ಗಂಗೊಳ್ಳಿ: ಪಿತ್ರಾರ್ಜಿತ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ನಡುವೆಯೇ, ವಿವಾದಿತ ಜಾಗಕ್ಕೆ ಜೆಸಿಬಿ ತಂದು ಕಬ್ಬಿಣದ ತಂತಿ ಬೇಲಿಯನ್ನು ಹಾನಿಗೊಳಿಸಿ, ಪ್ರಶ್ನಿಸಿದ ವೃದ್ಧ ದಂಪತಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಗಂಗೊಳ್ಳಿಯ ಮುಬಾರಕ್ ಮೊಹಲ್ಲಾದಲ್ಲಿ ನಡೆದಿದೆ.

ಗಂಗೊಳ್ಳಿ ಫಾತಿಮ ಕಂಪೌಂಡ್, ಚರ್ಚ್ ರಸ್ತೆ ನಿವಾಸಿ ನಾಕುದಾ ಶಾವುಲ್ ಹಮೀದ್ (75) ನೀಡಿದ ದೂರಿನಂತೆ ಅಬ್ದುಲ್ ಸಲಾಂ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರರಿಗೆ ಗಂಗೊಳ್ಳಿ ಗ್ರಾಮದ ಮುಬಾರಕ್ ಮೊಹಲ್ಲಾದ ಸರ್ವೆ ನಂ. 111/6P2ರಲ್ಲಿ 1.01 ಎಕರೆ ಪಿತ್ರಾರ್ಜಿತ ಜಾಗವಿದ್ದು, ಇದರ ಮಾಲೀಕತ್ವಕ್ಕೆ ಸಂಬಂಧಿಸಿ ಹಸೀಬ್ ಎಂಬವರೊಂದಿಗೆ ವಿವಾದವಿದೆ. ಈ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ವಿಚಾರಣೆಯಲ್ಲಿದೆ ಎನ್ನಲಾಗಿದೆ.

ಜಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದ ಹಿನ್ನೆಲೆಯಲ್ಲಿ ಅ. 30ರಂದು ಸ್ವಚ್ಛತಾ ಕಾರ್ಯ ನಡೆಸಿ ಕಾಂಕ್ರೀಟ್ ಕಂಬಗಳನ್ನು ನೆಟ್ಟು ಕಬ್ಬಿಣದ ಸರಳುಗಳಿಂದ ಬೇಲಿ ನಿರ್ಮಿಸಲಾಗಿತ್ತು. ಆದರೆ ನ. 7ರಂದು ಸಂಜೆ 4 ಗಂಟೆ ಸುಮಾರಿಗೆ ಅಬ್ದುಲ್ ಸಲಾಂ ಅವರು ಜೆಸಿಬಿಯನ್ನು ತಂದು ವಿವಾದಿತ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಲಿಯನ್ನು ಹಾನಿಗೊಳಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ವೇಳೆ ದೂರುದಾರರು ಹಾಗೂ ಅವರ ಪತ್ನಿ ಸಾಬೀರಾ ಬಾನು ಕೃತ್ಯವನ್ನು ಪ್ರಶ್ನಿಸಿದಾಗ, ಅವರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ, ಕೈಗಳಿಂದ ದೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.