ಹೊಳೆನಸೀಪುರ: ಪಟ್ಟಣದಲ್ಲಿ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕಾಗಿ ಮತ್ತು ನಾನಾ ಉಪವಿಭಾಗೀಯ ಕಚೇರಿಗಳ ಕಟ್ಟಡ ಉದ್ಘಾಟನೆಯನ್ನು ಶಾಸಕ ಎಚ್.ಡಿ.ರೇವಣ್ಣ ನೆರವೇರಿಸಿದರು.
ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪಕ್ಕದಲ್ಲಿ ೫ ಕೋಟಿ ವೆಚ್ಚದಲ್ಲಿ ೫೦೦ ವಿದ್ಯಾರ್ಥಿಗಳ ವಸತಿ ಅನುಕೂಲತೆಗಾಗಿ ಶುಕ್ರವಾರ ಬಿಸಿಎಂ ಮೆಟ್ರಿಕ್ನಂತರದ ಮಹಿಳಾ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು. ಅರಕಲಗೂಡು ರಸ್ತೆಯ ಪಿಡ್ಬ್ಲೂಡಿ ಇಲಾಖೆ ಆವರಣದಲ್ಲಿ ೪ಕೋಟಿ ರೂ ವೆಚ್ಚದಲ್ಲಿ ಲೋಕೋಪಯೋಗಿ ವಿಶೇಷ ಉಪವಿಭಾಗೀಯ ಕಚೇರಿ ಮತ್ತು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗೀಯ ಕಚೇರಿ ಉದ್ಘಾಟಿಸಿದರು.
ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮಹಿಳಾ ವಿದ್ಯಾರ್ಥಿ ನಿಲಯದ ೨ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ೫ ಕೋಟಿ ರೂ ಅಂದಾಜು ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆರಡು ಅಂತಸ್ತು ನಿರ್ಮಾಣಕ್ಕಾಗಿ ಅನುದಾನ ತರಲಾಗುವುದು. ಇದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸುಸಜ್ಜಿತವಾದ ೪ ಅಂತಸ್ತಿನ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಿದಂತಾಗುತ್ತದೆ ಎಂದರು.
ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಕಾರ್ಯಪಾಲಕ ಅಭಿಯಂತ ಹೇಮಂತ್, ಬಿಸಿಎಂ ವಿಸ್ತರಣಾಧಿಕಾರಿ ಮಂಜುನಾಥ್ ಹಾಗೂ ಸಹಾಯಕ ತಾಂತ್ರಿಕ ಅಭಿಯಂತರು ಹಾಜರಿದ್ದರು.