ಚಾಮರಾಜನಗರ: ಮೆಡಿಕಲ್ ಕಾಲೇಜಿನ ಕಣ್ಣಿನ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್ವರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಮ್ಸ್) ನರ್ಸಿಂಗ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಸಂಸ್ಥೆಯ ಜಿಲ್ಲಾ ಸರ್ಜನ್ ಮತ್ತು ಡೀನ್ಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿದ್ದು, ಯುವತಿ ದೂರು ನೀಡಿರುವುದನ್ನು ಅಧಿಕಾರಿಗಳಿಬ್ಬರೂ ಖಚಿತಪಡಿಸಿದ್ದಾರೆ. ಅಲ್ಪಾವಧಿಯ ನರ್ಸಿಂಗ್ ತರಬೇತಿಗಾಗಿ ಎನ್ಜಿಒವೊಂದರ ಮೂಲಕ ಅವರು ಸಿಮ್ಸಗೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೆಡಿಕಲ್ ಕಾಲೇಜು ಬೋಧನಾ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಲೈಂಗಿಕ ಕಿರುಕುಳ ನೀಡಲು ಯತ್ನಿಸಿ, ಅಶ್ಲೀಲವಾಗಿ ವರ್ತಿಸಿದರು. ವೈದ್ಯರು ಎಳೆದಾಡಿದ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕಿರುಚಿದಾಗ, ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ಇತರರು ಧಾವಿಸಿ ಆಕೆಯನ್ನು ರಕ್ಷಿಸಿದರು. ಎಲ್ಲರೂ ಸೇರಿ ವೈದ್ಯರಿಗೆ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ್, ತಮಗೆ ದೂರು ಬಂದಿದೆ. ತಕ್ಷಣವೇ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಗ್ರಾಮಾಂತರ ಪೊಲೀಸರ ಸಹಾಯವನ್ನೂ ಪಡೆದಿದ್ದೇವೆ. ಸಮಿತಿಯು ದೂರಿನ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲಿದೆ. ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.