ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಅಂತರರಾಜ್ಯ ಮಾದಕ ವಸ್ತು ಜಾಲ ಬಯಲಾಗಿದೆ. ಅದರಲ್ಲೂ ನಂಜನಗೂಡಿನ ಬಾಳೆ ತೋಟದ ಮರೆಯಲ್ಲಿ ಯಾರಿಗೂ ಅನುಮಾನ ಬಾರದಂತೆ ಎಂಡಿಎಂಎ (MDMA) ಮಾದಕ ವಸ್ತು ದಂಧೆ ನಡೆಯುತ್ತಿದ್ದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಕೇರಳದ ಆಲುವಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಜಾಲದ ಮಾಸ್ಟರ್ ಮೈಂಡ್ ಎನ್ನಲಾದ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ ಬಾಯ್ (31) ಎಂಬಾತನನ್ನು ಬಂಧಿಸಲಾಗಿದೆ.
ಮೂಲತಃ ಕೇರಳದವನಾದ ಧನೇಶ್ ಹಲವು ವರ್ಷಗಳಿಂದ ನಂಜನಗೂಡಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಜಮೀನೊಂದನ್ನು ಬಾಡಿಗೆಗೆ ಪಡೆದು ಬಾಳೆ ಬೆಳೆ ಬೆಳೆಯುತ್ತಿದ್ದ ಈತ, ಬಾಳೆ ತೋಟದ ಮರೆಯಲ್ಲೇ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಮಾದಕ ವಸ್ತುಗಳ ದಂಧೆ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಇದು ಕೇವಲ ಸ್ಥಳೀಯ ಮಟ್ಟದ ದಂಧೆಯಾಗಿರದೆ, ಅಂತರರಾಜ್ಯ ಮಟ್ಟದಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ನಡೆಸುತ್ತಿದ್ದ ಜಾಲ ಎಂಬ ಮಾಹಿತಿ ಹೊರಬಿದ್ದಿದೆ. ಕೇರಳ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಜಾಲದ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಕೇರಳ ಪೊಲೀಸರಿಗೆ ಮಾಹಿತಿ ಸಿಗುತ್ತೆ, ಮೈಸೂರು ಪೊಲೀಸರಿಗೆ ಸಿಗಲಿಲ್ವಾ?
ನಂಜನಗೂಡಿನಲ್ಲೇ ಇಷ್ಟು ದೊಡ್ಡ ಮಟ್ಟದ ಮಾದಕ ವಸ್ತು ದಂಧೆ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರಿಗೆ ಇದರ ಸುಳಿವು ಸಿಕ್ಕಿರಲಿಲ್ಲವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹೊರರಾಜ್ಯದ ಪೊಲೀಸರು ಬಂದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವವರೆಗೂ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ಇರಲಿಲ್ಲವೇ? ಅಥವಾ ಮಾಹಿತಿ ಇದ್ದರೂ ಕ್ರಮ ಕೈಗೊಂಡಿರಲಿಲ್ಲವೇ ಎಂಬ ಪ್ರಶ್ನೆಗಳು ಎದ್ದಿವೆ. ಈ ಹಿಂದೆ ಕೂಡ ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಜಾಲವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆಹಚ್ಚಿದ್ದ ಘಟನೆ ನಡೆದಿತ್ತು. ಇದೀಗ ಕೇರಳ ಪೊಲೀಸರು ನಂಜನಗೂಡಿನಲ್ಲಿ ಕಾರ್ಯಾಚರಣೆ ನಡೆಸಿರುವುದು ಮೈಸೂರು ಭಾಗದಲ್ಲಿ ಮಾದಕ ವಸ್ತು ಜಾಲದ ವ್ಯಾಪಕತೆಯ ಬಗ್ಗೆ ಆತಂಕ ಮೂಡಿಸಿದೆ.
ಒಂದೆಡೆ ಯುವ ಸಮುದಾಯವನ್ನು ಮಾದಕ ವಸ್ತುಗಳ ಕಪಿಮುಷ್ಟಿಯಿಂದ ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮತ್ತೊಂದೆಡೆ ಕೃಷಿ ಜಮೀನುಗಳ ಮರೆಯಲ್ಲಿ ಅಂತರರಾಜ್ಯ ಮಟ್ಟದ ಡ್ರಗ್ಸ್ ದಂಧೆ ನಡೆಯುತ್ತಿರುವ ಆರೋಪ ಕೇಳಿಬರುತ್ತಿದೆ. ಹೊರರಾಜ್ಯದ ಪೊಲೀಸರಿಗೆ ಸಿಗುತ್ತಿರುವ ಡ್ರಗ್ಸ್ ಜಾಲದ ಸುಳಿವು ನಂಜನಗೂಡು ಪೊಲೀಸರಿಗೆ ಏಕೆ ಸಿಗುತ್ತಿಲ್ಲ?
ಮೈಸೂರು ಜಿಲ್ಲಾ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯಾದ್ಯಂತ ಮಾದಕ ವಸ್ತು ಜಾಲದ ಬೇರುಗಳನ್ನು ಪತ್ತೆಹಚ್ಚಬೇಕಿದೆ. ನಂಜನಗೂಡಿನ ಬಾಳೆ ತೋಟದ ಮರೆಯಲ್ಲಿ ನಡೆದಿದ್ದ ದಂಧೆಯ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದೂ ತನಿಖೆಯಿಂದ ಹೊರಬರಬೇಕಿದೆ.

