News Karnataka Kannada
Thursday, May 02 2024
ಮಡಿಕೇರಿ

ಮಡಿಕೇರಿ: ಕುವೆಂಪು ಕನ್ನಡ ಅಕ್ಷರ ಲೋಕದ ಮೇರು ಶಿಖರ- ಟಿ.ಪಿ.ರಮೇಶ್

Madikeri: Kuvempu Kannada Akshara Loka Meru Shikhara - T.P. Ramesh
Photo Credit : By Author

ಮಡಿಕೇರಿ, ಡಿ.29: ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕುವೆಂಪು ಅವರು ಕುಪ್ಪಳ್ಳಿಯಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದು, ರಾಜ್ಯ, ರಾಷ್ಟ್ರ ಮಾತ್ರವಲ್ಲ ಇಡೀ ವಿಶ್ವಕ್ಕೆ ಕನ್ನಡ ಸಾಹಿತ್ಯವನ್ನು ವಿಸ್ತರಿಸಿ ಇತಿಹಾಸದ ದಿಗ್ಗಜರ ಪಾಲಿಗೆ ಸೇರಿದರು. ಕನ್ನಡ ಅಕ್ಷರ ಲೋಕದ ನವ ಸಾಹಿತ್ಯವನ್ನು ಮೇರು ಶಿಖರಕ್ಕೆ ಏರಿಸಿದ ಮಹಾನ್ ಚೇತನ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ವರ್ಣಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಕಾರದಲ್ಲಿ ನಗರದ ‘ಕುವೆಂಪು ಪುತ್ಥಳಿ’ ಆವರಣದಲ್ಲಿ ಗುರುವಾರ ನಡೆದ ‘ವಿಶ್ವ ಮಾನವ ದಿನಾಚರಣೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕುವೆಂಪು ಅವರು ನಮ್ಮ ತಲೆಮಾರನ್ನು ವೈಚಾರಿಕ ಅಂಗಳಕ್ಕೆ ಕರೆದೊಯ್ದು ಪರಿಚಯಿಸಿದ ಅದ್ಭುತ ವಿಚಾರವಂತ. ಕುವೆಂಪು ಅವರು ನೀಡಿರುವ ವಿಶ್ವ ಮಾನವ ಸಂದೇಶ ಸದಾ ಕಾಲಕ್ಕೆ ಸಲ್ಲುತ್ತದೆ ಎಂದು ಟಿ.ಪಿ.ರಮೇಶ್ ಅವರು ನುಡಿದರು.
ಕರ್ನಾಟಕ ವೈಚಾರಿಕ ವಲಯದ ಸಾಕ್ಷಿ ಪ್ರಜ್ಞೆಯಂತೆ ಇದ್ದ ಕುವೆಂಪು ಅವರು, ಕನ್ನಡ ನಾಡು, ನುಡಿ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು ಎಂದು ಅವರು ಸ್ಮರಿಸಿದರು.

ರಾಷ್ಟ್ರಕವಿ ಕುವೆಂಪು ಅವರು ಸುಮಾರು 31 ಕವನ ಸಂಕಲನಗಳನ್ನು, 2 ರೂಪಾಂತರಗಳು ಸೇರಿ 14 ನಾಟಕಗಳನ್ನು, 2 ಬೃಹತ್ ಕಾದಂಬರಿಗಳನ್ನು ಜೊತೆಗೆ ಒಂದು ಮಹಾಕಾವ್ಯವನ್ನು, ನೂರಾರು ಲೇಖನ, ಹಾಗೆಯೇ ‘ನೆನಪಿನದೋಣಿ’ ಹೆಸರಿನ ಆತ್ಮ ಚರಿತ್ರೆ ಬರೆದಿದ್ದಾರೆ ಎಂದು ಅವರು ತಿಳಿಸಿದರು.

ಕುವೆಂಪು ಅವರು ರಚಿಸಿದ ಎರಡು ಮಹಾ ಕಾದಂಬರಿಗಳಾದ ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಪ್ರಮುಖವಾಗಿವೆ. ಈ ಎರಡು ಕೃತಿಗಳು ಕನ್ನಡ ಸಾಹಿತ್ಯಕ ಮೌಲ್ಯವನ್ನು ಸಾರಿ ಹೇಳುತ್ತವೆ. ಮಲೆನಾಡಿನಲ್ಲಿ ನಡೆಯುವ ಈ ಕಥನಗಳು ಕುವೆಂಪು ಅವರ ನಿರೂಪಣಾ ಪ್ರತಿಭೆಗೆ ಶ್ರೇಷ್ಠ ಉದಾಹರಣೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಬಣ್ಣಿಸಿದರು.

‘20ನೇ ಶತಮಾನದ ಗ್ರಾಮ ಭಾರತದಲ್ಲಿ ಉಂಟಾದ ಸಾಮಾಜಿಕ ಪರಿವರ್ತನೆಗಳು, ಅವು ತಂದೊಡ್ಡಿದ ಸವಾಲುಗಳನ್ನು ಈ ಕಾದಂಬರಿಗಳು ಸೂಕ್ಷ್ಮವಾಗಿ ಕಟ್ಟಿ ಕೊಡುತ್ತವೆ. ಈ ಕಥನಕಗಳಲ್ಲಿ ಕಾಣಸಿಗುವ ಪ್ರಾದೇಶಿಕ ಕನ್ನಡ ಭಾಷೆಯ ಸೊಗಡು, ಮಣ್ಣಿನ ವಾಸನೆ ಅತ್ಯಂತ ಎಚ್ಚರದಿಂದ ಕಾಯ್ದಿರಿಸಿದ ಸಾಮಾಜಿಕ ಪ್ರಜ್ಞೆಗಳಿಂದ ಈ ಕಾದಂಬರಿಗಳ ಓದು ಒಂದು ಚೇತೋಹಾರಿಯಾದ ಒಳನೋಟಗಳ ಪಯಣದಂತೆ ಭಾಸವಾಗುತ್ತದೆ ಎಂದು ಟಿ.ಪಿ.ರಮೇಶ್ ಅವರು ವಿವರಿಸಿದರು.’

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರು ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ದೀಕ್ಷೆಯನ್ನು ಕೊಟ್ಟಿದ್ದಾರೆ. ನೀ ಮೆಟ್ಟುವ ನೆಲ ಅದೇ ಕರ್ನಾಟಕ, ನೀ ಕುಡಿಯುವ ನೀರು ಅದೇ ಕಾವೇರಿ, ಕನ್ನಡ ಮತ್ತು ಸಂಸ್ಕøತಿ ವಿಶ್ವ ವ್ಯಾಪ್ತಿಯಾಗಿಯೂ ಕನ್ನಡತನ ಉಳಿಸಿಕೊಳ್ಳುವ ದೂರದೃಷ್ಟಿಯನ್ನು ಕುವೆಂಪು ಅವರು ನೀಡಿದ್ದಾರೆ ಎಂದು ಅವರು ವಿವರಿಸಿದರು.’

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಕುವೆಂಪು ಅವರು ಸೃಜನಶೀಲ ಬರಹಗಳ ಜೊತೆಗೆ ಸಾಂಸ್ಕøತಿಕವಾಗಿ ಮಹತ್ವ ಹೊಂದಿವೆ. ಕುವೆಂಪು ಅವರ ವಿಚಾರ ಬರಹಗಳು ಮನುಷ್ಯತ್ವದ ಏಕತೆಯನ್ನು ಎತ್ತಿ ಹಿಡಿಯುತ್ತವೆ. ಕುವೆಂಪು ಅವರ ಬರಹಗಳು ಮುಂದಿನ ಸಹಸ್ರಮಾನದವರೆಗೂ ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಕುವೆಂಪು ಸಾಹಿತ್ಯವನ್ನು ತಿಳಿಸುವಂತಾಗಬೇಕು ಎಂದು ಕರೆ ನೀಡಿದರು.

ಜಿ.ಪಂ.ಮಾಜಿ ಅಧ್ಯಕ್ಷರು ಹಾಗೂ ಕುವೆಂಪು ಅವರ ಕುಟುಂಬಸ್ಥರಾದ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ ಕರ್ನಾಟಕದಲ್ಲಿ ಕುವೆಂಪು ಎಂಬುದು ವ್ಯಕ್ತಿ ನಾಮವಲ್ಲ. ಎಚ್ಚರದ ವಿರಾಟ ಪ್ರಜ್ಞೆ, ಅಭಿಮಾನದ ಪ್ರತೀಕ ಎಂದು ನುಡಿದರು. ಕುವೆಂಪು ಅವರ ಪುತ್ಥಳಿ ನವೀಕರಣಕ್ಕೆ ಜಿಲ್ಲಾಡಳಿತ ಸ್ಪಂದಿಸಿದ್ದು, ಮಾನ್ಯ ಜಿಲ್ಲಾಧಿಕಾರಿ ಅವರಿಗೆ ಕೃತಜ್ಞತೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್ ಅವರು ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮನುಜ ಮತ-ವಿಶ್ವ ಪಥ ಸಂದೇಶವನ್ನು ಸಾರಿದ್ದಾರೆ. ಕುವೆಂಪು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದರು.

ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಅವರು ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆ, ರೈತ ಗೀತೆ, ಅನಿಕೇತನ ಹೀಗೆ ಹಲವು ‘ವಿಶ್ವ ಮಾನವ ಗೀತೆ’ ರಚಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮವು ನಾಡಗೀತೆಯಿಂದ ಆರಂಭವಾಗುತ್ತದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ರಕ್ಷಣಾ ವೇದಿಕೆಯ ರವಿಗೌಡ, ತಹಶೀಲ್ದಾರ್ ಪಿ.ಎಸ್.ಮಹೇಶ್, ಪೌರಾಯುಕ್ತರಾದ ವಿಜಯ, ನೆರವಂಡ ಉಮೇಶ್, ಅಂಬೆಕಲ್ ನವೀನ್, ಕಾರ್ಮಿಕ ಇಲಾಖಾ ಅಧಿಕಾರಿ ಅನಿಲ್ ಬಗಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಜಾನಪದ ಪರಿಷತ್ತಿನ ಸಂಪತ್ತು ಕುಮಾರ್, ಮದೆ ಮಹೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಇತರರು ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆಯನ್ನು ಗಣ್ಯರು ನೆರವೇರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಕಡ್ಲೇರ ತುಳಸಿ ಮೋಹನ್ ಮತ್ತು ಚೈತ್ರ ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು