಖ್ಯಾತ ಮುಕ್ತ ಕವಿ ಎಂ.ಮುತ್ತುಸ್ವಾಮಿ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಮುಕ್ತಕ ರಚನೆಯ ಬಗ್ಗೆ ಅರಿವಿನ ಒಂದು ಕ್ರಾಂತಿಯನ್ನೇ ಮಾಡ ಹೊರಟಿದ್ದಾರೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ರಾಮಕೃಷ್ಣ ನಗರದಲ್ಲಿರುವ ರಮಾ ಗೋವಿಂದ ರಂಗಮಂದಿರದಲ್ಲಿ ರೋಟರಿ ಕ್ಲಬ್ ಆಫ್ ಮೈಸೂರ್ ಸ್ಟಾರ್ ಆಯೋಜಿಸಿದ್ದ ಸಾಹಿತ್ಯೋತ್ಸವದಲ್ಲಿ  ಮುಕ್ತಕ ಕವಿಗಳಾದ ಎಂ.ಮುತ್ತು ಸ್ವಾಮಿ, ಕಮಲಾರಾಜೇಶ್,ಮಮತಾ, ಸುಮನಾರಾವ್, ಸುಜಾತಾ ರವೀಶ್ ಅವರು ಸಂಯುಕ್ತವಾಗಿ ರಚಿಸಿರುವ ‘ಪಂಚ ಮುಕ್ತಕ ಹಾರ’ ಕೃತಿ ಕುರಿತು ಮಾತನಾಡುತ್ತಿದ್ದ ಅವರು, ಹನಿಗವನ, ಚುಟುಕುಗಳೆಲ್ಲವೂ ಮುಕ್ತಕವಾಗಲಾರವು. ಮುಕ್ತಕಕ್ಕೆ ಅದರದೇ  ಆದ ವ್ಯಾಕರಣ, ಛಂದೋಬದ್ಧ ಭಾಷೆ ಉಂಟೆಂದರು.

ಬಹು ಪ್ರಾಚೀನ ಇತಿಹಾಸ ಇರುವ ಕನ್ನಡ ಸಾಹಿತ್ಯದ ಗರ್ಭದೊಳಗೆ ಅನೇಕ ಸಾಹಿತ್ಯ ಪ್ರಕಾರಗಳಿದ್ದು ಇದರಲ್ಲಿ ಮುಕ್ತಕ ಸಾಹಿತ್ಯವೂ ಪ್ರಮುಖವಾಗಿದೆ.  ಛಂದಸ್ಸಿನಲ್ಲಿ ಅಕ್ಷರಗಣ, ಅಂಶಗಣ, ಹಾಗೂ ಮಾತ್ರಗಣಗಳೆಂಬ ಮೂರು ವಿಧಗಳಿವೆ. ಇವನ್ನು ಇಟ್ಟುಕೊಂಡು ಮಾತ್ರಗಣಗಳ ಮೂಲಕ ಚೌಪದಿಯಲ್ಲಿ ಮುಕ್ತಕಗಳನ್ನು ರಚಿಸುವಾಗ ಗಣ, ಮಾತ್ರೆ, ಯತಿ, ಹಾಗೂ ಆದಿ ಪ್ರಾಸಗಳನ್ನು ಬಳಸಿ ಅಜ, ಗಜ, ಸಿಂಹ, ಮತ್ತು ವೃಷಭ ಪ್ರಾಸಗಳಲ್ಲಿ ರಚಿಸಬೇಕೆಂಬ ನಿಯಮವಿದ್ದು ಇದರಲ್ಲಿ ಸಾಕಷ್ಟು ಮಂದಿ ಯಶಸ್ವಿಯೂ ಆಗಿದ್ದಾರೆ, ವಿಶೇಷವಾಗಿ ಕನ್ನಡದ ಭಗವದ್ಗೀತೆ ಎಂದೇ ಸಾಹಿತ್ಯ ಲೋಕದಲ್ಲಿ ಪರಿಗಣಿಸಲ್ಪಟ್ಟಿರುವ ‘ಮಂಕುತಿಮ್ಮನ ಕಗ್ಗ’ ಎಂಬ ಮುಕ್ತಕ ಸಾಹಿತ್ಯದ ಬೃಹತ್ ಕೃತಿಯನ್ನು ರಚಿಸಿಕೊಟ್ಟು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿರುವ  ದಾರ್ಶನಿಕ ಕವಿ ಡಿವಿಜಿ ಅವರು ಮುಕ್ತಕ ಕೃಷಿಕರಿಗೆ ಮಾದರಿಯಾಗಿದ್ದಾರೆ. ಈ ದಿಸೆಯಲ್ಲಿ ಮುಕ್ತಕ ಮೇಷ್ಟ್ರು ಎನಿಸಿರುವ ಮುಕ್ತಕ ಕವಿ ಮುತ್ತುಸ್ವಾಮಿ ಅವರು ಮುಕ್ತಕ ಸಾಹಿತ್ಯ ಅಕಾಡೆಮಿಯೊಂದನ್ನು ಸ್ಥಾಪಿಸಿ ತನ್ಮೂಲಕ ಮುಕ್ತಕ ಸಾಹಿತ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆಂದ ಅವರು, ಸುಮಾರು ಐನೂರು ಮಂದಿ ಮುಕ್ತ ಕವಿಗಳನ್ನು ಈಗಾಗಲೇ ತಯಾರು ಮಾಡಿರುವ ಮುತ್ತುಸ್ವಾಮಿ ಅವರು ಪ್ರಸ್ತುತ ಪ್ರಕಟಿಸಿರುವ ‘ಪಂಚ ಮುಕ್ತಕ ಹಾರ’ ಕೃತಿಯು ಮುಕ್ತಕ ಸಾಹಿತ್ಯಕ್ಕೊಂದು ಅಮೂಲ್ಯ ಕೊಡುಗೆಯಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಬಿಎಸ್ಆರ್ ರೋಟರಿ ಮೈಸೂರ್ ಸ್ಟಾರ್ ನ ಡಾ.ಚಂದ್ರ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ  ಶುಭ ಹಾರೈಸಿದರು. ಸಾಹಿತಿ ಜರಗನಹಳ್ಳಿ ಆರ್. ಸದಾಶಿವಯ್ಯನವರು ‘ಪಂಚ ಮುಕ್ತಕ ಹಾರ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅದರ ಸಂಕ್ಷಿಪ್ತ ಪರಿಚಯ ನೀಡಿದರು. ಭಾಮೀಸ್ ಕನ್ಸ್ಟ್ರಕ್ಷನ್ ನ ರೊ.ರಾಘವೇಂದ್ರ ಪ್ರಸಾದ್, ವಿದ್ಯಾಸಿರಿ ಛೇರ್ಮನ್ ರೊ. ಹರೀಶ್, ಸಹಾಯಕ ಗೌರ್ನರ್ ರೊ.ವಾಸುದೇವ್ ಹಾಗೂ ಖ್ಯಾತ ಕಲಾವಿದೆ ಡಾ.ಜಮುನಾ ರಾಣಿ ಮಿರ್ಲೆ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.

ಇದೇ ವೇಳೆ ಮುಕ್ತಕ ಕವಯತ್ರಿಯರಾದ ಕಮಲಾ ರಾಜೇಶ್, ಮಮತಾ, ಸುಮನಾರಾವ್, ಸುಜಾತಾ ರವೀಶ್ ಹಾಗೂ ಕೆ.ಲಕ್ಷ್ಮೀ  ಅವರುಗಳನ್ನು  ಅಭಿನಂದಿಸಿ ಸನ್ಮಾನಿಸಲಾಯಿತು.

ಸೂರ್ಯ ಸ್ಕೂಲ್ ಆಫ್ ಆರ್ಟ್, ಮಿರಾಕಲ್  ಡ್ಯಾನ್ಸ್ ಮತ್ತು ಫಿಟ್ನೆಸ್ ಸ್ಟುಡಿಯೋದ ಮಕ್ಕಳು ವಿವಿಧ ನೃತ್ಯಗಳನ್ನು  ನಡೆಸಿಕೊಟ್ಟರು. ಇವರೆಲ್ಲರಿಗೂ ಪುಸ್ತಕ ಸಹಿತ ಪ್ರಮಾಣ ಪತ್ರ ನೀಡಿ ಕಮಲಾರಾಜೇಶ್ ಅವರು ಗೌರವಿಸಿದರು.

ರೋಟರಿ ಕ್ಲಬ್ ಆಫ್ ಮೈಸೂರ್ ಸ್ಟಾರ್ ನ ಅಧ್ಯಕ್ಷ  ರೊ.ಸಂತೋಷ್ ಎಸ್. ಗೌಡ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಗ್ರಾಮಾಂತರ ವಿಭಾಗದ ಅಧ್ಯಕ್ಷ ಗಂಗಾಧರ ಗೌಡ, ಮುಕ್ತಕ ಕವಿ ಮುತ್ತುಸ್ವಾಮಿ,ಹಿಮಾಲಯ ಫೌಂಡೇಶನ್ ಅಧ್ಯಕ್ಷ ಕವಿ ಅನಂತ, ವಕೀಲ ಎಸ್.ಗಣೇಶ್, ಪತ್ರಕರ್ತ ಗ್ರಹೇಶ್ವರ್, ಲೇಖಕಿ ರತ್ನಾಹಾಲಪ್ಪಗೌಡ ಇನ್ನಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು