News Karnataka Kannada
Wednesday, May 08 2024
ಮಡಿಕೇರಿ

ಮಡಿಕೇರಿ: 28ನೇ ಸಾರ್ವತ್ರಿಕ ಕೈಲ್ ಪೊವ್ದ್ ನಮ್ಮೆ ಆಚರಣೆ

Madikeri: 28th General Kyle Povd Namme Celebrations
Photo Credit :

ಮಡಿಕೇರಿ: ಸಿ.ಎನ್.ಸಿ ಆಶ್ರಯದಲ್ಲಿ ಸೆ.1ರ ಪೂರ್ವಾಹ್ನ ಮಡಿಕೇರಿಯ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ 28ನೇ ಸಾರ್ವತ್ರಿಕ ಕೈಲ್ ಪೊವ್ದ್ ನಮ್ಮೆ ಆಚರಣೆ – ಕೊಡವ ಕುಲದ ಧಾರ್ಮಿಕ ಸಂಸ್ಕಾರವಾದ ಗನ್/ತೋಕ್ ಮತ್ತು ಒಡಿಕತ್ತಿಗಳನ್ನು “ತೋಕ್‌ಪೂ” ನಿಂದ ಸಿಂಗರಿಸುವ ಮೂಲಕ ಕ್ಯಾಪಿಟಲ್ ವಿಲೇಜ್ “ಮಂದ್”ನಲ್ಲಿ ಸಾಂಸ್ಕೃತಿಕ ವಿಧಿ ವಿಧಾನಗಳ ಮೂಲಕ ಗೌರವಾರ್ಪಣೆ ಸಲ್ಲಿಸಿ, ಗುರು -ಕಾರೋಣರಿಗೆ ಮೀದಿ/ನೈವೇದ್ಯ ಅರ್ಪಿಸಲಾಗುವುದು.

ಕೊಡವ ರೇಸ್‌ನ ಶಾಶ್ವತ ಅಸ್ಥಿತ್ವಕ್ಕಾಗಿ ರಾಜ್ಯಾಂಗ ಖಾತ್ರಿಗೆ ಸಂಬಂಧಪಟ್ಟ 9 ಪ್ರಧಾನ ಆಶೋತ್ತರಗಳು ಮತ್ತು ಗೌರವಾನ್ವಿತ ಗುರಿಯ ಸಾಧನೆಗಾಗಿ ಅಂದು ನಿರ್ಣಯ ಅಂಗೀಕರಿಸಲಾಗುವುದು. ಕಾರ್ಯಕ್ರಮದಲ್ಲಿ ದುಡಿಕೊಟ್ಟ್ ಪಾಟ್, ಮಹಿಳೆಯರು ಮತ್ತು ಪುರುಷರಿಗೆ ತೆಂಗೆಬೊಡಿ ಸ್ಪರ್ಧೆ, ಸಭಾ ಕಾರ್ಯಕ್ರಮದ ನಂತರ ಕೊಡವ ಸಾಂಪ್ರದಾಯಿಕ ಅಡುಗೆಯನ್ನು ಬಡಿಸಲಾಗುವುದು.

ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್‌ರವರು ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಹಾಗು ವಿಧಾನ ಪರಿಷತ್ ಸದಸ್ಯ ಬಿಜೆಪಿ ನಾಯಕ ಅಡಗೂರು ಹೆಚ್.ವಿಶ್ವನಾಥ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕೊಡವರು ಬೇಟೆ ಮತ್ತು ಸಮರ ಕೌಶಲ್ಯವನ್ನು ರಕ್ತಗತವಾಗಿ ಅಂತರ್ಗತ ಮಾಡಿಕೊಂಡ ಯೋಧ ಸಮುದಾಯವಾಗಿದ್ದಾರೆ. ಕೊಡವರು ತಮ್ಮದೇ ಆದ ಸೂಕ್ಷ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಒಳಕೋಶಗಳನ್ನ ಹೊಂದಿದ್ದಾರೆ.

ಮಾನವ ಕುಲ ಸೃಷ್ಟಿಯಾದಾಗಲೇ ಈ ನೆಲದಲ್ಲಿ ಉತ್ಪತ್ತಿಯಾದ ಕೊಡವ ಕುಲ ಮತ್ತು ಈ ಭೂ ಮಂಡಲ ಸೃಷ್ಟಿಯೊಂದಿಗೆ ಉದ್ಭವವಾದ ಕೊಡವ ಜನ್ಮ ಭೂಮಿ ಸೂರ್ಯ –ಚಂದ್ರರಷ್ಟೆ ಪ್ರಾಚೀನವಾಗಿದ್ದು ಕೊಡವ ಮೂಲ ವಂಶಸ್ಥರ ಧಾರ್ಮಿಕ ಸಂಸ್ಕಾರವಾದ ತೋಕ್/ಗನ್ ಒಂದಕ್ಕೊಂದು ಬೆಸುಗೆಯಾಗಿದೆ. ಕೊಡವರ ಪ್ರಾಚೀನತೆಯು ಮತ್ತು ಕೊಡವರ ಪೂರ್ವಜತೆಯು ಈ ಮೇಲ್ಕಾಣಿಸಿದ ಪವಿತ್ರ ಸಿದ್ದಾಂತಗಳೊಂದಿಗೆ ತಳಕು ಹಾಕಿದೆಯೆಂದು ಇಡೀ ಜಗತ್ತಿಗೆ ತೋರಿಸಲು ಆ ಮೂಲಕ ರಾಜ್ಯಾಂಗ ಖಾತ್ರಿಯ ಸ್ಥಿರೀಕರಣಕ್ಕಾಗಿ ಕೊಡವರ ಎಲ್ಲಾ ಜನಪದೀಯ ಹಬ್ಬ ಹರಿದಿನಗಳನ್ನು ಮತ್ತು ಧಾರ್ಮಿಕ ಸಂಸ್ಕಾರಗಳನ್ನು ಜಗತ್ತು, ಸಮಾಜ ಮತ್ತು ಸರ್ಕಾರದ ಮುಂದೆ ಅನಾವರಣ ಮಾಡುವ ಕಾರ್ಯವನ್ನು ಸಿ.ಎನ್.ಸಿ ತನ್ನ ಆಂದೋಲನದೊಂದಿಗೆ ಸಾರ್ವತ್ರಿಕಗೊಳಿಸಿ ಜನಮಾನಸದಲ್ಲಿ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮತ್ತು ಸರ್ಕಾರಕ್ಕೆ ನಮ್ಮ ಆಶೋತ್ತರಗಳನ್ನು ಪರಿಗಣಿಸುವ ಸಲುವಾಗಿ ಶಾಂತಿಯುತವಾಗಿ ಕಳೆದ ಮೂರು ದಶಕಗಳಿಂದ ಹಕ್ಕೊತ್ತಾಯ ಮಂಡಿಸುತ್ತಾ ಬಂದಿದ್ದೇವೆ.

ಮೇಲ್ಕಾಣಿಸಿದ ಮೂರು ಸಿದ್ಧಾಂತಗಳೆಂದರೆ, ನಮ್ಮ ಪ್ರಾಚೀನ ಜನಾಂಗೀಯ ಹೆಗ್ಗುರುತು, ನಮ್ಮ ಜನ್ಮ ಭೂಮಿ ಮತ್ತು ನಮ್ಮ ಧಾರ್ಮಿಕ ಸಂಸ್ಕಾರ ಅರ್ಥಾತ್ ನೆಲೆ-ನೆಲ, ಕೊಡವ ಜನಾಂಗ ಮತ್ತು ಬಂದೂಕು. ಇದು ಒಂದಕ್ಕೊಂದು ಬಿಡಿಸಲಾಗದ ಅವಿನಾಭಾವ ಸಂಬಂಧದಿಂದ ಕೂಡಿದ್ದು, ನಮ್ಮ ಆತ್ಮ ಮತ್ತು ಹೃದಯವಿದ್ದಂತೆ ಇದು ಯಾವುದಾದರೊಂದನ್ನು ಕಳೆದುಕೊಂಡರೂ ಅದು ಪಾರ್ಶ್ವವಾಯುವಿನಿಂದ ಬಳಲಿದ ಅಂಗ ಊನದಂತೆ ಆಪತ್ತು ಉಂಟಾಗಲಿದೆ. ಇದೆಲ್ಲವನ್ನು ಪ್ರಾಚೀನ ಆದರ್ಶ ಮತ್ತು ಇಂದಿನ ವಾಸ್ತವಗಳ ಸಮತೋಲನ ಕಾಯ್ದುಕೊಂಡು ಶಾಸನ ಬದ್ಧವಾಗಿ ರಕ್ಷಿಸಿ ಉಳಿಸುವ ಸಲುವಾಗಿ 20ನೇ ಶತಮಾನದ ಅತೀ ಶ್ರೇಷ್ಟ ರಾಜಕೀಯ ಮುತ್ಸದ್ಧಿಯಾದ ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿದ ಪವಿತ್ರ ಸಂವಿಧಾನದ ಅಡಿಯಲ್ಲಿ ಜೋಪಾನ ಮಾಡಬೇಕಾಗಿದೆ.

ಈ ಕೆಳಗಿನ ಪ್ರಧಾನ ಹಕ್ಕೋತ್ತಾಯಗಳು ಮತ್ತು ಆಶೋತ್ತರಗಳ ಕುರಿತು ಪುರ್ನನಿರ್ಣಯ ಕೈಗೊಳ್ಳಲಾಗುವುದು.
1. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯನ್ನ ಸಂವಿಧಾನ 371 (ಕೆ) ವಿಧಿಯನ್ವಯ ಸ್ಥಾಪಿಸಬೇಕು.
2. ಕೊಡವ ಮೂಲ ವಂಶಸ್ಥ ರೇಸ್‌ಗೆ ಸಂವಿಧಾನದ 340 ಮತ್ತು 342ನೇ ವಿಧಿಯನ್ವಯ ರಾಜ್ಯಾಂಗ ಖಾತ್ರಿ ನೀಡಬೇಕು.
3. ಪ್ರಾಚೀನವು ಸಂಮೃದ್ಧವೂ ಮತ್ತು ಶ್ರೀಮಂತವೂ ಆದ ಕೊಡವ ತಕ್ಕನ್ನ ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು.
4. ಕೊಡವರ ಧಾರ್ಮಿಕ ಸಂಸ್ಕಾರ ಗನ್/ತೋಕ್‌ಗೆ ಸಿಖ್ ಸಮುದಾಯದ ಕಿರ್ಪಾಣ್ ಮಾದರಿಯಲ್ಲಿ ಸಂವಿಧಾನದ 25 ಮತ್ತು 26ನೇ ವಿಧಿ ಪ್ರಕಾರ ಶಾಶ್ವತ ಭದ್ರತೆ ಒದಗಿಸಬೇಕು.
5. ಕೊಡವ ಜನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನ ವಿಶ್ವ ರಾಷ್ಟ್ರ ಸಂಸ್ಥೆಯ ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕು.
6. ಜೀವ ನದಿ ಮತ್ತು ಜಲಧಾತೆ ಕಾವೇರಿಗೆ ಲೀವಿಂಗ್ ಎಂಟಿಟಿ ವಿತ್ ಲೀಗಲ್ ಪರ್ಸನ್ ಸ್ಟೇಟಸ್ (ಜೀವಂತ ಅಸ್ಥಿತ್ವ ಮತ್ತು ಕಾನೂನಾತ್ಮಕ ವ್ಯಕ್ತಿ) ಸ್ಥಾನಮಾನ ನೀಡಿ ಸಂರಕ್ಷಿಸಬೇಕು. ಕಾವೇರಿ ನದಿ ನೀರಿನ ಸಿಂಹ ಪಾಲು ಕೊಡಗಿನ ಬಳಕೆಗೆ ನೀಡಬೇಕು. ದೈವೀ ಸ್ವರೂಪಿಣಿ ಕಾವೇರಿಯ ಉದ್ಭವ ಸ್ಥಳ (ಜನ್ಮ ಸ್ಥಳ)ವನ್ನು ಯಹೂದಿಗಳ ಜೆರೋಸೆಲಂನ ಮೌಂಟ್ ಮೊರಯ್ಯ ಮಾದರಿಯಲ್ಲಿ ಕೊಡವರ ಪ್ರಧಾನ ತೀರ್ಥ ಕ್ಷೇತ್ರವೆಂದು ಸರ್ಕಾರ ಪರಿಗಣಿಸಬೇಕು.
7. ಅರಮನೆ ಪಿತೂರಿಯಲ್ಲಿ 201 ವರ್ಷಗಳ ಕಾಲ ಸತತ ಕೊಡವರ ರಾಜಕೀಯ ಹತ್ಯೆ ನಡೆದ ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಗಳಲ್ಲಿ ಸ್ಮಾರಕಗಳನ್ನು ನಿರ್ಮಿಸಬೇಕು. 32 ಬಾರಿ ಆಕ್ರಮಣಕಾರರ ವಿರುದ್ಧ ನಡೆದ ಪರಿಣಾಮಕಾರಿ ಯುದ್ಧದಲ್ಲಿ ಭಾಗಿಯಾದ ಕೊಡವರ ನೆನಪಿಗಾಗಿ ಸುಂಟಿಕೊಪ್ಪ ಉಲುಗುಲಿಯಲ್ಲಿ ಮತ್ತು ಕುಶಾಲನಗರದ ಮುಳ್ಳುಸೋಗೆಯಲ್ಲಿ ಯುದ್ಧ ಸ್ಮಾರಕಗಳನ್ನ ಕೊಡವರ ಪರಾಕ್ರಮದ ಸಂಸ್ಮರಣೆಗಾಗಿ ಸ್ಥಾಪಿಸಬೇಕು. ಸಂವಿಧಾನದ 49ನೇ ವಿಧಿ ಹಾಗು ವೆನೀಸ್ ಚಾರ್ಟರ್ 7 ರನ್ವಯ ಅಂತರಾಷ್ಟ್ರೀಯ ಕೊಡವ ನರಮೇಧ ಸಮಾಧಿಯನ್ನ ದೇವಾಟ್ ಪರಂಬ್‌ನಲ್ಲಿ ನಿರ್ಮಿಸಬೇಕು. ಈ ಎರಡು ದುರಂತಗಳನ್ನ ವಿಶ್ವ ರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಹತ್ಯಾಕಾಂಡ (ಹೋಲೋಕಾಸ್ಟ್) ಸ್ಮರಣೆ ಪಟ್ಟಿಯಲ್ಲಿ ಸೇರಿಸಬೇಕು.
8. ಕೊಡವ ಜನಸಂಖ್ಯಾ ಶಾಸ್ತ್ರ ಏರುಪೇರಾಗಿ ಬುಡಮೇಲಾಗುವ ಸ್ಥಿತಿಯನ್ನು ತಪ್ಪಿಸಲು ಹಾಗು ಕೊಡವರ ಪೂರ್ವಾಜಿತ ಸಮುದಾಯಿಕ ಭೂಮಿಗಳನ್ನು, ಕೊಡವರ ಆಧ್ಯಾತ್ಮಿಕ -ಪಾರಮಾರ್ತ್ರಿಕ ನೆಲೆಗಳಾದ “ಮಂದ್”ಗಳನ್ನು ದೇವಕಾಡ್‌ಗಳನ್ನು ಮತ್ತು ಕೊಡವ ಸಮುದಾಯ ಪವಿತ್ರ ಗರ್ಭಗುಡಿಗಳೆಂದು ಪರಿಗಣಿಸಿರುವ ತೂಟ್‌ಂಗಳ-ಕ್ಯಾಕೊಳ, ಮಚನಿ ಕಾಡುಗಳನ್ನು, ಸಾಂಪ್ರದಾಯಿಕ ಕಾಯ್ದೆ, ಜನಪದ ಕಾಯ್ದೆಗಳನ್ನ ಹಾಗು ಈ ನೆಲದಲ್ಲಿ ಕೊಡವರ ಶಾಶ್ವತ ಚಾರಿತ್ರಿಕ ನಿರಂತರತೆ –ಮುಂದುವರಿಕೆಗಾಗಿ ಭಾರತದ ಈಶಾನ್ಯ ರಾಜ್ಯಗಳ ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಮ್‌ಗಳ ಮಾದರಿಯಲ್ಲಿ ಇನ್ನರ್ ಲೈನ್ ಪರ್ವಿಟ್ (ಐಎಲ್‌ಪಿ) ಅನುಷ್ಠಾನಗೊಳಿಸಬೇಕು.
9. ಸಂವಿಧಾನದ ವಿಶೇಷ ಖಾತರಿಯನ್ನು ಕೊಡವರ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನೀಡಬೇಕು.
ವಿಷಯ ಸೂಚಿ:- ಮೂಲತ: ಬೇಟೆ ಮತ್ತು ಯುದ್ಧ (ಬಾಡಿಗೆ ಭಂಟತ್ವ) ವೇ ಕೊಡವರ ಮೂಲ ಜೀವನ ವಿಧಾನ ಮತ್ತು ಶ್ರದ್ಧಾ ಬದುಕು ಆಗಿದ್ದರಿಂದ ತೋಕ್/ಗನ್ ಕೊಡವರ ಕೈಗೆ ಬರುವ ಮೊದಲು ಕೊಡವರು ಗುರಾಣಿ-ಒಡಿಕತ್ತಿ, ಈಟಿ, ಭರ್ಜಿ, ಬಿಲ್ಲು, ಬಾಣಗಳನ್ನು ಉಪಯೋಗಿಸುತ್ತಿದ್ದರು. ಆ ಸಂದರ್ಭ ಬೇಟೆಯಲ್ಲಿ ಪ್ರಾಣಿಗಳನ್ನು ಕೊಲ್ಲಲು ಹಾಗು ಯುದ್ಧದಲ್ಲಿ ಶತ್ರುಗಳನ್ನು ಸೋಲಿಸಲು “ತೋಕ್‌ಪೂ” ಗೆಡ್ಡೆಯನ್ನು ಅರೆದು ಆಯುಧಗಳಿಗೆ ಲೇಪಿಸುತ್ತಿದ್ದರು. ಈ “ತೋಕ್‌ಪೂ” ಯಾವುದೇ ಪ್ರಾಣಿ ಅಥವಾ ಶತ್ರವನ್ನು ಪ್ರಜ್ಞಾಹೀನಗೊಳಿಸುವ (ಅನಸ್ಥೇಸಿಯಾ) ಔಷಧೀಯ ಗುಣಗಳನ್ನು ಹೊಂದಿದ್ದು ಆ ಪ್ರಾಚೀನ ಪರಂಪರೆಯ ಸ್ಮರಣೆಗಾಗಿ ಕೊಡವರು ಕೈಲ್‌ಪೊಲ್ದ್ ದಿವಸ ಆಯುಧಗಳಿಗೆ “ತೋಕ್‌ಪೂ” ಮೂಲಕ ಸಿಂಗರಿಸುತ್ತಾರೆ. ಮೊಟ್ಟ ಮೊದಲ ಬಾರಿ ಭಾರತಕ್ಕೆ ತೋಕ್/ಗನ್‌ನ್ನು ಮತ್ತು ಮದ್ದುಗುಂಡುಗಳನ್ನು ಅಪಘಾನಿಸ್ತಾನದ ಆಕ್ರಮಣಕಾರ ಬಾಬರ್ ಪರಿಚಯಿಸಿದ. ದೆಹಲಿಯ ಸುಲ್ತಾನ್ ಇಬ್ರಾಹಿಂ ಲೋದಿಯ ವಿರುದ್ಧ ಪ್ರಥಮ ಪಾಣಿಪತ್ ಯುದ್ಧದಲ್ಲಿ ಬಾಬರ್‌ನ ಬಳಿಯಿದ್ದ ಕೇವಲ 25 ಸಾವಿರ ಸೈನಿಕರು ತಮ್ಮ ಮದ್ದುಗುಂಡು ಮತ್ತು ತೋಕ್ ಬಲದಿಂದ ಕೇವಲ ಕತ್ತಿ-ಕಟಾರಿಯನ್ನು ಹಿಡಿದು ಹೊರಾಡಿದ ಒಂದೂವರೆ ಲಕ್ಷದಷ್ಟಿದ್ದ ಇಬ್ರಾಹಿಂ ಲೂದಿಯ ಸೈನ್ಯವನ್ನು ಸೋಲಿಸಿ ದೆಹಲಿ ಗದ್ದುಗೆ ಏರಲು ಕಾರಣವಾಯಿತು. ಅಂದಿನ ಕಾಲಕ್ಕೆ ಆಧುನಿಕ ಶಸ್ತ್ರಾಸ್ತ್ರವಾದ ತಿರಿ ತೋಕ್/ಗನ್ ಸಹಜವಾಗಿ ಯುದ್ಧ ಕೌಶಲ್ಯಗಳಲ್ಲಿ ಹೊಸ ಅವಿಸ್ಕಾರಗಳ ಅನ್ವೇಷಣೆಯಲ್ಲಿದ್ದ ಸಮರವೀರ ಜನಾಂಗವಾದ ಕೊಡವರ ಕೈಗೂ ಸೇರಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು