News Karnataka Kannada
Saturday, April 27 2024
ಮಂಡ್ಯ

ಮೈಷುಗರ್: ಸರ್ಕಾರದ ವಿಳಂಬ ಧೋರಣೆಗೆ ಆಕ್ರೋಶ

Mysugar
Photo Credit :

ಮಂಡ್ಯ: ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸದೇ ಇರುವ ಸಕ್ಕರೆ ಕಾರ್ಖಾನೆ  ಸಾವಿನ ಅಂಚಿನಲ್ಲಿದೆ. ಸರ್ಕಾರ ಇದಕ್ಕೆ  ತಕ್ಷಣ ಚಿಕಿತ್ಸೆ ನೀಡಿ ಕಾರ್ಖಾನೆ ಉಳಿಸಿಕೊಳ್ಳುವ ಕೆಲಸ ಮಾಡದೇ ಸಂಪುಟ ಉಪಸಮಿತಿ ರಚಿಸುವ ತೀರ್ಮಾನ ಕೈಗೊಂಡಿರುವುದು ಮೂರ್ಖತನದ ಪರಮಾವಧಿ ಎಂದು ಹಿರಿಯ ಸಾಹಿತಿ ಕೆ.ಮಾಯಿಗೌಡ ಅಭಿಪ್ರಾಯಪಟ್ಟರು.

ಅವರು ಮೈಸೂರು ಬೆಂಗಳೂರು  ಹೆದ್ದಾರಿಯ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭವಾಗಬೇಕು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ  ವತಿಯಿಂದ ನಡೆಯುತ್ತಿರುವ 29 ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ರೈತರು ಕಳೆದ 29 ದಿನಗಳಿಂದ ನಡೆಸುತ್ತಿರುವ ಮುಷ್ಕರಕ್ಕೆ ಸ್ಪಂದಿಸಲು ಸರ್ಕಾರಕ್ಕೆ ಇನ್ನೆಷ್ಟು ದಿನ ಬೇಕು. ತಕ್ಷಣ ಕ್ರಮ ಕೈಗೊಳ್ಳದ ಸಚಿವ ಸಂಪುಟ ಉಪ ಸಮಿತಿ ರಚಿಸಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತದೆ.. ಕುವೆಂಪುರವರು ರೈತರನ್ನು ನೇಗಿಲಯೋಗಿ  ಎಂಬ ಪರಿಕಲ್ಪನೆ ನೀಡಿ  ಸಾಹಿತ್ಯಲೋಕದಲ್ಲಿ ಶ್ರೇಷ್ಠ ಸ್ಥಾನವನ್ನು ತಂದುಕೊಟ್ಟರು. ಸರ್ವಜ್ಞ ಕೂಡ ರೈತರ ರಾಟೆ ನಡೆಯದೆ ದೇಶದ ಆಟ ನಡೆಯದು ಎಂದು ಹೇಳಿದ್ದಾನೆ. ಈ ಪರಿಕಲ್ಪನೆಯನ್ನು ನಮ್ಮ ಆಡಳಿತಗಾರರು ಇನ್ನೂ ಅರ್ಥೈಸಿಕೊಂಡಿಲ್ಲ. ಇಂತಹ ಯೋಗಿಯನ್ನು ಜೋಳಿಗೆ ಹಿಡಿಯುವ ಪರಿಸ್ಥಿತಿಗೆ ಕೊಂಡೊಯ್ಯುತ್ತಿರುವುದು ವಿಷಾದಕರ ಎಂದರು.

ಹಿಂದೆ ಶಾಂತವೇರಿ ಗೋಪಾಲಗೌಡರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದಪ್ಪಚರ್ಮದ ಹಂದಿಗಳು ಎಂದು ಲೇವಡಿ ಮಾಡಿದ್ದರು. ಇಂದಿನ  ರಾಜಕಾರಣಿಗಳು ಅದೇ ವರ್ಗಕ್ಕೆ ಸೇರುತ್ತಾರೆ. ಕಾರ್ಖಾನೆ ವಿಷಯದಲ್ಲಿ ಅಂತಹ ದಪ್ಪಚರ್ಮದವರಾಗುವುದು ಬೇಡ. ಎಷ್ಟು ದಿನ ಅಂತ ಸರ್ಕಾರ ರೈತರ ಚಳುವಳಿಯನ್ನು ನಿರ್ಲಕ್ಷಿಸುತ್ತದೆ. ರೈತ ಇಲ್ಲ ಎಂದರೆ ನಾಡಿಲ್ಲ, ಆಡಳಿತವಿಲ್ಲ, ಬಡವರ ಹೊಟ್ಟೆ ತುಂಬಿಸಲು ಆಗುವುದಿಲ್ಲ.  ಎಲ್ಲದಕ್ಕೂ ಒಂದು ಕಾಲ ಮಿತಿ ಇದೆ. ರೈತರ ಶಕ್ತಿ ಮುಂದೆ ಏನೇನು ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಬೇಳೆ ಬೇಯುವುದಿಲ್ಲ. ಇಡೀ ರಾಜ್ಯದಲ್ಲಿ ಮಂಡ್ಯದಲ್ಲಿ ಕೈಗಾರಿಕೆ ಗಳಿಲ್ಲದೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಅಲ್ಲಿ ಇಲ್ಲಿ ಕೆಲ ಖಾಸಗಿಯವರು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.  ವ್ಯವಸಾಯ ಸಂಸ್ಕೃತಿ ಅಡಿಯಲ್ಲಿ ತೀರ್ಮಾನ ಮಾಡಿ  ಕಾರ್ಖಾನೆ ಪ್ರಾರಂಭಿಸಿದ ಮಹಾನುಭಾವರಾದ ನಾಲ್ವಡಿ ಮತ್ತು ಕೋಲ್ಮನ್  ಅವರ ತ್ಯಾಗವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಬೇಗ ರಚನಾತ್ಮಕ ತೀರ್ಮಾನ ತೆಗೆದುಕೊಳ್ಳಿ. ಇಷ್ಟೊಂದು ಅನಾದರಣೆ ಯಾಕೆ? ಮಂಡ್ಯದ ರೈತರೆಲ್ಲ ಶ್ರೀಮಂತರಲ್ಲ. ಅವರಿಗೆ ಹಣ ಆಕಾಶದಿಂದ ಉದುರುವುದಿಲ್ಲ. ಪರಿ ಶ್ರಮಜೀವಿಗಳಾಗಿದ್ದರೆ ಅವರ ಪರಿಶ್ರಮಕ್ಕೆ ಬೆಲೆ ನೀಡಿ ಎಂದು ತಿಳಿಸಿದರು. ಅನಿಷ್ಟ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರನ್ನು ಬಗ್ಗುಬಡಿಯುವ ಕೆಲಸ ಮಾಡುತ್ತಿವೆ ಎಂದು ಕಿಡಿ ಕಾರಿದರು.

ಧರಣಿ ನಿರತರನ್ನುದ್ದೇಶಿಸಿ ಮೂಲ ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಮಲಿಂಗೇಗೌಡ, ನಿವೃತ್ತ ಪ್ರಾಧ್ಯಾಪಕ ಬಿ ಶಂಕರಗೌಡ, ಜಿಲ್ಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಬೋರಾಪುರ ಶಂಕರೇಗೌಡ ಮಾತನಾಡಿದರು.

ಧರಣಿ ಸತ್ಯಾಗ್ರಹದಲ್ಲಿ ತಗ್ಗಹಳ್ಳಿ ವ್ಯಾಪ್ತಿಯ ಸಂತೆಕಸಲಗೆರೆ, ಹೆಮ್ಮಿಗೆ, ಮಲ್ಲಿಗೆರೆ, ಸಬ್ಬನಹಳ್ಳಿ, ಕಬ್ಬನಹಳ್ಳಿ ,ಪುರ ಗ್ರಾಮಸ್ಥರು ಹಾಗೂ ಕುರಿಕೆಂಪನದೊಡ್ಡಿ,ದೇವಿರಳ್ಳಿ, ದೊಡ್ಡರಸಿನಕೆರೆ ಗ್ರಾಮಸ್ಥರು, ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು, ರೈತ  ಹಿತರಕ್ಷಣಾ ಸಮಿತಿಯ ಸುನಂದ ಜಯರಾಮ್,  ಕೆ.ಬೋರಯ್ಯ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಟಿ.ಯಶ್ವಂತ್,ಇಂಡುವಾಳು ಚಂದ್ರಶೇಖರ್, ಸಿಐಟಿಯುನ ಸಿ. ಕುಮಾರಿ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಕೀಲಾರ ಕೃಷ್ಣೇಗೌಡ, ಗಾಯಕರಾದ ಹುರುಗಲವಾಡಿ ರಾಮಯ್ಯ, ಮಂಜುಳಾ, ಕೀಲಾರ ಗ್ರಾ.ಪಂಚಾಯತ್ ಮಾಜಿ ಸದಸ್ಯೆ ಭಾರತಿ, ತಮಣ್ಣ ಮುಂತಾದವರು  ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು