News Karnataka Kannada
Monday, April 29 2024
ಮಡಿಕೇರಿ

ಮಡಿಕೇರಿ: ಇಂದು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ

Theerthodbhava at Brahmakundike in Talacauvery today
Photo Credit : By Author

ಮಡಿಕೇರಿ: ವರ್ಷಕ್ಕೊಮ್ಮೆ ಸೂರ್ಯ ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕಿಬರುವಂತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಾಳೆ. ಈ ಬಾರಿ ಅಕ್ಟೋಬರ್ 17ರಂದು ಸಂಜೆ 7.21 ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ.

ಕಾವೇರಿಯ ಉಗಮಸ್ಥಾನ ತಲಕಾವೇರಿಯು ಮಡಿಕೇರಿಯಿಂದ ನಲವತ್ತೆರಡು ಕಿ.ಮೀ. ದೂರದ ಬ್ರಹ್ಮಗಿರಿಯ ಬೆಟ್ಟಶ್ರೇಣಿಯಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ. ಮನಮೋಹಕ ನಿಸರ್ಗ ಸಿರಿಯನ್ನು ಹೊಂದಿರುವ ತಲಕಾವೇರಿ ಪವಿತ್ರಕ್ಷೇತ್ರವಾಗಿಯೂ, ಕೊಡಗಿನ ಪ್ರಮುಖ ಪ್ರವಾಸಿ ತಾಣವಾಗಿಯೂ ಗಮನಸೆಳೆದಿದೆ. ವರ್ಷಕ್ಕೊಮ್ಮೆ ಸೂರ‍್ಯನು ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕಿಬರುವಂತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಾಳೆ. ಇದೇ ಕಾವೇರಿ ತೀರ್ಥೋದ್ಭವ. ಜಿಲ್ಲೆ, ರಾಜ್ಯ ಮಾತ್ರವಲ್ಲದೆ, ದೇಶದ ವಿವಿಧ ಕಡೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಈ ದಿವ್ಯ ಕ್ಷಣಕ್ಕೆ ಸಾಕ್ಷಿಯಾಗುತ್ತಾರಲ್ಲದೆ, ಕಾವೇರಿ ತೀರ್ಥದಲ್ಲಿ ಸ್ನಾನಮಾಡಿ ಪುನೀತರಾಗುತ್ತಾರೆ.

ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381ಕಿ.ಮೀ. ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದರೊಂದಿಗೆ ತಾನು ಹರಿದಲೆಲ್ಲಾ ಪವಿತ್ರಕ್ಷೇತ್ರಗಳನ್ನು ಸೃಷ್ಟಿಸಿ, ಲಕ್ಷಾಂತರ ಮಂದಿಯ ಪಾಲಿಗೆ ಅನ್ನದಾತೆಯಾಗಿದ್ದಾಳೆ.

ಕಾವೇರಿ ಉಗಮದ ಬಗ್ಗೆ ಹೇಳುವುದಾದರೆ ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ ಕವೇರನೆಂಬ ಮುನಿ ವಾಸವಾಗಿದ್ದನು. ಅವನಿಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆವುಂಟಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡತೊಡಗಿದನು. ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ದತ್ತು ಮಗಳಾಗಿ ನೀಡಿದನು. ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು. ಹೀಗೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು.

ಒಂದು ದಿನ ಅಗಸ್ತ್ಯ ಮುನಿಗಳು ಕವೇರನ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕವೇರ ಮುನಿಗಳು ಒಪ್ಪಿ ತನ್ನ ಮಾನಸ ಪುತ್ರಿ ಕಾವೇರಿಯನ್ನು ವಿವಾಹ ಮಾಡಿಕೊಡಲು ಮುಂದಾಗುತ್ತಾರೆ. ಆದರೆ ವಿವಾಹವಾಗುವ ಬಯಕೆಯಿಲ್ಲದ ಕಾವೇರಿ ನನಗೆ ಜನಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು ಒಂದು ವೇಳೆ ನನ್ನನ್ನು ನೀವು ಉಪೇಕ್ಷಿಸಿ ಎಲ್ಲೂ ಹೋಗಬಾರದು ಹಾಗೊಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಹೇಳುತ್ತಾಳೆ. ಕಾವೇರಿಯ ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನು ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾರೆ.

ಕಾವೇರಿಗೆ ಕೊಟ್ಟ ಮಾತಿನಂತೆ ಅಗಸ್ತ್ಯ ಮುನಿಗಳು ತಮ್ಮ ಆಶ್ರಮದಲ್ಲಿ ಕಾವೇರಿಯೊಂದಿಗೆ ಆನಂದದಿಂದ ದಿನ ಕಳೆಯುತ್ತಿರುತ್ತಾರೆ. ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದೆಂದುಕೊಳ್ಳುತ್ತಾರೆ. ಆದರೆ ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ. ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದನ್ನು ಕಂಡು ಆಕೆಗೆ ಪತಿಯ ಮೇಲೆ ಕೋಪಬರುತ್ತದೆ ಅಲ್ಲದೆ ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯವೆಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರುತ್ತಾಳೆ. ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿಯುತ್ತಾಳೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ಭಕ್ತರಿಗೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾಳೆ ಎಂಬುದು ನಂಬಿಕೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು