News Karnataka Kannada
Wednesday, May 08 2024
ಮಂಡ್ಯ

ಹೇಮಗಿರಿಯಲ್ಲಿ ಫೆ.8ರಂದು ಸರಳ ಬ್ರಹ್ಮರಥೋತ್ಸವ

Temple
Photo Credit : News Kannada

ಮಂಡ್ಯ : ಕೃಷ್ಣರಾಜಪೇಟೆ ತಾಲೂಕಿನ ಪುರಾಣ ಪ್ರಸಿದ್ಧವಾದ ಹೇಮಗಿರಿ ಜಾತ್ರೆಯ ಅಂಗವಾಗಿ ನಡೆಯಲಿರುವ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯವರ ವಾರ್ಷಿಕ ರಥೋತ್ಸವದ ಹಿನ್ನೆಲೆಯಲ್ಲಿ ಬುಧವಾರ ದೇವರ ಉತ್ಸವ ಮೂರ್ತಿಗಳನ್ನು ಅಡ್ಡಪಲ್ಲಕಿ ಉತ್ಸವದ ಮೂಲಕ ಬಂಡಿಹೊಳೆ ಗ್ರಾಮದಿಂದ ಸಾಂಪ್ರದಾಯಿಕ ಪೂಜೆಯೊಂದಿಗೆ ಹೇಮಗಿರಿ ಬೆಟ್ಟಕ್ಕೆ ತರಲಾಯಿತು.

ಕೋವಿಡ್ ಮೂರನೇ ಅಲೆಯ ಹಿನ್ನೆಲೆಯಲ್ಲಿ ಭೃಗು ಮಹರ್ಷಿಗಳ ತಫೋಭೂಮಿಯಾಗಿರುವ ಹೇಮಗಿರಿಯ ದನಗಳ ಜಾತ್ರೆ ಹಾಗೂ ರಥೋತ್ಸವವನ್ನು ನಿಷೇಧಿಸಿ ಜಿಲ್ಲಾಡಳಿತವು ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಹೇಮಗಿರಿ ದನಗಳ ಜಾತ್ರೆ ನಡೆಯುವುದೋ ಇಲ್ಲವೋ ರಥೋತ್ಸವ ನಡೆಯಬೇಕಾದರೆ ದೇವರ ಉತ್ಸವ ಮೂರ್ತಿಯು ಬಂಡಿಹೊಳೆ ಗ್ರಾಮದ ಸ್ವಸ್ಥಾನದಿಂದ ಹೇಮಗಿರಿ ಬೆಟ್ಟವನ್ನು ತಲುಪಬೇಕಾದ ಅನಿವಾರ್ಯತೆ ಹಾಗೂ ಆತಂಕದ ವಾತಾವರಣವು ನಿರ್ಮಾಣವಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರು ಕೋವಿಡ್ ತೀವ್ರತೆಯು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಥೋತ್ಸವ ಹಾಗೂ ಇತಿಹಾಸ ಪ್ರಸಿದ್ಧವಾದ ದನಗಳ ಜಾತ್ರೆ ನಡೆಯಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ತಾಲೂಕು ಆಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಎಂ.ವಿ.ರೂಪ ಅವರು ದೇವರ ಉತ್ಸವ ಮೂರ್ತಿಗಳನ್ನು ಹೇಮಗಿರಿ ಬೆಟ್ಟಕ್ಕೆ ಸಾಂಪ್ರಧಾಯಿಕ ಪೂಜೆ ಸಲ್ಲಿಸಿ ತರುವಂತೆ ಮೌಖಿಕ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಬಂಡಿಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ಹಾಗೂ ಗ್ರಾಮದ ಮುಖಂಡರಾದ ರಾಮೇಗೌಡ, ದೇವರಸೇಗೌಡ, ಶೇಷಾದ್ರಿ ಶಿವಕುಮಾರ್ ಮತ್ತು ದೇವಾಲಯದ ಪ್ರಧಾನ ಅರ್ಚಕರಾದ ರಾಮಭಟ್ಟ ಅವರ ನೇತೃತ್ವದಲ್ಲಿ ಶ್ರೀ ಕಲ್ಯಾಣವೆಂಕಟರಮಣಸ್ವಾಮಿ ಹಾಗೂ ಶ್ರೀಲಕ್ಷ್ಮೀ, ಪದ್ಮಾವತಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಹೇಮಗಿರಿ ಬೆಟ್ಟಕ್ಕೆ ತರಲಾಯಿತು.

ಫೆಬ್ರವರಿ 8ರಂದು ಮಂಗಳವಾರ ಬೆಳಿಗ್ಗೆ 10.30ಕ್ಕೆ ಹೇಮಗಿರಿಯ ಬೆಟ್ಟದ ತಪ್ಪಲಿನಲ್ಲಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯವರ ಬ್ರಹ್ಮರಥೋತ್ಸವವು ನಡೆಯಲಿದ್ದು ಸಚಿವ ಡಾ.ನಾರಾಯಣಗೌಡ ದಂಪತಿಗಳು ಶ್ರೀರಥಕ್ಕೆ ಸಾಂಪ್ರಧಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾಢಳಿತವು ದನಗಳ ಜಾತ್ರೆಯನ್ನು ನಿಷೇಧಿಸಿ ಆದೇಶಿಸಿದ್ದ ಹಿನ್ನೆಲೆಯಲ್ಲಿ ಈ ಬಾಾರಿ ಜಾತ್ರೆಗೆ ಆಗಮಿಸಿದ್ದ ರಾಸುಗಳಿಗೆ ಸ್ಥಳೀಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ನೀಡುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಉಡುಗೊರೆಯನ್ನು ತಡೆಹಿಡಿಯಲಾಗಿದೆ. ಜಾತ್ರೆಯ ಸಂಪ್ರದಾಯಕ್ಕೆ ಧಕ್ಕೆಯಾಗಬಾರದೆಂಬ ಸದುದ್ಧೇಶದಿಂದ ಕೇವಲ ಸಾಂಕೇತಿಕವಾಗಿ ರಥೋತ್ಸವವನ್ನು ನಡೆಸಲಾಗುತ್ತಿದೆ. ಫೆಬ್ರವರಿ 13ರ ಭಾನುವಾರ ರಾತ್ರಿ 8.30ಕ್ಕೆ ಹೇಮಾವತಿ ನದಿಯಲ್ಲಿ ಶ್ರೀ ಕಲ್ಯಾಣವೆಂಕಟರಮಣಸ್ವಾಮಿಯವರ ಉತ್ಸವಮೂರ್ತಿಗಳೊಂದಿಗೆ ಸರ್ವಾಲಂಕೃತವಾದ ಕೃತಕ ತೆಪ್ಪದಲ್ಲಿ ವಿವಿಧ ಬಣ್ಣ-ಬಣ್ಣದ ವಿದ್ಯುದ್ಧೀಪಗಳು ಹಾಗೂ ಹೂವಿನಿಂದ ಅಲಂಕೃತವಾದ ತೆಪ್ಪದಲ್ಲಿ ಸ್ವಾಮಿಯ ವೈಭವದ ತೆಪ್ಪೋತ್ಸವವು ನಡೆಯಲಿದೆ.

ಹೇಮಗಿರಿ ಕ್ಷೇತ್ರವು ಅಪರೂಪದ ಪುಣ್ಯಕ್ಷೇತ್ರವಾಗಿದ್ದು ಬೆಟ್ಟ, ನದಿ ಸೇರಿದಂತೆ ಪ್ರಕೃತಿಯ ರಮ್ಯರಮಣೀಯ ತಾಣವನ್ನು ಒಳಗೊಂಡಿದ್ದರೂ ನಿರೀಕ್ಷಿತ ಅಭಿವೃದ್ಧಿಯನ್ನು ಸಾಧಿಸದಿರುವುದರಿಂದ ಭಕ್ತಾಧಿಗಳು ಹಾಗೂ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾಳು ಬಿದ್ದಿರುವ ಕಲ್ಯಾಣ ಮಂಟಪ, ಮುರಿದು ಬೀಳುತ್ತಿರುವ ಬೆಟ್ಟದ ಪಾದದ ಮುಖಮಂಟಪ, ಬೆಟ್ಟದ ಮೇಲ್ಬಾಗದಲ್ಲಿ ದೇವಾಲಯದ ಸುತ್ತಲೂ ಟೈಲ್ಸ್ ಅಳವಡಿಸಿ ಕಾಂಕ್ರೀಟ್ ಹಾಕದಿರುವುದರಿಂದ ಬೆಳೆದುನಿಂತಿರುವ ಮುಳ್ಳಿನ ಗಿಡಗಳು ಭಕ್ತರ ಕಾಲಿಗೆ ಚುಚ್ಚಿ ತೊಂದರೆಯನ್ನು ನೀಡುತ್ತಿವೆ. ಹೇಮಗಿರಿ ಬೆಟ್ಟಕ್ಕೆ ಶುದ್ಧ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳ ಕೊರತೆಯು ಇರುವುದರಿಂದ ತಾಲೂಕು ಆಡಳಿತವು ರಥೋತ್ಸವ ಹಾಗೂ ತೆಪ್ಪೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನಾದರೂ ಒದಗಿಸಿಕೊಡಬೇಕು ಎನ್ನುವುದು ಈ ಭಾಗದ ಗ್ರಾಮಗಳ ಜನತೆಯ ಒತ್ತಾಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು