News Karnataka Kannada
Sunday, May 12 2024
ಮಂಡ್ಯ

ಜುಲೈನಲ್ಲಿ ಮೈ ಶುಗರ್ ಪುನರಾರಂಭ : ಸಚಿವ ಕೆ. ಗೋಪಾಲಯ್ಯ 

Untitled 169
Photo Credit : News Kannada

ಮಂಡ್ಯ:  ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಜುಲೈ 15 ರಿಂದ 25ರೊಳಗೆ ಪುನರಾರಂಭ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ತಿಳಿಸಿದರು.

ಅವರು ಗುರುವಾರ ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮಾತನಾಡಿ, ಸರ್ಕಾರದಿಂದ ಅನುಮತಿ ಪಡೆದು ಮೇ ೨ ರಿಂದ ಪುನಶ್ಚೇತನ ಕೆಲಸಗಳನ್ನು ಪ್ರಾರಂಭ ಮಾಡಲು ಎರಡು ಸಂಸ್ಥೆಯವರಿಗೆ ಕಾರ್ಯಾದೇಶ ನೀಡಲಾಗುವುದು. ಸಂಸ್ಥೆಯವರಿಗೆ ಕೆಲಸಗಳನ್ನು ಪೂರ್ಣಗೊಳಿಸಲು  60ರಿಂದ 70 ದಿನಗಳ  ಕಾಲವಕಾಶವನ್ನು  ನೀಡಲಾಗಿದೆ ಎಂದರು.

ಪುನಶ್ಚೇತನ ಕೆಲಸಕ್ಕಾಗಿ 200 ರಿಂದ 250  ಕೆಲಸಗಾರರು ಆಗಮಿಸಲಿದ್ದು, ಅವರ ವಾಸ್ತವ್ಯಕ್ಕೆ ಬೇಕಿರುವ ಕ್ವಾಟ್ರಸ್‌ನ ದುರಸ್ತಿ ಕೆಲಸಗಳನ್ನು ಪ್ರಾರಂಭಿಸುವಂತೆ ತಿಳಿಸಲಾಗಿದೆ. ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಸಮಯ ವ್ಯರ್ಥವಾಗದಂತೆ ಕೆಲಸವು 24×7 ನಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಕಾರ್ಖಾನೆಯ ಪುನಶ್ಚೇತನಕ್ಕಾಗಿ ತಾಂತ್ರಿಕ ಸಮಿತಿ ಹಾಗೂ ಆರ್ಥಿಕ ಸಮಿತಿಯನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮೈಷಗರ್ ಕಂಪನಿ ಬಂದ್ ಆಗದಂತೆ ನೋಡಿಕೊಳ್ಳಬೇಕು. ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಆಡಳಿತ, ಹಣಕಾಸು ಹಾಗೂ ತಾಂತ್ರಿಕ  ವರದಿಯನ್ನು ಪಡೆದು ಕಾರ್ಖಾನೆಯನ್ನು  ಪುನರಾರಂಭಗೊಳಿಸಲಾಗುತ್ತಿದೆ ಎಂದರು.

ರೈತರಿಂದ ಕಬ್ಬು ಖರೀದಿಸುವ ಕೆಲಸವು ಸಹ ಇದರ ಜೊತೆಯಲ್ಲೇ ನಡೆಯಬೇಕಿದ್ದು, ಹೋಬಳಿ ಮಟ್ಟದಲ್ಲಿ ಕಚೇರಿಗಳನ್ನು ತೆರೆದು, ರೈತರಿಗೆ ಮನವರಿಕೆ ಮಾಡಿ ಹೆಚ್ಚಿನ ಪ್ರಚಾರ ನೀಡಿ ರೈತರಿಂದ  6 ರಿಂದ 7 ತಿಂಗಳಿಗೆ ಬೇಕಿರುವ ಕಬ್ಬು ಖರೀದಿಗೆ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ರೇಷ್ಮೆ, ಯುವ ಸಬಲೀಕರಣ  ಮತ್ತು ಕ್ರೀಡಾ ಸಚಿವರಾದ ಡಾ. ನಾರಾಯಣಗೌಡ ಅವರು ಮಾತನಾಡಿ ಸಕ್ಕರೆ  ಕಾರ್ಖಾನೆಯಲ್ಲಿ ದುರಸ್ತಿ ಕೆಲಸಗಳು ಪ್ರಾರಂಭವಾಗಲಿದ್ದು, ಕಾರ್ಖಾನೆಯಲ್ಲಿ ವಸ್ತುಗಳ ಸಾಗಾಣಿಕೆ ಕೆಲಸಗಳು ನಡೆಯುತ್ತಿರುತ್ತದೆ. ಪೊಲೀಸ್ ಇಲಾಖೆ ವತಿಯಿಂದ ಕಾರ್ಖಾನೆಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ಕೆಲಸ ನಡೆಯುವ ಸ್ಥಳ ಹಾಗೂ ಕಾರ್ಖಾನೆಯ ಗೇಟ್‌ಗಳ ಬಳಿ ಸಿ.ಸಿ.ಟಿವಿ ಅಳವಡಿಸುವಂತೆ ತಿಳಿಸಿದರು.

ಕಾರ್ಖಾನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇದ್ದಲ್ಲಿ  ಗಮನಕ್ಕೆ ತನ್ನಿ ಅದನ್ನು ತೀವ್ರಗತಿಯಲ್ಲಿ  ಬಗೆಹರಿಸುವ ಕೆಲಸವನ್ನು  ಮಾಡುತ್ತೇನೆ  ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ಥೀಕರಣಗೊಳಿಸಲು ತುರ್ತು ಅಗತ್ಯವಿರುವ ಹಣವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲು ಕ್ರಮವಹಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಜುಲೈ ಅಂತ್ಯದೊಳಗೆ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಬೇಕು ಎಂದರು.

ಮೈ ಶುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪಟೀಲ್  ಅಪ್ಪ ಸಾಹೇಬ್ ಅವರು ಕಾರ್ಖಾನೆಯ ಪುನಶ್ಚೇತನ ಕೆಲಸಗಳ ಬಗ್ಗೆ ಸಚಿವರಿಗೆ ವಿವರಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ , ಉಪ ವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದ  ಮೂರ್ತಿ, ಮೈ ಶುಗರ್ ಅಧ್ಯಕ್ಷ ಶಿವಲಿಂಗೆಗೌಡ, ಮುಖಂಡರಾದ ಇಂದ್ರೇಶ್, ಡಾ. ಸಿದ್ಧರಾಮಯ್ಯ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು