News Karnataka Kannada
Thursday, April 25 2024
Cricket
ಮಡಿಕೇರಿ

ಕೊಡಗಿನ ಕರಿಮೆಣಸು ಬೆಳೆಗಾರರಿಗೆ ನಂಜಾಣುರೋಗದ ಭಯ

Black pepper growers in Kodagu fear of viral disease
Photo Credit : By Author

ಮಡಿಕೇರಿ: ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಮತ್ತು ಆದಾಯ ತಂದುಕೊಡುತ್ತಿರುವ ಕರಿಮೆಣಸನ್ನು ತಗಲುವ ವಿವಿಧ ರೋಗಗಳಿಂದ ಕಾಪಾಡಿಕೊಳ್ಳುವುದು ಇತ್ತೀಚೆಗಿನ ದಿನಗಳಲ್ಲಿ ಬೆಳೆಗಾರರಿಗೆ ಸವಾಲ್ ಆಗಿ ಪರಿಣಮಿಸಿದೆ. ಆದರೂ ಅದಕ್ಕೆ ತಗಲುವ ರೋಗವನ್ನು ನಿಯಂತ್ರಿಸಿ ಫಸಲು ಪಡೆಯುವ ಸಾಹಸವನ್ನು ಮಾಡುವುದು ಬೆಳೆಗಾರರಿಗೆ ಅನಿವಾರ್ಯವಾಗಿದೆ.

ಕೊಡಗಿನ ಮಟ್ಟಿಗೆ ಹೆಚ್ಚು ಆದಾಯ ಪಡೆಯುವ ಬೆಳೆಯಾಗಿರುವ ಕರಿಮೆಣಸಿಗೆ ಇತ್ತೀಚೆಗಿನ ವರ್ಷಗಳಲ್ಲಿ ಉತ್ತಮ ದರ ದೊರೆಯುತ್ತದೆಯಾದರೂ ಅದನ್ನು ನೆಟ್ಟು ಆರೈಕೆ ಮಾಡಿ ಬೆಳೆಸಿದರೂ ಫಸಲು ನೀಡುವ ಸಮಯಕ್ಕೆ ಯಾವುದಾದರೂ ಒಂದು ರೋಗ ತಗುಲಿ ಇಡೀ ಬಳ್ಳಿ ಸಾವನ್ನಪ್ಪುತ್ತಿದ್ದು, ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬೆಳೆಗಾರರದ್ದಾಗಿದೆ. ಕೊಡಗಿನಲ್ಲಿ ಕರಿಮೆಣಸನ್ನು ಇಲ್ಲಿನ ಬೆಳೆಗಾರರು ಪ್ರತ್ಯೇಕವಾಗಿ ಬೆಳೆಯುತ್ತಿಲ್ಲ. ಕಾಫಿ ತೋಟದ ನಡುವೆ ಇರುವ ಮರಗಳಿಗೆ ಬಳ್ಳಿಯನ್ನು ನೆಟ್ಟು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಹಿಂದೆ ಇದಕ್ಕೆ ಹೆಚ್ಚಿನ ರೋಗಗಳು ತಗುಲದೆ ಇದ್ದಾಗ ಇದು ಬೆಳೆಗಾರರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ಬೆಳೆಯಾಗಿತ್ತು.

ಇವತ್ತು ಹೆಚ್ಚಿನ ದರ ಲಭಿಸುತ್ತಿದ್ದರೂ ಬಳ್ಳಿಗಳನ್ನು ಕಾಪಾಡಿಕೊಂಡು ಇಳುವರಿ ಪಡೆಯುವುದು ಸುಲಭವಾಗಿ ಉಳಿದಿಲ್ಲ. ಕಳೆದ ಐದು ವರ್ಷಗಳ ಕಾಲ ಕೊಡಗಿನಲ್ಲಿ ಭಾರಿ ಮಳೆ ಸುರಿದ ಕಾರಣ ತೇವಾಂಶ ಹೆಚ್ಚಾಗಿ ಕೆಲವು ಕಡೆಗಳಲ್ಲಿ ಬಳ್ಳಿಗೆ ಕೊಳೆರೋಗ ಬಂದು ಸಾವನ್ನಪ್ಪಿ ಬೆಳೆಗಾರರಿಗೆ ನಷ್ಟವಾಗಿತ್ತು. ಆದರೂ ಪ್ರತಿವರ್ಷವೂ ತೋಟಗಳ ನಡುವೆ ಬಳ್ಳಿಯನ್ನು ನೆಡುವ ಕೆಲಸವನ್ನು ಬೆಳೆಗಾರರು ಮಾಡುತ್ತಲೇ ಬರುತ್ತಿದ್ದಾರೆ. ಮೊದಲೆಲ್ಲ ಕರಿಮೆಣಸು ಬೆಳೆಯುವುದು ಕಷ್ಟವಾಗುತ್ತಿರಲಿಲ್ಲ. ಆಗ ಕಾಫಿ ತೋಟಗಳಲ್ಲಿರುವ ನೆರಳು ಮರದ ಬುಡಕ್ಕೆ ಬಳ್ಳಿನೆಟ್ಟು ಒಂದಿಷ್ಟು ಗೊಬ್ಬರ ಹಾಕಿದ್ದೇ ಆದರೆ ಶೀಘ್ರವೇ ಬೆಳೆದು ಫಸಲು ನೀಡುತ್ತಿತ್ತು. ಇದಕ್ಕೆ ರೋಗ ತಗಲುವ ಭಯವೂ ಇರಲಿಲ್ಲ. ಆದರೆ ಕಳೆದ ಎರಡು ದಶಕಗಳಲ್ಲಿ ಎಲ್ಲವೂ ಬದಲಾಗಿದೆ. ಸೊರಗು ರೋಗ ಸೇರಿದಂತೆ ಹಲವು ರೋಗಗಳು ಆಗಿಂದಾಗ್ಗೆ ಕರಿಮೆಣಸಿನ ಬಳ್ಳಿಯನ್ನು ಆಹುತಿ ತೆಗೆದುಕೊಳ್ಳುತ್ತಲೇ ಸಾಗುತ್ತಿದೆ.

ಈ ನಡುವೆ ಕರಿಮೆಣಸಿಗೆ ನಂಜಾಣುರೋಗ ಕಾಣಿಸಿಕೊಳ್ಳುತ್ತಿದ್ದು ಈ ರೋಗ ತಗುಲಿದ ಕರಿಮೆಣಸಿನ ಬಳ್ಳಿಗಳಲ್ಲಿ ಎಲೆಗಳು ಚಿಕ್ಕದಾಗಿ, ಬಳ್ಳಿಗಳು ಸಾಯುವುದು ಇಲ್ಲ ಅಥವಾ ಬೆಳವಣಿಗೆಯೂ ಇಲ್ಲದೆ, ಕಾಳುಮೆಣಸು ಬಿಡದೆ ಇರುವುದು ಕಂಡು ಬರುತ್ತಿದೆ. ಇದು ಬೆಳೆಗಾರರನ್ನು ಕಂಗೆಡಿಸಿದೆ. ನಂಜಾಣುವಿನ ಬಾಧೆಯಿಂದ ಉಂಟಾಗಿರುವ ಸಮಸ್ಯೆ ಬೆಳೆಗಾರರಲ್ಲಿ ನಿರಾಸಕ್ತಿಯನ್ನುಂಟು ಮಾಡುತ್ತಿದೆ. ಹೀಗಾಗಿ ಈ ನಂಜುರೋಗಕ್ಕೆ ಮದ್ದು ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ.

ಸದ್ಯ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜಾಣುವಿನ ಭಾದೆಗೆ ತುತ್ತಾಗಿರುವ ಬಳ್ಳಿಗಳನ್ನು ಪುನಶ್ಚೇತನಗೂಳಿಸಲು ಕೇರಳ ರಾಜ್ಯದ ಕ್ಯಾಲಿಕಟ್ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನ ಸಂಸ್ಥೆ ಅವರು ಶಿಫಾರಸ್ಸು ಮಾಡಿರುವ ಸಮಗ್ರ ತಂತ್ರಜ್ಞಾನಗಳ ಪರಿಚಯವನ್ನು ರೈತರಿಗೆ ತಿಳಿಸಿ ಆ ಮೂಲಕ ಬಳ್ಳಿಗಳನ್ನು ಕಾಪಾಡುವ ಕೆಲಸಕ್ಕೆ ಕೈಹಾಕಲಾಗಿದೆ. ನಂಜಾಣುರೋಗವನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞರಾದ ಡಾ.ಕೆ.ವಿ.ವೀರೇಂದ್ರ ಕುಮಾರ್ ಅವರು ಒಂದಷ್ಟು ಮಾಹಿತಿಗಳನ್ನು ನೀಡಿದ್ದಾರೆ.

ಅವರು ನೀಡಿರುವ ಸಮಗ್ರ ರೋಗ ನಿರ್ವಹಣಾ ತಂತ್ರಜ್ಞಾನಗಳ ಪೈಕಿ ಮುಂಗಾರು ಆರಂಭದ ಜೂನ್ ಮತ್ತು ಮಳೆಗಾಲದ ಕೊನೆಯಲ್ಲಿ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಪೆಪ್ಪೆರ್ ಸ್ಪೆಷಲ್ ಮತ್ತು ಸಮುದ್ರ ಕಳೆಯ ಸಿಂಪಡಣೆ ಮಾಡಬೇಕಾಗುತ್ತದೆ. ಅಲ್ಲದೆ ಕಹಿ ಬೇವಿನ ಹಿಂಡಿಯ ಪುಡಿಯನ್ನು ಬಳ್ಳಿಯ ಬುಡಕ್ಕೆ ಹಾಕಬೇಕು. ಇದಲ್ಲದೆ, ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬುಡಕ್ಕೆ ಸುರಿಯಬಹುದಾಗಿದೆ. ಇಷ್ಟೇ ಅಲ್ಲದೆ ಡಿಸೆಂಬರ್ ತಿಂಗಳಿನಲ್ಲಿ ಪೊಟ್ಯಾಷಿಯಂ ನೈಟ್ರೇಟ್ ನ ಸಿಂಪರಣೆ ಮಾಡಬೇಕಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು