News Karnataka Kannada
Friday, May 03 2024
ಮಡಿಕೇರಿ

ಕೊಡಗು ಜಿಲ್ಲಾಧಿಕಾರಿ : ಇಲಿಜ್ವರ ರೋಗ ಹರಡದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಮನವಿ

Charulatha
Photo Credit :

ಕೊಡಗು: ಕೊಡಗು ಜಿಲ್ಲೆಯಲ್ಲಿ ಇಲಿಜ್ವರ ರೋಗ ಹರಡದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಕೊಡಗು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇಲಿಜ್ವರ ಎಂಬ ರೋಗವು ‘ಲೆಪ್ಟೋಸ್ಪೆರ’ ಎಂಬ ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ರೋಗವನ್ನು ಹರಡಬಹುದಾದ ರೋಗಾಣುಗಳು ಪ್ರಾಣಿಗಳ ಮೂತ್ರದಲ್ಲಿದ್ದು, ಇಂತಹ ಸೋಂಕು ದೇಹವನ್ನು ಸೇರಿ ಮನುಷ್ಯರಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.

ಮನೆಯ ಪರಿಸರದಲ್ಲಿ ಇರುವ ಇಲಿ, ಹೆಗ್ಗಣ ಮತ್ತು ಬೆಕ್ಕು, ನಾಯಿ, ದನ, ಆಡು ಮುಂತಾದ ಸಾಕು ಪ್ರಾಣ ಗಳು ಹಾಗೂ ಕೆಲವು ಕಾಡು ಪ್ರಾಣಿಗಳ ದೇಹದಲ್ಲಿ ರೋಗದ ಸೂಕ್ಷ್ಮಾಣುಗಳು ಇರುತ್ತದೆ. ಸೋಂಕು ಹೊಂದಿರುವ ಇಂತಹ ಪ್ರಾಣಿಗಳ ಮೂತ್ರ ವಿಸರ್ಜನೆಯು ನೀರಿನಲ್ಲಿ ಸೇರಿ ರೋಗಾಣುಗಳು ನೀರಿನಲ್ಲಿ ಸೇರಿಕೊಳ್ಳುತ್ತದೆ. ಇಂತಹ ಕಲುಷಿತ ನೀರು ಮನುಷ್ಯರ ದೇಹ ಸಂಪರ್ಕ ಹೊಂದಿದಾಗ, ಶರೀರದಲ್ಲಿ ಇರಬಹುದಾದ ಗಾಯಗಳ ಮೂಲಕ ರೋಗಾಣುಗಳು ದೇಹವನ್ನು ಸೇರಿಕೊಳ್ಳುತ್ತವೆ. ಅಲ್ಲದೆ ಬಾಯಿ, ಮೂಗು ಮತ್ತು ಕಣ್ಣುಗಳ ಒಳಭಾಗದ ಮೂಲಕವೂ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈ ರೋಗಾಣುಗಳು ದೇಹವನ್ನು ಸೇರಿದ 4-19 ದಿನಗಳಲ್ಲಿ ರೋಗ ಲಕ್ಷಣಗಳು ಕಾಣ ಸಿಕೊಳ್ಳುತ್ತದೆ.

ರೋಗ ಲಕ್ಷಣಗಳು: ಜ್ವರ, ಮಾಂಸ ಖಂಡಗಳ ನೋವು, ತಲೆನೋವು ಕಾಣ ಸಿಕೊಳ್ಳುತ್ತದೆ. ವಾಂತಿ ಭೇದಿ ಮತ್ತು ಹೊಟ್ಟೆನೋವು ಕಾಣ ಸಿಕೊಳ್ಳುತ್ತದೆ. ಅಲ್ಲದೆ ಕೆಲವು ರೋಗಿಗಳಲ್ಲಿ (ಸಾಮಾನ್ಯವಾಗಿ 5-10 ಶೇಕಡಾ) ಪಿತ್ತ ಕಾಮಲೆ(ಜಾಂಡಿಸ್)ನ ಲಕ್ಷಣಗಳೂ ಕಂಡುಬರುವ ಸಾಧ್ಯತೆ ಇದೆ. ಬಾಯಿ, ಮೂಗು, ಕಫದಲ್ಲಿ ರಕ್ತಸ್ರಾವವನ್ನು ಕಾಣಬಹುದು. ಮೂತ್ರಪಿಂಡ ಸೋಂಕು ಉಂಟಾಗಬಹುದು, ಇದರಿಂದ ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗಬಹುದು. ಹೃದಯದ ಸೋಂಕು ಉಂಟಾಗಬಹುದು.

ರೋಗ ಗುಣಪಡಿಸಲು ಚಿಕಿತ್ಸೆ: ಕ್ರಮಬದ್ಧವಾದ ಚಿಕಿತ್ಸೆಯಿಂದ ಸಂಪೂರ್ಣಗುಣಪಡಿಸಬಹುದು. ಹೃದಯ, ಶ್ವಾಸಕೋಶ, ಮೂತ್ರಪಿಂಡ ಸೋಂಕು ಬಹಳ ವಿರಳವಾಗಿದ್ದರೂ, ಅವುಗಳಲ್ಲಿ ಸೋಂಕು ಕಾಣ ಸಿಕೊಂಡಲ್ಲಿ ತೀವ್ರ ವಿಳಂಬ ಚಿಕಿತ್ಸೆಯಿಂದ ದುಷ್ಪರಿಣಾಮ ಉಂಟಾಗುತ್ತದೆ. ಶೀಘ್ರ ರೋಗ ಪತ್ತೆ ಹಾಗೂ ಕ್ರಮ ಬದ್ಧ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ರೋಗಿಯನ್ನು ಇತರರಿಂದ ಪ್ರತ್ಯೇಕಿಸುವ ಅಗ್ಯತವಿಲ್ಲ. ಈ ಸೋಂಕು ರೋಗಿಯಿಂದ ಆರೋಗ್ಯವಂತ ವ್ಯಕ್ತಿಗಳಿಗೆ ಹರಡುವುದಿಲ್ಲ.

ಮುಂಜಾಗ್ರತಾ ಕ್ರಮಗಳು: ನೀರಿನ ಸಂರಕ್ಷಣೆ ಅತಿ ಅಗತ್ಯವಾಗಿದ್ದು ಸ್ನಾನ ಮತ್ತು ಕುಡಿಯಲು ಉಪಯೋಗಿಸುವ ನೀರಿನಲ್ಲಿ ಪ್ರಾಣ ಗಳ ಮೂತ್ರ ಸೇರದಂತೆ ನೀರಿನ ಶೇಕರಣಾ ತೊಟ್ಟಿಗಳಿಗೆ ಭದ್ರವಾಗಿ ಮುಚ್ಚಳವನ್ನು ಏರ್ಪಡಿಸಬೇಕು. ಸಾಕು ಪ್ರಾಣ ಹಾಗು ಕಾಡು ಪ್ರಾಣ ಗಳಲ್ಲಿ ಈ ರೋಗ ಹರಡುವ ರೋಗಾಣುಗಳು ಇರುವ ಸಾಧ್ಯತೆ ಇರುವುದರಿಂದ ಕೊಳ, ಹೊಂಡ ಹಾಗು ನಿಂತ ನೀರಲ್ಲಿ ಸ್ನಾನ ಮಾಡಬಾರದು ಹಾಗು ಸೇವಿಸದಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳು ಹಣ್ಣು ತರಕಾರಿ ಇತ್ಯಾದಿಗಳು ಇಲಿಗಳಿಗೆ ಸಿಗದಂತೆ ದಾಸ್ತಾನು ಮಾಡಬೇಕು.

ಮನೆ, ಗೋದಾಮು, ಅಂಗಡಿ ಚರಂಡಿ ಮತ್ತು ಹೊಲಗದ್ದೆ ಪರಿಸರದಲ್ಲಿ ಇಲಿಗಳು ವಾಸ ಮಾಡದಂತೆ ಹಾಗೂ ಸಂತಾನ ವೃದ್ಧಿಯಾಗದಂತೆ ಬಿಲ, ಕಿಂಡಿಗಳನ್ನು ಮುಚ್ಚಬೇಕು. ಪರಿಸರ ನೈರ್ಮಲ್ಯದಿಂದ ರೋಗ ಹರಡುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಇಂತಹ ಪ್ರಾಣಿಗಳು ಇರಬಹುದಾದ ವಾಸಸ್ಥಳಗಳಲ್ಲಿ ಬರಿಗಾಲಲ್ಲಿ ಓಡಾಡದೆ ಚಪ್ಪಲಿ ಧರಿಸಿ ನಡೆಯುವುದು. ಈ ರೋಗದ ವಿರುದ್ಧ ಉತ್ಪತ್ತಿಯಾಗುವ ರೋಗ ನೀರೋಧಕವನ್ನು (ಆ್ಯಂಟಿಬಾಡಿ) ಪರೀಕ್ಷಿಸುವ ಟೆಸ್ಟ್ ಕಿಟ್‌ಗಳು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿ ಮತ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರ, ಆಸ್ಪತ್ರೆಗಳ ವೈದ್ಯಾಧಿಕಾರಿಗಳ ಸಲಹೆ ಪಡೆಯಿರಿ. ಜಿಲ್ಲೆಯ ಎಲ್ಲಾ ಆಸ್ಪತ್ರೆ, ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಮಾಡಲಾಗಿದೆ. ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ ಈ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104 ಅಥವಾ 08272-225443 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು