News Karnataka Kannada
Friday, May 03 2024
ಮಡಿಕೇರಿ

ಮಡಿಕೇರಿ: ಕೋವಿಗಳನ್ನು ಠೇವಣಿ ಇಡುವ ಕ್ರಮ ಕೈಬಿಡಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಒತ್ತಾಯ

Kodagu District Vokkaliga Association has demanded that the practice of depositing guns should be stopped.
Photo Credit :

ಮಡಿಕೇರಿ: ಚುನಾವಣಾ ಸಮಯದಲ್ಲಿ ಕೋವಿಗಳನ್ನು ಸಂಬಂಧಪಟ್ಟ ಪೊಲೀಸ್  ಠಾಣೆಗಳಲ್ಲಿ ಠೇವಣಿ ಇಡುವ ಪ್ರಕ್ರಿಯೆಗೆ ವಿನಾಯಿತಿ ನೀಡಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಅವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ ಕೋವಿಗಳನ್ನು ಠೇವಣಿ ಇಡುವ ಕ್ರಮವನ್ನು ಕೈ ಬಿಡುವಂತೆ ಒತ್ತಾಯಿಸಿತು.

ಲೋಕಸಭಾ, ವಿಧಾನಸಭಾ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆ ನಡೆಯುವ ಸಂದರ್ಭದಲ್ಲಿ ಕೋವಿ ಲೈಸನ್ಸ್ ಹೊಂದಿರುವವರು ತಮ್ಮ ತಮ್ಮ ಕೋವಿಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಆಯಾ ಪೊಲೀಸ್ ಠಾಣಾಧಿಕಾರಿಗಳು ಸುತ್ತೋಲೆಯನ್ನು ಹೊರಡಿಸುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಕ್ರಮವಾಗಿದೆ.

ಕೊಡಗು ಗುಡ್ಡಗಾಡು ಪ್ರದೇಶ, ಕಾಡು ಪ್ರಾಣಿಗಳ ಹಾವಳಿಯೂ ಅಧಿಕ ಕೊಡಗಿನಲ್ಲಿ ವಾಸದ ಮನೆಗಳು ಗುಂಪಾಗಿರದೆ ಅವರವರ ತೋಟ ಮತ್ತು ಜಮೀನಿನಲ್ಲಿ ಮನೆ ನಿರ್ಮಿಸಿ ವಾಸಿಸಿರುವುದು ಸರ್ವೆ ಸಾಮಾನ್ಯ. ಜೊತೆಗೆ ವೃದ್ಧರು ವಾಸಿಸುತ್ತಿರುವ ಮನೆಗಳಲ್ಲಿ ದರೋಡೆ ಕೊಲೆ ಸರ್ವೆ ಸಾಮಾನ್ಯವಾಗಿದೆ ಮತ್ತು ಜಿಲ್ಲೆಯ ಕೆಲವು ಭಾಗಗಳಲ್ಲಿ ನಕ್ಸಲೀಯರ ಹಾವಳಿಯೂ ಇದೆ.

ವಸ್ತು ಸ್ಥಿತಿ ಹೀಗಿರುವಾಗ ಚುನಾವಣಾ ಸಮಯದಲ್ಲಿ ಕೋವಿ ಪರವಾನಿಗೆ ಹೊಂದಿರುವವರು ತಮ್ಮ ಶಸ್ತ್ರಾಸ್ತ್ರವನ್ನು ತಿಂಗಳುಗಟ್ಟಲೆ ಪೊಲೀಸ್  ಠಾಣೆಯಲ್ಲಿಟ್ಟಾಗ ಅಭದ್ರತೆ ಕಾಡುತ್ತದೆ. ನೂರಾರು ಕೋವಿಗಳನ್ನು ಒಂದು ಕೋಣೆಯಲ್ಲಿಟ್ಟಾಗ ಮತ್ತು ಅದನ್ನು ಶುಚಿಗೊಳಿಸದೆ ಇದ್ದಾಗ ತುಕ್ಕು ಹಿಡಿದು ನಿಷ್ಪ್ರಯೋಜಕವಾಗುತ್ತದೆ ಎಂದು ನಿಯೋಗ ಗಮನ ಸೆಳೆಯಿತು.

ಚುನಾವಣಾ ಆಯೋಗವು  ಆಯಾ ಜಿಲ್ಲಾ ದಂಢಾಧಿಕಾರಿಗಳು ಸ್ಕ್ರೀನಿಂಗ್ ಕಮಿಟಿ ಮಾಡಿ ಪ್ರತಿಯೊರ್ವ ಕೋವಿ ಪರವಾನಿಗೆ ಹೊಂದಿರುವವನು ಅಪರಾಧಗಳನ್ನು ಮಾಡಿದ್ದರೆ ಅಂತಹವನ ಕೋವಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನೋಡಿಕೊಳ್ಳುವುದೆಂದು” ಸೂಚಿಸಿದೆ. ಆದರೆ ಕಳೆದ ಹಲವಾರು ಚುನಾವಣೆ ಈ ಜಿಲ್ಲೆಯಲ್ಲಿ ನಡೆದಾಗ ಇಂತಹ ಸ್ಕ್ರೀನಿಂಗ್ ಕಮಿಟಿಯ ಸಭೆ ನಡೆದಿರುವುದೇ ಕೋವಿ ಪರವಾನಿಗೆದಾರರ ಗಮನಕ್ಕೆ ಬಂದಿರುವುದಿಲ್ಲ. ಬದಲಾಗಿ ಸಂಬಂಧಪಟ್ಟ ಠಾಣಾಧಿಕಾರಿಗಳು ಕೋವಿ ಪರವಾನಗಿದಾರರು ತಮ್ಮ ತಮ್ಮ ಕೋವಿಯನ್ನು ಆಯಾ ಆರಕ್ಷಕ ಠಾಣೆಯಲ್ಲಿ ತಂದಿಡುವಂತೆ ಸೂಚಿಸಿ ಕೈ ತೊಳೆದುಕೊಳ್ಳುತ್ತಾರೆ. ಇದು ಚುನಾವಣಾ ಆಯೋಗದ ಸುತ್ತೋಲೆಯ ಉಲ್ಲಂಘನೆಯಾಗಿರುತ್ತದೆ ಎಂದು ಎಸ್.ಎಂ.ಚಂಗಪ್ಪ ಆರೋಪಿಸಿದರು.

ಕೇರಳ ಉಚ್ಚ ನ್ಯಾಯಾಲಯದಲ್ಲಿ ಇಂತಹದ್ದೇ ಒಂದು ಮೊಕ್ಕದ್ದಮೆಯ ವಿಚಾರಣೆ ನಡೆದು ಸ್ಕ್ರೀನಿಂಗ್ ಕಮಿಟಿಯ ಸಭೆ ನಡೆಸದೆ ಸಾರಸಗಟಾಗಿ ಎಲ್ಲಾ ಕೋವಿ ಪರವಾನಿಗೆದಾರರ ಕೋವಿಗಳನ್ನು ಠೇವಣಿ ಮಾಡಿಸಿಕೊಳ್ಳುವುದು ಸರಿಯಲ್ಲವೆಂದು ತೀರ್ಪು ನೀಡಿದೆ. ಸೆರೆಮನೆಯಿಂದ ಜಾಮೀನಿನಲ್ಲಿ ಬಿಡುಗಡೆಯಾದವರ, ಅಪರಾಧಗಳನ್ನು ಎಸಗಿದ ಇತಿಹಾಸ ಇರುವವರ, ಚುನಾವಣಾ ಸಮಯದಲ್ಲಿ ದೊಂಬಿ ಎಬ್ಬಿಸುವವರ ಕೋವಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಿ ಬಾಂಬೆ ಉಚ್ಚ ನ್ಯಾಯಾಲಯ ಹಿಂದೆ ತೀರ್ಪು ನೀಡಿದೆ.

ಈ ಎಲ್ಲಾ ವಿಷಯಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಸಾರಾಸಗಟಾಗಿ ಎಲ್ಲಾ ಕೋವಿ ಪರವಾನಿಗೆದಾರರ ಕೋವಿಗಳನ್ನು ಆಯಾ ಆರಕ್ಷಕ ಠಾಣೆಯಲ್ಲಿ ತಂದು ಠೇವಣಿ ಮಾಡುವ ಕ್ರಮಕ್ಕೆ ಇತಿಶ್ರೀ ಹಾಡಬೇಕೆಂದು ಎಸ್.ಎಂ.ಚಂಗಪ್ಪ ಮನವಿ ಮಾಡಿದರು.

ಉಪಾಧ್ಯಕ್ಷರಾದ ಪಿ.ಕೆ.ರವಿ, ವಿ.ಪಿ.ಸುರೇಶ್, ಗೌರವ ಕಾರ್ಯದರ್ಶಿ ಎಸ್.ಎಲ್.ಬಸವರಾಜು, ನಿರ್ದೇಶಕರುಗಳಾದ ಟಿ.ಆರ್.ಪುರುಷೋತ್ತಮ, ವಿ.ಪಿ.ಶಶಿಧರ್, ಕೆ.ಪಿ.ಚಂದ್ರಕಲಾ, ಜಾನಕಿ ವೆಂಕಟೇಶ್, ಎ.ಪಿ.ಧರ್ಮಪ್ಪ, ಟಿ.ಎಲ್.ಮಹೇಶ್ ಕುಮಾರ್, ಎನ್.ಕೆ.ಅಪ್ಪಸ್ವಾಮಿ, ಶೀಲ ಪ್ರಕಾಶ್, ಜಿ.ಆರ್.ಭುವನೇಂದ್ರ, ಹೆಚ್.ಎಂ.ಜಿತೇಂದ್ರ, ಮಡಿಕೇರಿ ತಾಲೂಕು ಅಧ್ಯಕ್ಷ ವಿ.ಜಿ.ಮೋಹನ್ ಹಾಗೂ ಸದಸ್ಯ ವಿಜಯಕುಮಾರ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು