News Karnataka Kannada
Tuesday, May 07 2024
ಮಡಿಕೇರಿ

ಮಡಿಕೇರಿ: ರಾಜ್ಯ ಹೆದ್ದಾರಿಗಳ ಕಟ್ಟಡ ರೇಖೆ ಪರಿಷ್ಕರಿಸಿ ಸುತ್ತೋಲೆ ಹೊರಡಿಸಿದ ಲೋಕೋಪಯೋಗಿ ಇಲಾಖೆ

Madikeri: The Public Works Department (PWD) has issued a circular revising the building line of state highways.
Photo Credit : By Author

ಮಡಿಕೇರಿ: ರಾಜ್ಯ ಲೋಕೋಪಯೋಗಿ ಇಲಾಖೆಯು ಜೂನ್ 30 ರಂದು ರಾಜ್ಯ ಹೆದ್ದಾರಿಗಳ ಗಡಿಯಿಂದ ಕಟ್ಟಡ ನಿರ್ಮಿಸುವಾಗ ಬಿಡಬೇಕಾದ ಅಂತರಕ್ಕೆ ಸಂಬಂಧಪಟ್ಟಂತೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಲೋಕೋಪಯೋಗಿ ಇಲಾಖೆಯ ಉಪ ಕಾರ್ಯದರ್ಶಿ ಕೆ ಸಿ ಮೀನ ಕುಮಾರಿ ಅವರು ಹೊರಡಿಸಿರುವ ಆದೇಶ ಸಂಖ್ಯೆ ಲೋಇ 466; ಸಿಆರ್ಎಂ 2022 ಪ್ರಕಾರ ರಾಜ್ಯ ಹೆದ್ದಾರಿಯ ಗಡಿಯಿಂದ ಮಹಾನಗರಪಾಲಿಕೆ, ನಗರ ಸಭೆ, ಪುರ ಸಭೆ ಮತ್ತು ಪಂಚಾಯ್ತಿ ವ್ಯಾಪ್ತಿಯಲ್ಲಿ 6 ಮೀಟರ್ ಗಳಷ್ಟು ಮತ್ತು ಮಹಾನಗರಪಾಲಿಕೆ ವ್ಯಾಪ್ತಿಯ ಹೊರಗೆ 15 ಕಿಲೋಮೀಟರ್ ನಂತರ 12 ಮೀಟರ್ ಗಳಷ್ಟು ಸ್ಥಳವನ್ನು ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕೆಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ರಾಜ್ಯ ಅಬಕಾರಿ ಇಲಾಖೆಯು ಸ್ಪಷ್ಟನೆ ಕೋರಿ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿತ್ತು. ಪತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಕಟ್ಟಡ ರೇಖೆ ಗಳಲ್ಲಿ ವ್ಯತ್ಯಾಸವಿದ್ದು ಇದರಿಂದಾಗಿ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಸಿಎಲ್ 7 ಮದ್ಯ ಮಾರಾಟ ಸ್ಥಳಗಳಿಗೆ ಪರವಾನಗಿ ನೀಡುವಾಗ ಗೊಂದಲವಾಗುತ್ತಿದೆ ಎಂದು ಇಲಾಖೆ ತಿಳಿಸಿತ್ತು. ಇದಕ್ಕೆ ಉತ್ತರವಾಗಿ ಕಟ್ಟಡ ರೇಖೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ಲೋಕೋಪಯೋಗಿ ಇಲಾಖೆಯ 9-10-1998 ಮತ್ತು 16-11-2002 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮದ್ಯ ಭಾಗದಿಂದ 40 ಮೀಟರ್ ಗಳ ವರೆಗೆ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ನೀಡಬಾರದು. ಈ 40 ಮೀಟರ್ ಅಂತರವನ್ನು ರಾಜ್ಯ ಹೈ ಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ ನಿಗದಿ ಮಾಡಲಾಗಿತ್ತು. ಅಲ್ಲದೆ ಇಷ್ಟು ಅಂತರವನ್ನು ಬಿಟ್ಟು ಕೂಡ ನಗರಪಾಲಿಕೆ , ಪುರಸಭೆಯ ವ್ಯಾಪ್ತಿಯಲ್ಲಿ ಮತ್ತೆ 12 ಮೀಟರ್ ಸ್ಥಳವನ್ನು ಬಿಟ್ಟು ಕಟ್ಟಡವನ್ನ
ನಿರ್ಮಿಸಬೇಕಿತ್ತು. ನೂತನ ಸುತ್ತೋಲೆಯಿಂದ ಈ ಅಂತರ 12 ಮೀಟರ್ ಗಳಿಂದ 6 ಮೀಟರ್ ಗಳಿಗೆ ಇಳಿಕೆಯಾಗಿದೆ. ಆದರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಅಂತರ 15 ಕಿಲೋಮೀಟರ್ಗಳ ವರೆಗೆ 15 ಮೀಟರ್ ಗಳ ವರೆಗೆ ಮುಂದುವರಿಕೆಯಾಗಿದೆ.

ಮದ್ಯ ಭಾಗದಿಂದ 60 ಅಡಿ ಬಿಟ್ಟು ಕಟ್ಟಡ ಈ ಕುರಿತು ಪ್ರತಿಕ್ರಿಯಿಸಿದ ಮಡಿಕೇರಿ ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್ ಒಬ್ಬರು ಸದ್ಯ ಕೊಡಗಿನಲ್ಲಿ ಹೆದ್ದಾರಿಗಳ ಮಧ್ಯ ಭಾಗದಿಂದ 60 ಅಡಿಗಳಷ್ಟು ಅಂತರ ಬಿಟ್ಟು ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು. ಬಹುತೇಕ ಹೆದ್ದಾರಿಗಳ ಅಕ್ಕ ಪಕ್ಕದ ಜಾಗವು ಖಾಸಗಿ ಯವರದ್ದಾಗಿದ್ದು ರಾಜ್ಯ ಸರ್ಕಾರಗಳು ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಭೂ ಸ್ವಾಧೀನದ ಮೂಲಕ ಭೂಮಿಯನ್ನು ಪಡೆದುಕೊಂಡು ಅದಕ್ಕೆ ಮಾರುಕಟ್ಟೆ ದರದನ್ವಯ ಪರಿಹಾರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ ಅವರು
ಈಗಾಗಲೇ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಖಾಸಗೀ ಜಾಗಗಳಿಗೆ ಪರಿಹಾರ ನೀಡಿ ಇದೇ ರೀತಿ ಭೂಸ್ವಾಧೀನ ಪಡಿಸಿಕೊಂಡಿರುವುದನ್ನು ಉಲ್ಲೇಖಿಸಿದರು.

ಹೆದ್ದಾರಿಗಳ ಅಗಲವನ್ನು ಹೈ ಕೋರ್ಟ್ ಆದೇಶದ ಮೇರೆಗೆ ನಿಗದಿಪಡಿಸಲಾಗಿದ್ದು ಸರ್ಕಾರವು ರಸ್ತೆಯನ್ನು ನಿರ್ಮಾಣ ಮಾಡದಿದ್ದರೂ ಮುಂದಿನ 100-200 ವರ್ಷಗಳ ನಂತರದ ವಾಹನ ದಟ್ಟಣೆ ಹಿನ್ನೆಲೆಯಲ್ಲಿ 40 ಮೀಟರ್ ಗಳಷ್ಟು ಅಂತರದ ವರೆಗೆ ಕಟ್ಟಡ ನಿರ್ಮಾಣ ಮಾಡಲು ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಹೆದ್ದಾರಿಯ ವಿಸ್ತರಣೆಯ ಸಂದರ್ಭಗಳಲ್ಲಿ ಸರ್ಕಾರವು ನೀಡುವ ಭೂ ಪರಿಹಾರ ಗಣನೀಯವಾಗಿ ಕಡಿಮೆ ಆಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.

250 ಅಡಿ ಅಗಲ ರಸ್ತೆ ದೇಶದಲ್ಲೆ ಎಲ್ಲೂ ಇಲ್ಲ ಆದರೆ ಕಟು ಸತ್ಯ ಏನೆಂದರೆ ದೇಶದ ಎಲ್ಲಿಯೂ ಕೂಡ ರಾಷ್ಟ್ರೀಯ ಹೆದ್ದಾರಿಯು 250 ಅಡಿ ಅಗಲ ಮತ್ತು ಕಟ್ಟಡ ಗಡಿ ರೇಖೆ ಅಂತರವಾದ 20 ಅಡಿಗಳನ್ನು ಬಿಟ್ಟು ಕಟ್ಟಡ ಕಟ್ಟಲಾಗಿಲ್ಲ. ಆದರೆ ಸರ್ಕಾರದ ಈ ಆದೇಶದಿಂದ ಹೆದ್ದಾರಿಗಳ ಪಕ್ಕದ ನಿವಾಸಿಗಳಿಗೆ ಕಟ್ಟಡ ನಿರ್ಮಿಸಲು ಅನುಮತಿ ನೀಡದೆ ಆಸ್ತಿಯ ಹಕ್ಕನ್ನು ಕಿತ್ತುಕೊಂಡಂತೆ ಆಗಿದೆ. ಈ ಆಸ್ತಿಗಳನ್ನು ನೂರಾರು ವರ್ಷಗಳಿಂದ ಸರ್ಕಾರಕ್ಕೆ ತೆರಿಗೆಯನ್ನೂ ಪಾವತಿಸಿ ಅನುಭವಿಸಿಕೊಂಡು ಬರುತಿದ್ದು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೋಟ್ಯಾಂತರ ರೂಪಾಯಿ ಆಸ್ತಿಗಳ ಮಾಲೀಕರು ತತ್ಕಾಲಿಕವಾಗಿ ನಿರಾಶ್ರಿತರೇ ಆಗಬೇಕಾಗುತ್ತದೆ.

2001 ರಲ್ಲೇ ಹೆದ್ದಾರಿ ಪಕ್ಕ ಗುರುತು
ಲೋಕೋಪಯೋಗಿ ಇಲಾಖೆಯು 2001 ನೇ ಇಸವಿಯಲ್ಲಿಯೇ ಕೊಡಗಿನಲ್ಲಿ ಹಾದು ಹೋಗುವ ಹೆದ್ದಾರಿಗಳ ಅಕ್ಕ ಪಕ್ಕದ ಕಟ್ಟಡಗಳ ಮೇಲೆ ಲೋಕೋಪಯೋಗಿ ಇಲಾಖೆಗೆ ಸೇರಿದ ಹೆದ್ದಾರಿಯ ಸರಹದ್ದನ್ನು ಗುರುತು ಮಾಡಲಾಗಿದೆ. ಇಲಾಖೆಯ ರಸ್ತೆ ನಕಾಶೆ ಪ್ರಕಾರ ಈ ಗುರುತು ಮಾಡಲಾಗಿದ್ದು ಗುರುತು ಮಾಡಲ್ಪಟ್ಟ ಸ್ಥಳದವರೆಗೆ ಹೆದ್ದಾರಿ ಅತಿಕ್ರಮಣವಾಗಿದೆ ಎಂದು
ಪರಿಗಣಿಸಲಾಗಿದೆ.

ಲೋಕೋಪಯೋಗಿ ಇಲಾಖೆಯು ಸ್ಥಳಿಯ ಸಂಸ್ಥೆಗಳಾದ ನಗರಪಾಲಿಕೆ , ನಗರಸಭೆ, ಪುರಸಭೆ ಮತ್ತು ಪಂಚಾಯ್ತಿ ಗಳಲ್ಲಿ ಲಭ್ಯವಿರುವ ನಕಾಶೆ ಅಥವಾ ಭೂ ಮಾಲೀಕತ್ವದ ದಾಖಲೆಗಳನ್ನು ಪರಿಗಣಿಸುವುದಿಲ್ಲ. ಏಕೆಂದರೆ ಈ ಹಿಂದೆ ನ್ಯಾಯಾಯಲಗಳಲ್ಲಿ ನಡೆದ ವಿಚಾರಣೆಗಳಲ್ಲಿ ಇಂತಹ ಒತ್ತುವರಿ ಪ್ರಕರಣಗಳಲ್ಲಿ ರಸ್ತೆಗೆ ಸೇರಿದ ಸ್ಥಳಕ್ಕೂ ಮಾಲೀಕತ್ವ ನೀಡಿರುವುದು ಸಾಬೀತಾಗಿತ್ತು. ಆದರೆ ಕಂದಾಯ ಇಲಾಖೆಯ ದಾಖಲಾತಿಗಳನ್ನು ಪರಿಗಣಿಸುತ್ತದೆ. ಗುರುತು ಮಾಡಲ್ಪಟ್ಟ ಸ್ಥಳಕ್ಕಿಂತ ಹೆಚ್ಚು ಸ್ಥಳವು ರಸ್ತೆ ನಿರ್ಮಾಣಕ್ಕೆ ಬೇಕಾದಾಗ ಮಾರುಕಟ್ಟೆ ದರದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುತ್ತದೆ.

ವಾಹನ ದಟ್ಟಣೆ ಪರಿಗಣಿಸಿ ವಿಸ್ತರಣೆ ಲೋಕೋಪಯೋಗಿ ಇಲಾಖೆಯು ಹೆದ್ದಾರಿ ಗಡಿಯು ಮದ್ಯ ಭಾಗದಿಂದ 40 ಮೀಟರ್ ಎಂದು ನಿಗದಿಪಡಿಸಿದ್ದರೂ ಕೂಡ ಹೆದ್ದಾರಿಗಳ ಅಗಲೀಕರಣ ಮಾಡುವುದು ಆಯಾ ರಸ್ತೆಗಳ ವಾಹನ ದಟ್ಟಣೆಯನ್ನು ಅವಲಂಬಿಸಿರುತ್ತದೆ. ದಟ್ಟಣೆ ಹೆಚ್ಚಾಗಿ ವಾಹನ ಸಂಚಾರ ನಿಧಾನಗತಿ ಆದಾಗ ವಿಸ್ತರಣೆ ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕಾಗಿ ಇಲಾಖೆಯು ಪ್ರತೀ ಮೂರು ವರ್ಷಗಳಿಗೊಮ್ಮೆ ಪ್ರತೀ ಹೆದ್ದಾರಿಯಲ್ಲೂ ವಾಹನ ಓಡಾಟ ಸಮೀಕ್ಷೆ ನಡೆಸುತ್ತದೆ. ವಾಹನ
ದಟ್ಟಣೆ ಇಲ್ಲದೆ ಅಗಲೀಕರಣ ಮಾಡಿದರೆ ರಸ್ತೆಗಳ ನಿರ್ಮಾಣಕ್ಕೆ ಕೋಟಿ ಗಟ್ಟಲೆ ರೂಪಾಯಿ ವೆಚ್ಚವಾಗುವುದರ ಜತೆಗೇ ನಿರ್ವಹಣೆಗೂ ಅಷ್ಟೇ ವೆಚ್ಚ ತಗುಲಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಣೆಗೆ ಸರ್ಕಾರ ಮುಂದಾಗುವುದಿಲ್ಲ. ಜತೆಗೆ ಇದೀಗ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ಬೂಟ್ (build-own-operate-transfer) ಮೂಲಕ ಟೋಲ್ ರಸ್ತೆಗಳನ್ನಾಗಿ ಮಾಡುವುದರಿಂದ ದಟ್ಟಣೆ ಇಲ್ಲದ ರಸ್ತೆಗಳ ನಿರ್ಮಾಣಕ್ಕೆ ಯಾವುದೇ ಕಂಪೆನಿಯೂ ಟೆಂಡರ್ ಪಡೆಯಲು ಮುಂದೆ ಬರುವುದಿಲ್ಲ.

ದಶಪಥ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣದಲ್ಲೂ ಪರಿಹಾರ
ಈಗಾಗಲೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾರ್ಯವು 9350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭರದಿಂದ ಸಾಗಿದ್ದು ದಸರಾ ವೇಳೆಗೆ ಉದ್ಘಾಟನೆ ಆಗಲಿದೆ.

ಹಾಲಿ ಬೆಂಗಳೂರು –ಮೈಸೂರು ರಸ್ತೆಯ ಅಪರಿಮಿತ ವಾಹನ ದಟ್ಟಣೆ ಕಡಿಮೆ ಮಾಡಲು 118 ಕಿಮೀ ಉದ್ದದ ಈ ದಶಪಥ ಹೆದ್ದಾರಿ ನಿರ್ಮಾಣ ಮಾಡಲಾಗುತಿದ್ದು ಇದನ್ನು ಹುಬ್ಬಳ್ಳಿ ಮೂಲದ ದಿಲೀಪ್ ಬಿಲ್ಡ್‌ ಕಾನ್‌ ಕಂಪೆನಿ ನಿರ್ಮಿಸುತ್ತಿದೆ.

ನಿರ್ಮಾಣದ ನಂತರ ಈ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸಲು ಕಿಲೋಮೀಟರ್ ಗೆ 1.5 ರಿಂದ 2 ರೂಪಾಯಿಗಳವರೆಗೆ ಟೋಲ್ ನೀಡಬೇಕಾಗುತ್ತದೆ. ಈ ರಸ್ತೆಗಾಗಿ ಜಮೀನು ನೀಡಿದವರಿಗೆಲ್ಲರಿಗೂ ಮತ್ತು ಕಟ್ಟಡ ಕಳೆದುಕೊಂಡವರಿಗೆ ಪ್ರಸ್ತುತ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ಪರಿಹಾರ ನೀಡಲಾಗಿದೆ.

ಶ್ರೀರಂಗಪಟ್ಟಣ- ಕುಶಾಲನಗರ ನೂತನ ಹೆದ್ದಾರಿ
ಈ ನಡುವೆ ಶ್ರೀರಂಗಪಟ್ಟಣ ಸಮೀಪ ದಶಪಥ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ 6 ಪಥಗಳ 3883 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಹೆದ್ದಾರಿಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ಉದ್ದೇಶಿತ ಹೆದ್ದಾರಿಯು ಕುಶಾಲನಗರ- ಮೈಸೂರಿನ ಹಾಲಿ ಹೆದ್ದಾರಿಯ ವಾಹನದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು ಪ್ರಸ್ತುತ ಮಡಿಕೇರಿ–ಮೈಸೂರು ಪ್ರಯಾಣದ ಅವಧಿ ಮೂರುವರೆ ಘಂಟೆಗಳಾಗಿದ್ದು ನೂತನ ಹೆದ್ದಾರಿಯು ಪೂರ್ಣಗೊಂಡರೆ ಪ್ರಯಾಣದ ಅವಧಿ 90 ನಿಮಿಷಗಳಿಗೆ ಇಳಿಯಲಿದೆ.

ಈ ಯೋಜನೆಗೆ ಸಾವಿರ ಎಕರೆಗಳಷ್ಟು ಭೂಮಿ ಅವಶ್ಯಕತೆ ಇದ್ದು ಇದು ಕುಶಾಲನಗರ ಹೊರವಲಯದ ಬಸವನಳ್ಳಿ ವರೆಗೆ ಸಂಪರ್ಕ ಕಲ್ಪಿಸಲಿದೆ. ಭೂಮಿ ಕಳೆದುಕೊಂಡವರಿಗೆ ದುಪ್ಪಟ್ಟು ದರ ಉದ್ದೇಶಿತ ಶ್ರೀರಂಗಪಟ್ಟಣ- ಬಸವನಳ್ಳಿ ವರೆಗಿನ 6 ಪಥಗಳ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲು 1150 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಈ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಏ ದೇವರಾಜ್ ಅವರು ಈ ಹೆದ್ದಾರಿಯ ಸರ್ವೆ
ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಮಾಡಲಾಗಿದ್ದು ಈಗ ಭೂಮಿ ಕಳೆದುಕೊಳ್ಳುವ ಶ್ರೀರಂಗಪಟ್ಟಣ ಮತ್ತು ಮೈಸೂರು ತಾಲ್ಲೂಕುಗಳ ಭೂಮಾಲೀಕರಿಗೆ ಜಮೀನು ಅಥವಾ ಕಟ್ಟಡದ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ದರವನ್ನು ಪರಿಹಾರವಾಗಿ ನೀಡಲಾಗುತ್ತಿದೆ ಎಂದರು.

ಹುಣಸೂರು ,ಪಿರಿಯಾಪಟ್ಟಣ ಮತ್ತು ಕುಶಾಲನಗರ ತಾಲ್ಲೂಕುಗಳ ಭೂಮಾಲೀಕರಿಗೆ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಪರಿಹಾರ ನೀಡುವಾಗ ಆಯಾ ತಾಲ್ಲೂಕುಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದ
ಮೂರು ವರ್ಷಗಳಲ್ಲಿ ನೋಂದಣಿಯಾದ ಹೆಚ್ಚು ಮೌಲ್ಯದ 100 ಕ್ರಯಪತ್ರಗಳ ಆಧಾರದಲ್ಲಿ ದರ ನಿಗದಿ ಮಾಡುವುದಲ್ಲದೆ ಇದಕ್ಕೆ ಮಾರುಕಟ್ಟೆ ಮೌಲ್ಯವನ್ನೂ ಸೇರಿಸಲಾಗುತ್ತದೆ ಎಂದು ದೇವರಾಜ್ ತಿಳಿಸಿದರು.

ನಗರಪಾಲಿಕೆ , ಪುರಸಭೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು , ವ್ಯಾಪ್ಯಿಯ ಹೊರಗೆ 5 ಕಿಲೋಮೀಟರ್ ಗಳವರೆಗೆ ಮಾರುಕಟ್ಟೆ ದರದ ಮೂರು ಪಟ್ಟು ಮತ್ತು 5 ಕಿಲೋಮೀಟರ್ ಹೊರಗೆ ಭೂಮಿ ಕಳೆದುಕೊಳ್ಳುವವರಿಗೆ ಮೌಲ್ಯದ
ನಾಲ್ಕು ಪಟ್ಟು ಪರಿಹಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

2011 ರಲ್ಲಿ ಸೋಮವಾರಪೇಟೆಯಲ್ಲಿ ತಹಸೀಲ್ದಾರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದ ದೇವರಾಜ್ ಅವರು ಹೆದ್ದಾರಿಯ ನಿರ್ಮಾಣದಲ್ಲಿ ಹೆಚ್ಚಿನ ಅಸ್ಥೆ ವಹಿಸುತಿದ್ದಾರೆ.

ಭೂಸ್ವಾಧೀನ ಪರಿಹಾರಕ್ಕೆ 2013 ರ ಕಾಯ್ದೆ

ಸಾರ್ವಜನಿಕ ಉದ್ದೇಶಕ್ಕೆ ಭೂಸ್ವಾಧೀನ ಪಡಿಸಿಕೊಳ್ಳುವಾಗ ಸರ್ಕಾರದ ವಿವಿಧ ಸಂಸ್ಥೆಗಳು ತಮ್ಮದೇ ಆದ ಮಾನದಂಡದ ರೂಪದಲ್ಲಿ ಭೂಮಾಲೀಕರಿಗೆ ಪರಿಹಾರವನ್ನು ನೀಡುತ್ತವೆ. ಬಿಡಿಏ, ಮೂಡ ದಂತಹ ಸಂಸ್ಥೆಗಳು ಭುಮಾಲೀಕರಿಗೆ ಅಭಿವೃದ್ದಿಪಡಿಸಿದ ನಿವೇಶನದಲ್ಲಿ ಶೇಕಡಾವಾರು ಇಂತಿಷ್ಟು ಎಂದು ನಿವೇಶನ ನೀಡುವ ಮೂಲಕ ಪರಿಹಾರ ನೀಡುತ್ತವೆ ಮತ್ತು ತಾವು ಹಿಂದೆ ಮೀಸಲಿರಿಸಿದ ಬೆಲೆಬಾಳುವ ನಿವೇಶನವನ್ನೂ ಕೂಡ ನೀಡುತ್ತವೆ. ಕೆಐಏಡಿಬಿ , ಹೌಸಿಂಗ್ ಬೋರ್ಡ್ ನಂತಹ ಸಂಸ್ಥೆಗಳು ರೈತರೊಂದಿಗೆ ಮಾತುಕತೆಯ ಮೂಲಕ ಎಕರೆಯೊಂದಕ್ಕೆ ಇಂತಿಷ್ಟು ಎಂದು ದರ ನಿಗದಿ ಮಾಡುತ್ತವೆ. ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು(NHAI) ದೇಶಾದ್ಯಂತ 2013 ರ ಆರ್ಎಫ್ಸಿಟಿಎಲ್ಏಆರ್ಆರ್ ಕಾಯ್ದೆ (Right to Fair Compensation and Transparency in Land Acquisition, Rehabilitation and Resettlement Act, 2013) ಅನ್ವಯ ಪರಿಹಾರ ನೀಡುತ್ತವೆ.

ಈ ಕಾಯ್ದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು ಇದು 2014 ರ ಜನವರಿಯಿಂದ ಜಾರಿಗೆ ಬಂದಿದೆ. ಇದಕ್ಕೂ ಮೊದಲು 1894ರ ಬ್ರಿಟಿಷ್ ಭೂಸ್ವಾಧೀನ ಕಾಯ್ದೆಯು ಜಾರಿಯಲ್ಲಿದ್ದು ಇದರಿಂದ ಭೂಮಾಲೀಕರಿಗೆ ಪರಿಹಾರ ನೀಡುವಿಕೆಯಲ್ಲಿ ಅನ್ಯಾಯವಾಗುತಿತ್ತು. ಹೆದ್ದಾರಿಯ ಅಕ್ಕ ಪಕ್ಕದ ಭೂಮಾಲೀಕರಿಗೆ ಲೋಕೋಪಯೋಗಿ ಇಲಾಖೆಯ ನಿಯಮಗಳು ಕಠಿಣ ಎನಿಸಬಹುದಾದರೂ ಮುಂದೆ ಕಳೆದುಕೊಳ್ಳಲಿರುವ ಭೂಮಿಗೆ ಉತ್ತಮ ಪರಿಹಾರ ದೊರೆಯುವುದು ಖಚಿತವೇ ಆಗಿದೆ.

ಹೆದ್ದಾರಿ ಅಗಲೀಕರಣಕ್ಕೆ ಬಾರದ ಆದೇಶ
ಕೇಂದ್ರ ಸಾರಿಗೆ ಸಚಿವ ನಿತಿನ್ ಘಡ್ಕರಿ ಅವರು ಇತ್ತೀಚೆಗೆ ಘೋಷಿಸಿರುವ 1600 ಕೋಟಿ ರೂಪಾಯಿಗಳ ಚನ್ನರಾಯಪಟ್ಟಣ-ಕೇರಳ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕುರಿತು ಜಿಲ್ಲೆಯ ಲೋಕೋಪಯೋಗಿ ಇಲಾಖೆಗೆ ಅಂದಾಜು ಪಟ್ಟಿ ತಯಾರಿಸಲು ಇನ್ನೂ ಆದೇಶ ಬಂದಿಲ್ಲ ಎಂದು ತಿಳಿದು ಬಂದಿದೆ.

ಈ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿಯು ವಾಹನ ದಟ್ಟಣೆಯೆ ಆಧಾರದಲ್ಲಿ ದ್ವಿಪಥ ರಸ್ತೆ ಆಗಲಿದ್ದು 7.5 ಮೀಟರ್ ಗಳವರೆಗೆ ಟಾರು ರಸ್ತೆ ನಿರ್ಮಾಣವಾಗಲಿದ್ದು ಚರಂಡಿ , ಪಾದಚಾರಿ ಮಾರ್ಗ ಸೇರಿ ರಸ್ತೆಯ ಒಟ್ಟು ಅಗಲ 15 ಮೀಟರ್ ಗಳಷ್ಟು ಅಂದರೆ ಸುಮಾರು 50 ಅಡಿಗಳಷ್ಟು ಇರಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು