ಹಾಸನ: ಒಂದೇ ಡ್ರಿಪ್ ಸೆಟ್ನ್ನು ಮೂರ್ನಾಲ್ಕು ರೋಗಿಗಳಿಗೆ ಹಾಕುತ್ತಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಜಾವಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ.
ಒಂದು ಸೂಜಿಯನ್ನು ಮತ್ತೊಬ್ಬರಿಗೆ ಹಾಕಬಾರದು. ಹಾಗೆ ಸೂಜಿ ಚುಚ್ಚಿದರೆ ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡುವ ಸಾಧ್ಯತೆಯಿರುತ್ತದೆ ಎಂದು ತಿಳಿದಿದ್ದರೂ ಸರ್ಕಾರಿ ಆಸ್ಪತ್ರೆಯ ಕಾಂಪೌ ಂಡರ್ ಒಂದೇ ಡ್ರಿಪ್ ಸೆಟ್ನ್ನು ಮೂರು ಜನರಿಗೆ ಹಾಕಿ ನಿರ್ಲಕ್ಷ್ಯ ತೋರಿದ್ದಾರೆ. ಈ ಕುರಿತಂತೆ ರೋಗಿಯೊಬ್ಬರ ಸಂಬಂಧಿಕ ರೊಂದಿಗೆ ಕಾಂಪೌಂಡರ್ ಮಾತನಾಡುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಒಂದು ಡ್ರಿಪ್ ಸೆಟ್ ಸೂಜಿಯನ್ನು ಮೂರು ರೋಗಿಗಳಿಗೆ ಹಾಕ್ತೇವೆ. ಒಂದು ಗ್ಲೂಕೋಸ್ ಹಾಕೋದಕ್ಕೆ ೫೦ ರೂ. ತೆಗೆದುಕೊಳ್ಳುತ್ತೇವೆ. ವೈದ್ಯರೇ ಈ ರೀತಿ ಮಾಡು ಎಂದು ಹೇಳಿದ್ದಾರೆ ಎಂದು ಕಾಂಪೌಂಡರ್ ವೀಡಿಯೋದಲ್ಲಿ ಹೇಳಿದ್ದಾರೆ.
ಇದೀಗ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕಾರ್ಯವೈಖರಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.