News Karnataka Kannada
Wednesday, May 01 2024
ವಿಶೇಷ

ಮೈಸೂರು: ಅರಮನೆ ಕೋಟೆ ಕುಸಿತ, ತುರ್ತು ದುರಸ್ತಿಗೆ ಮುಂದಾದ ಅರಮನೆ ಮಂಡಳಿ

Palace Board to carry out urgent repairs in Palace Fort collapse
Photo Credit : By Author

ಮೈಸೂರು: ಜಗತ್ ವಿಖ್ಯಾತ ಮೈಸೂರು ಅರಮನೆಯ ಕೋಟೆ ನಿರ್ವಹಣಾ ವೈಫಲ್ಯದಿಂದಾಗಿ ಕುಸಿದು ಬಿದ್ದಿದೆ. ಅರಮನೆಯ ಮುಖ್ಯದ್ವಾರವಾದ ಜಯಮಾರ್ತಾಂಡ ಗೇಟ್ ಹಾಗೂ ಕೋಟೆ ಮಾರಮ್ಮ ದೇವಾಲಯದ ಮಧ್ಯಭಾಗದಲ್ಲಿ(ಗಾಯತ್ರಿ ದೇವಾಲಯದ ಹಿಂಬದಿ) ಕೋಟೆ ಧರೆಗುರುಳಿದಿದೆ. ಇದರೊಂದಿಗೆ ಅರಮನೆ ಆಡಳಿತ ಮಂಡಳಿಯ ವೈಫಲ್ಯ ಜಗಜ್ಜಾಹೀರಾಗಿದೆ.

ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಸುರಿದ ನಿರಂತರವಾಗಿ ಸುರಿದ ಮಳೆಯ ಪರಿಣಾಮವಾಗಿ ದಸರಾ ಮಹೋತ್ಸವಕ್ಕೂ ಮುನ್ನವೇ ಕೋಟೆ ಬಿರುಕು ಬಿಟ್ಟಿತ್ತು. ಒಂದೆರಡು ಕಲ್ಲುಗಳು ಧರೆಗೆ ಉರುಳಿದ್ದವು. ಆದರೆ ಅರಮನೆ ಆಡಳಿತ ಮಂಡಳಿ ಯಾವುದೇ ದುರಸ್ಥಿ ಕಾರ್ಯ ಕೈಗೊಂಡಿರಲಿಲ್ಲ.
ಒಂದು ವಾರದಿಂದ ರಾತ್ರಿ ವೇಳೆ ನಿರಂತರವಾಗಿ ಮಳೆ ಸುರಿದ ಪರಿಣಾಮ ಕೋಟೆ ಕುಸಿದು ಬಿದ್ದಿದೆ. ಮಂಗಳವಾರ ಮುಂಜಾನೆ ವಾಹನ ಸವಾರರು ಕೋಟೆ ಕುಸಿದಿರುವುದನ್ನು ಗಮನಿಸಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಕಾರ್ಮಿಕರು, ದೊಡ್ಡ ಟಾರ್ಪಲ್ ತಂದು ಕುಸಿದ ಜಾಗಕ್ಕೆ ಹೊದಿಸಿದರು.

200 ವರ್ಷದಷ್ಟು ಹಳೆಯ ಕೋಟೆ: ಮೈಸೂರು ಅರಮನೆಯ ಕೋಟೆ- ಕೊತ್ತಲು, ಗೇಟು- ಕಮಾನಿಗೂ ತನ್ನದೇ ಇತಿಹಾಸವಿದೆ. ಈಗ ಬಿದ್ದಿರುವ ಕೋಟೆ ಬರೋಬ್ಬರಿ 200 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಎಂದು ಅಂದಾಜಿಸಲಾಗುತ್ತಿದೆ. ಈ ಬಗ್ಗೆ ಪ್ರತಿನಿಧಿಯೊಂದಿಗೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ವಿ.ನಂಜರಾಜ ಅರಸು, ಟಿಪ್ಪು ಸುಲ್ತಾನ್ 1799ರಲ್ಲಿ ನಾಲ್ಕನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಕೊಲೆಯಾದ. ಮೈಸೂರು ಸಾಮ್ರಾಜ್ಯವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ಬ್ರಿಟೀಷರು, ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತರಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ಲಕ್ಷ್ಮಿರಮಣಸ್ವಾಮಿ ದೇವಾಲಯದಲ್ಲಿ ನಡೆಯಿತು. 1803ರಲ್ಲಿ ರಾಜವಂಶಸ್ಥರ ವಾಸ್ತವ್ಯಕ್ಕಾಗಿ ಮರದ ಅರಮನೆ ನಿರ್ಮಿಸಿಕೊಟ್ಟರು. ಸುತ್ತಲೂ ಸುಮಾರು 7-8 ಸಾವಿರ ಜನರು ವಾಸಿಸಲು ಯೋಗ್ಯವಾದ ಪಟ್ಟಣ(ಟೌನ್​ಶಿಪ್) ನಿರ್ಮಾಣವಾಯಿತು. ಅದೇ ಸಂದರ್ಭದಲ್ಲಿ ಅಂದರೆ ಸುಮಾರು 1810-1820ರ ಆಸುಪಾಸಿನಲ್ಲಿ ಅರಮನೆ ಸುತ್ತಲೂ ಕೋಟೆ ನಿರ್ಮಾಣವಾಗಿದೆ ಎಂದು ಅಂದಾಜಿಸಿದರು.

ಟಿಪ್ಪು ಮೃತಪಟ್ಟಾಗ ಮುಮ್ಮಡಿ ಕೃಷ್ಣರಾಜ ಒಡೆಯರ್ ವಯಸ್ಸು 5 ವರ್ಷ ಆಗಿತ್ತು. 18 ವರ್ಷದವರೆಗೂ ಅಧಿಕಾರ ಕೊಡಲಿಲ್ಲ. ಬಳಿಕವೂ 1831ರಿಂದ 1881ರವರೆಗೆ ಬ್ರಿಟೀಷರೇ ರಾಜ್ಯಭಾರ ನಡೆಸಿದರು. ಕಾಲರ ಮುಂತಾದ ಕಾಯಿಲೆಗಳು ಬಂದಾಗ ಅರಮನೆ ಕೋಟೆಯ ಒಳಭಾಗದಲ್ಲಿದ್ದ ನಿವಾಸಿಗಳನ್ನು ಸೀತ ವಿಲಾಸ, ರಾಮವಿಲಾಸ ಮುಂತಾದ ಅಗ್ರಹಾರಗಳನ್ನು ನಿರ್ಮಿಸಿ ಪ್ರತ್ಯೇಕಿಸಲಾಯಿತು. ಅಂದರೆ ಅಷ್ಟೊತ್ತಿಗಾಗಲೇ ಅರಮನೆಯ ಕೋಟೆ ಇತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು ಎಂದು ವಿವರಿಸಿದರು.

ಕುಶಾಲತೋಪಿನ ನೆಪ..!

ಅರಮನೆ ಕೋಟೆ ಕುಸಿಯಲು ದಸರಾ ಸಂದರ್ಭದಲ್ಲಿ ಸಿಡಿಸಿದ ಕುಶಾಲತೋಪಿನ ಸದ್ದು ಕಾರಣ ಎಂದು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಬೊಟ್ಟು ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಪ್ರತಿ ವರ್ಷ ದಸರಾ ಮಹೋತ್ಸವದ ಪ್ರಯುಕ್ತ ಪೂರ್ವಾಭ್ಯಾಸವಾಗಿ ಫಿರಂಗಿ ಮದ್ದು ಸಿಡಿಸುವುದು ವಾಡಿಕೆಯಾಗಿದೆ. ಅದರಂತೆ ಫಿರಂಗಿ ಮದ್ದು ಸಿಡಿಸುವ ಪೂರ್ವಾಭ್ಯಾಸವನ್ನುಅರಮನೆ ಬಿಸಿಲು ಮಾರಮ್ಮ ದೇವಸ್ಥಾನ ಸಮೀಪದ ವಾಹನ ನಿಲ್ದಾಣದಲ್ಲಿ ನಡೆಸಲಾಗುತ್ತಿತ್ತು. ಫಿರಂಗಿ ಶಬ್ಧಕ್ಕೆ, ಕೋಟೆ ಗೋಡೆಯು ಹಳೆಯದಾಗಿದ್ದು ಹಾಗೂ ಮಳೆಯ ಕಾರಣದಿಂದ ಬಿರುಕು ಬಿಟ್ಟಿತ್ತು. ಅರಮನೆಯ ಮುಖ್ಯ ಕಟ್ಟಡ, ಅರಮನೆಯ ಆವರಣದಲ್ಲಿ ಬರುವ ಎಲ್ಲ ದೇವಾಲಯಗಳೂ ತುಂಬಾ ಹಳೆಯ ಕಟ್ಟಡವಾಗಿದ್ದು, ಅರಮನೆ ಕಟ್ಟಡ ಗೋಡೆಗಳ ಸುರಕ್ಷತೆಯ ಹಿತದೃಷ್ಟಿಯಿಂದ ಮದ್ದು ಸಿಡಿಸುವ ಪೂರ್ವಾಭ್ಯಾಸವನ್ನು ಬೇರೆ ಕಡೆಗೆ ವರ್ಗಾಯಿಸಲು ಪೊಲೀಸ್ ಆಯುಕ್ತರಿಗೆ ಕೋರಲಾಗಿತ್ತು. ಅಲ್ಲದೆ ಮಳೆ ಹಾಗೂ ಕೋಟೆ ಗೋಡೆ ಹಳೆಯದಾಗಿರುವುದರಿಂದ ಕುಸಿದು ಬಿದ್ದಿದೆ.

ಈ ಸಂಬಂಧ  ಕುಸಿದಿರುವ ಸುಮಾರು 20 ಮೀಟರ್ ಉದ್ದದ ಗೋಡೆಯನ್ನೂ ಸೇರಿದಂತೆ ಸುಮಾರು 50 ಮೀಟರ್ ಉದ್ದದ ಗೋಡೆ ದುರಸ್ಥಿಗೆ ಇ-ಪ್ರಕ್ಯೂರ್​ಮೆಂಟ್​ನಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಒಂದನೇ ದರ್ಜೆಯ ಗುತ್ತಿಗೆದಾರ ರಾಮಚಂದ್ರ ಅವರಿಗೆ ಕಾರ್ಯಾದೇಶ ನೀಡಲಾಗಿದೆ. ಸದರಿಯವರು ನಿಯಮಾನುಸಾರ ಇಂದು ಕೆಲಸವನ್ನು ಪ್ರಾರಂಭಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿಯ ದಸರಾ ಮಹೋತ್ಸವದ ಸಂದರ್ಭದಲ್ಲಿ ಒಟ್ಟು ಮೂರು ಬಾರಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ಕೋಟೆ ಮಾರಮ್ಮ ದೇವಾಲಯದ ಬಳಿ ಪೂರ್ವಾಭ್ಯಾಸ ನಡೆಸಿದ್ದು ಒಮ್ಮೆ ಮಾತ್ರ. ಎರಡನೇ ಹಾಗೂ ಮೂರನೇ ಕುಶಾಲತೋಪು ಸಿಡಿಸುವ ತಾಲೀಮು ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ವಾಹನ ನಿಲ್ದಾಣ ಬಳಿ ನಡೆಯಿತು. ಅಲ್ಲದೆ ಫಿರಂಗಿ ಗಾಡಿಗಳಿಂದ ಹೊರಹೊಮ್ಮುವ ಶಬ್ಧವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಯಂತ್ರೋಪಕರಣಗಳಿಂದ ಅಳೆದಿದ್ದರು. ಫಿರಂಗಿ ಗಾಡಿಗಳಿಂದ ಸರಾಸರಿ 92.5 ಡಿಸಿಬಲ್ ಶಬ್ದ ಹೊರಹೊಮ್ಮಿತ್ತು. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪಟಾಕಿ ಶಬ್ದಕ್ಕೆ ಗರಿಷ್ಠ ಮಿತಿ 120 ಡಿಸಿಬಲ್ ಆಗಿದೆ. ಅಂದರೆ ಫಿರಂಗಿ ಗಾಡಿಗಳಿಂದ ಹೊರಹೊಮ್ಮುವ ಶಬ್ದವು ಪಟಾಕಿ ಸದ್ದಿಗಿಂತಲೂ ಕಡಿಮೆ ಎಂಬುದು ಗಮನಾರ್ಹವಾದ ಸಂಗತಿ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅರಮನೆ ಕೋಟೆ ನಿರ್ಮಾಣವಾಗಿದೆ. ನಿರ್ವಹಣೆ ಇಲ್ಲದ ಪರಿಣಾಮವಾಗಿ ಕೋಟೆ ಕುಸಿದು ಬಿದ್ದಿದೆ ಎಂದು ಇತಿಹಾಸ ತಜ್ಞ, ನಿವೃತ್ತ ಪ್ರಾಧ್ಯಾಪಕ, ಪ್ರೊ.ಪಿ.ವಿ.ನಂಜರಾಜ ಅರಸು ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು